ದುರ್ಬಲ ವರ್ಗದವರ ಆಶಾ ಜ್ಯೋತಿ ದೇವರಾಜ ಅರಸು- ಸಂಗಣ್ಣ ಕರಡಿ

ಬಹುಸಂಖ್ಯಾತರ ವಿರೋಧವನ್ನು ಲೆಕ್ಕಿಸದೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುತ್ತಿದ್ದ ದಿವಂಗತ ಡಿ. ದೇವರಾಜ ಅರಸು ಅವರು ದುರ್ಬಲ ವರ್ಗದವರ ಆಶಾಜ್ಯೋತಿಯಾಗಿದ್ದರು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದರು.
     ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ದೇವರಾಜ ಅರಸು ಅವರ ೯೭ ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ದೇವರಾಜ ಅರಸು ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದು, ಸಾಹಿತ್ಯ, ಶೈಕ್ಷಣಿಕ, ಸಹಕಾರಿ ಕ್ಷೇತ್ರಗಳ ಸಾಹಿತ್ಯವನ್ನು ಓದಿ, ಅರ್ಥೈಸಿಕೊಂಡು ರಾಜಕೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿದವರು.  ಉಳುವವನ ಸಂಕಷ್ಟವನ್ನು ಆಳುವ ಸಂದರ್ಭದಲ್ಲಿ ಪರಿಹರಿಸಲು, ಎಷ್ಟೇ ವಿರೋಧವನ್ನೆದುರಿಸದರೂ, ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದರ ಮೂಲಕ  “ಉಳುವವನೇ ಭೂಮಿಯ ಒಡೆಯ” ಆಗುವಂತಹ ಭೂ-ಸುಧಾರಣೆ ಕಾನೂನನ್ನು ಜಾರಿಗೆ ತಂದು ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾಗಿದ್ದಾರೆ.  ರಾಜಕೀಯ ವ್ಯವಸ್ಥೆಯಲ್ಲಿ ಬೇರು ಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನೇ ಧಿಕ್ಕರಿಸಿ, ದಿಟ್ಟ ನಿರ್ಧಾರಗಳನ್ನು ಕೈಗೊಂಡ ಅವರು ಹಿಂದುಳಿದ ವರ್ಗಗಳು, ದುರ್ಬಲರಿಗೆ ರಾಜಕೀಯ ಹಕ್ಕಿನ ನೆಲೆಯನ್ನು ಒದಗಿಸಿ, ಉನ್ನತ ಸ್ಥಾನಮಾನ ಹಾಗೂ ರಾಜಕೀಯ ಜಾಗೃತಿ ಮೂಡಿಸಿದಂಹ ಮಹಾನ್ ವ್ಯಕ್ತಿ ಅರಸು ಅವರು.  ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಹಾಗೂ ಗ್ರಾಮೀಣ ಭಾಗದಲ್ಲಿ ಬಡ ಕೂಲಿಕಾರ್ಮಿಕರ ಬದುಕನ್ನು ಹಸನಾಗಿಸಲು ಅವರು ಹಾಕಿಕೊಟ್ಟಂತಹ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿಯುವಂತಹದು.  ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಕ್ಷೇತ್ರದಲ್ಲಿ ದೇವರಾಜ ಅರಸು ಅವರದು ಅಚ್ಚಳಿಯದ ಹೆಸರಾಗಿದೆ.  ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯನ್ನು ತುಂಬುವಂತಹ ಕೆಲಸವಾಗಬೇಕು ಎಂದರು.
     ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಜಾರಿಗೆ ಬರುವುದು ಬಾಕಿ ಉಳಿದಿದ್ದು, ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿ ಬಗ್ಗೆ ಇನ್ನೆರಡು ತಿಂಗಳಲ್ಲಿ ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.  ಖಾಸಗಿ ಸಹಭಾಗಿತ್ವದಲ್ಲಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗುವ ವಿಶ್ವಾಸವಿದೆ. ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲಾ ಕ್ರೀಡಾಂಗಣ ಸಿದ್ಧವಾಗಲಿದ್ದು.  ಈಗಾಗಲೆ ಈಜುಕೊಳ, ಅತ್ಯುತ್ತಮ ಟ್ರ್ಯಾಕ್ ಒಳಗೊಂಡಂತೆ ಆಧುನಿಕ ವ್ಯವಸ್ಥೆಗಳು ಕ್ರೀಡಾಂಗಣಕ್ಕೆ ಲಭ್ಯವಾಗುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಅನುದಾನ ಒದಗಿಸಿದೆ.  ನಗರದ ಹುಲಿಕೆರೆ ಅತ್ಯುತ್ತಮ ಪ್ರವಾಸಿ ತಾಣವಾಗಲಿದ್ದು, ಈಗಾಗಲೆ ಸರ್ಕಾರ ಇದಕ್ಕೆ ಅನುದಾನ ಬಿಡುಗಡೆ ಮಾಡಿದೆ.  ಅಲ್ಲದೆ ಕೊಪ್ಪಳ ನಗರದಲ್ಲಿ ಅಲ್ಲಲ್ಲಿ ಉದ್ಯಾನವನ ನಿರ್ಮಾಣಕ್ಕೆ ೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕಾಗಿದ್ದು, ಇಲ್ಲಿನ ಕಾರ್ಖಾನೆಗಳಲ್ಲಿ ನಿಯಮಗಳನುಸಾರ ಸ್ಥಳೀಯರಿಗೆ ಉದ್ಯೋಗ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರುಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.  ನಿರುದ್ಯೋಗ ಸಮಸ್ಯೆ ಸಮಾಜದಲ್ಲಿ ಅಶಾಂತಿ ಹೆಚ್ಚಿಸಲು ಕಾರಣವಾಗಲಿದೆ ಎಂದು ಶಾಸಕ ಸಂಗಣ್ಣ ಕರಡಿ ಅವರು ಹೇಳಿದರು.
     ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಜನರ ಬೇಡಿಕೆ ಹಾಗೂ ಕುಂದುಕೊರತೆಗಳಿಗೆ ಸ್ಪಂದಿಸುವವನೇ ನಿಜವಾದ ರಾಜಕಾರಣಿ, ಈ ದಿಸೆಯಲ್ಲಿ ದೇವರಾಜ ಅರಸು ಅವರು ಎಲ್ಲ ರಾಜಕಾರಣಿಗಳಿಗೂ ಆದರ್ಶಪ್ರಾಯ.  ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳು, ಪ.ಜಾತಿ, ಪ.ವರ್ಗ ಸೇರಿದಂತೆ ಎಲ್ಲ ದುರ್ಬಲ ವರ್ಗಗಳ ಸ್ಥಿತಿಗತಿಗಳನ್ನು ಅರಿತು ಎಲ್.ಜಿ. ಹಾವನೂರು ಅವರ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು, ದುರ್ಬಲವರ್ಗದವರಿಗೆ ಮೀಸಲಾತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಈ ಮೂಲಕ ಹಿಂದುಳಿದ ವರ್ಗದವರರನ್ನು ಮುಖ್ಯ ವಾಹಿನಿಗೆ ಸೇರಿಸುವಂತಹ ಮಹತ್ವದ ಕಾರ್ಯವನ್ನು ಅರಸು ಅವರು ಕೈಗೊಂಡರು ಎಂದರು.
     ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಳಾರ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಸದಸ್ಯ ರಾಘವೇಂದ್ರ ಹಿಟ್ನಾಳ್, ನಗರಸಭೆ ಸದಸ್ಯ ಗವಿಸಿದ್ದಪ್ಪ ಮುಂಡರಗಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,  ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ. ಮಲ್ಲಿಕಾ ಘಂಟಿ ಅವರು ದೇವರಾಜ ಅರಸು ಅವರ ಹಿನ್ನೆಲೆ, ದೂರದೃಷ್ಟಿಯ ಚಿಂತನೆ, ಅಂದಿನ ಹಾಗೂ ಇತ್ತೀಚಿನ ರಾಜಕೀಯ ವ್ಯವಸ್ಥೆ ಕುರಿತು ವಿಶೇಷ ಉಪನ್ಯಾಸ ನೀಡಿದರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್ ಅವರು ಸ್ವಾಗತಿಸಿದರು. ವಿನಯಕುಮಾರ್ ವಂದಿಸಿದರು, ಶ್ರೀನಿವಾಸ್ ನಿರೂಪಿಸಿದರು.  ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  ಅಲ್ಲದೆ ದೇವರಾಜ ಅರಸು ಜನ್ಮದಿನಾಚರಣೆ ಅಂಗವಾಗಿ ತಳಕಲ್‌ನಲ್ಲಿ ಏರ್ಪಡಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 
     ಸಮಾರಂಭಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ಶ್ರೀ ಗವಿಸಿದ್ದೇಶ್ವರ ಕ್ರೀಡಾಂಗಣದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.

Please follow and like us:
error

Related posts

Leave a Comment