fbpx

ಆರೋಗ್ಯ ಇಲಾಖೆಯೊಂದಿಗೆ ಸಮುದಾಯ ಕೈಜೋಡಿಸುವುದು ಅಗತ್ಯ : ಡಾ. ಮಹದೇವಸ್ವಾಮಿ

ರೋಗಗಳ ನಿಯಂತ್ರಣದಲ್ಲಿ 
ಕೊಪ್ಪಳ ಡಿ. ೨೦  : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಮುದಾಯವೂ ಸಹ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಹೇಳಿದರು.
  ವಾರ್ತಾ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕುಕನೂರಿನ ಶ್ರೀ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯವರ ಸಹಯೋಗದೊಂದಿಗೆ ಕಿರಿಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಮುದಾಯದ ಪಾತ್ರ’ ಕುರಿತ ವಿಚಾರಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಉತ್ತಮ ನೈರ್ಮಲ್ಯ ಕಾಪಾಡಿಕೊಂಡು ಬರುವ ಹೊಣೆ ಕೇವಲ ಸಂಬಂಧಪಟ್ಟ ಇಲಾಖೆಗಳಿಗೆ ಮಾತ್ರ ಸೀಮಿತವಲ್ಲ.  ಈ ದಿಸೆಯಲ್ಲಿ ಸಮುದಾಯವೂ ಸಹ ಆಯಾ ಇಲಾಖೆಯವರೊಂದಿಗೆ ಕೈ ಜೋಡಿಸುವುದಲ್ಲದೆ, ಇದಕ್ಕಾಗಿ ಸಹಕರಿಸಬೇಕಾದ್ದು ಅವರ ಕರ್ತವ್ಯವಾಗಿದೆ.  ಸೊಳ್ಳೆಗಳಿಂದ ಹರಡುವ ವಿವಿಧ ಬಗೆಯ ರೋಗಗಳೇ ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿಯಾಗಿದ್ದು, ಡೆಂಗ್ಯೂ ಜ್ವರ ದಂತಹ ಪ್ರಾಣಘಾತುಕ ರೋಗ, ಚಿಕೂನ್‌ಗುನ್ಯಾ, ಮೆದುಳುಜ್ವರ ಮುಂತಾದ ಅಪಾಯಕಾರಿ ರೋಗಗಳು ಸೊಳ್ಳೆಗಳ ಕಚ್ಚುವಿಕೆಯಿಂದಲೇ ಬರುತ್ತವೆ. ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ, ಸೊಳ್ಳೆಗಳ ನಿರ್ಮೂಲನೆ ಕೈಗೊಳ್ಳಬೇಕು.  ಅದೇ ರೀತಿ ಕಲುಷಿತ ನೀರು, ಕಲುಷಿತ ವಾತಾವರಣದಿಂದ ಹರಡುವ ರೋಗಗಳನ್ನು ಸಹ ತಡೆಗಟ್ಟುವಲ್ಲಿ ಸಮುದಾಯದ ಪಾತ್ರವೇ ಪ್ರಮುಖವಾಗಿದೆ.  ಕುಡಿಯುವ ನೀರು ಕಲುಷಿತವಾಗದಂತೆ ಅಥವಾ ಕಲುಷಿತಗೊಳ್ಳುತ್ತಿರುವ ಬಗ್ಗೆ ಮಾಹಿತಿ ಇದ್ದಲ್ಲಿ, ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ಸಹ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.  ಪ್ರಜ್ಞಾವಂತ ನಾಗರೀಕರೆನಿಸಿಕೊಂಡವರು, ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವುದು ಸರಿಯಲ್ಲ.  ರೋಗಕ್ಕೆ ಚಿಕಿತ್ಸೆ ನೀಡುವುದು ಆರೋಗ್ಯ ಇಲಾಖೆಯ ಕರ್ತವ್ಯವಾದರೆ, ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದು ಸಮುದಾಯದ ಹೊಣೆಯಾಗಿದೆ.  ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನರಿತು ನಡೆದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವುದು ಸುಲಭ ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಯಲಬುರ್ಗಾ ತಾಲೂಕು ವೈದ್ಯಾಧಿಕಾರಿ ಡಾ. ಪ್ರಶಾಂತಬಾಬು ಅವರು, ಸಾಂಕ್ರಾಮಿಕ ರೋಗಗಳ ಪೈಕಿ ಅತಿ ಹೆಚ್ಚಿನ ರೋಗಗಳಿಗೆ ಸೊಳ್ಳೆಗಳೆ ಮೂಲ ವಾಹಕಗಳಾಗಿವೆ.  ಸೊಳ್ಳೆಗಳ ನಿಯಂತ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಸಿಂಪರಣೆ ಔಷಧಿಗಳು, ಈಗೀಗ ಸೊಳ್ಳೆಗಳ ನಾಶಕ್ಕೆ ವಿಫಲವಾಗುತ್ತಿವೆ.  ಇವುಗಳನ್ನು ಕೊಲ್ಲಲು ಪ್ರಯತ್ನಪಡುವುದಕ್ಕಿಂತ, ಇವುಗಳ ಮೂಲವನ್ನು ನಾಶಪಡಿಸುವುದು ಅತ್ಯಂತ ಅಗತ್ಯವಾಗಿದೆ.  ಆನೆಕಾಲು ಮತ್ತು ಮೆದುಳು ಜ್ವರ ಬರಲು ಕ್ಯುಲೆಕ್ಸ್ ಎಂಬ ಹೆಣ್ಣು ಸೊಳ್ಳೆ ಕಾರಣವಾದರೆ, ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ರೋಗಗಳು ಈಡಿಸ್ ಈಜಿಫ್ಟಿಯಾ ಎಂಬ ವಿಶೇಷ ಬಗೆಯ ಸೊಳ್ಳೆಯಿಂದ ಹರಡುತ್ತದೆ.  ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ, ಈ ಬಗ್ಗೆ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.  ಮನೆಯಲ್ಲಿ ಸಂಗ್ರಹಿಸುವ ನೀರು, ಹೂಕುಂಡ, ಏರ್‌ಕೂಲರ್, ತೆರೆದ ನೀರಿನ ತೊಟ್ಟಿಗಳು ಈ ಸೊಳ್ಳೆ ಉತ್ಪತ್ತಿ ತಾಣಗಳಾಗಿರುತ್ತವೆ.  ಇವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಒಣಗಿಸಿ, ಪುನಃ ನೀರು ಸಂಗ್ರಹಿಸುವುದರಿಂದ, ಈ ಸೊಳ್ಳೆ ಹಾಗೂ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್, ಕುಕನೂರಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಗಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಹೆಚ್. ಮಾದರ್, ಗಣ್ಯರಾದ ರವಿತೇಜ ಅಬ್ಬಿಗೇರಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಶ್ರೀ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆ ಕಿರಿಯ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಪಿ. ಮುರಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೈದ್ಯಾಧಿಕಾರಿ ಎಸ್.ಸಿ. ಹಿರೇಮಠ, ಆರೋಗ್ಯ ಇಲಾಖೆಯವರು ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರುಗಳು ಉಪಸ್ಥಿತರಿದ್ದರು.  ಉಪನ್ಯಾಸಕ ಆರ್.ಪಿ. ರಾಜೂರ ಸ್ವಾಗತಿಸಿದರು, ವಿದ್ಯಾರ್ಥಿನಿ ಅನಘ ಕುಲಕರ್ಣಿ ಪ್ರಾರ್ಥಿಸಿದರು, ಎನ್. ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕ ಹೆಚ್.ಬಿ. ಹಳೇಗೌಡರ್ ಕೊನೆಯಲ್ಲಿ ವಂದಿಸಿದರು.
Please follow and like us:
error

Leave a Reply

error: Content is protected !!