ಕೊಪ್ಪಳ ಜ.೨೧ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯಲ್ಲಿ ಫಲಿತಾಂಶದ ಮಟ್ಟ ಸುಧಾರಿಸಲು ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರನ್ನೂ ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಇಂಡಿಯಾ ಎಜುಕೇಟ್ ಟ್ರಸ್ಟ್ ಹಾಗೂ ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಇವರ ಸಹಭಾಗಿತ್ವದಲ್ಲಿ ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಸಕ್ತ ವರ್ಷದ ೧೦ನೇ ತರಗತಿ ಫಲಿತಾಂಶ ಹೆಚ್ಚಿಸುವ ಜಿಲ್ಲಾ ಮಟ್ಟದ ಪ್ರೌಢಶಾಲಾ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ದೇಶದ ಅಭಿವೃದ್ಧಿ ರೂಪುಗೊಳ್ಳುವುದು ಶಾಲಾ ತರಗತಿಯ ಒಳಗೆ ಎಂದು ಹೇಳಲಾಗುತ್ತದೆ. ಶಿಕ್ಷಕರು ಇದನ್ನರಿತುಕೊಂಡು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಮನೋಬಲ ಹೆಚ್ಚಿಸುವಂತಹ ಕ್ರಮಗಳನ್ನು ಅನುಸರಿಸಬೇಕು. ಕೊಪ್ಪಳದಲ್ಲಿ ವಿಜ್ಞಾನ ಭವನಕ್ಕೆ ಅಗತ್ಯವಿರುವ ೦೧ ಕೋಟಿ ರೂ. ಅನುದಾನ ಒದಗಿಸಲು ಸರ್ಕಾರ ಭರವಸೆ ನೀಡಿದೆ. ಅದೇ ರೀತಿ ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕೊಪ್ಪಳಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಯತ್ನಿಸಲಾಗುತ್ತಿದೆ ಎಂದರು.
ಸರ್ಕಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಮಾತನಾಡಿ, ಫಲಿತಾಂಶ ಸುಧಾರಣೆಗಾಗಿ ಈಗಾಗಲೆ ಜಿಲ್ಲೆಯಲ್ಲಿ ೦೩ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಆತ್ಮಾಭಿಮಾನಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ. ವಿಷಯವಾರು ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದು, ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ನೀಡಿದಲ್ಲಿ ಫಲಿತಾಂಶ ಸುಧಾರಣೆ ಖಂಡಿತ ಸಾಧ್ಯವಾಗಲಿದೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ, ಮಕ್ಕಳಿಗೆ ದ್ರೋಹ ಎಸಗಿದಂತಾಗುತ್ತದೆ. ಸರ್ಕಾರವೂ ಸಹ ಶಿಕ್ಷಕರನ್ನು ಪಾಠದ ಕರ್ತವ್ಯಕ್ಕೆ ಮಾತ್ರ ಸೀಮಿತಗೊಳಿಸುವಂತೆ ಮನವಿ ಮಾಡಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಕುರಿ ಅವರು ಮಾತನಾಡಿ, ಶಿಕ್ಷಕರು ತಮ್ಮ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬದಿಗಿರಿಸಿ, ಫಲಿತಾಂಶ ಸುಧಾರಣೆಗೆ ಶ್ರಮಿಸುವಂತೆ ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿಂಡಿಯಾ ಕಂಪನಿಯ ಪ್ರತಿನಿಧಿ ರವೀಂದ್ರ ದೇಸಾಯಿ, ಪ್ರಾಚಾರ್ಯ ರಾಜೂರ್, ಹಾಲೇಶ್ ಕಂದಾರಿ, ಪಂಡಿತ್ ಯಲ್ಲಪ್ಪ, ಚಿತ್ರದುರ್ಗ, ಬೆಂಗಳೂರು ಮುಂತಾದ ಜಿಲ್ಲೆಗಳಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಸ್ವಾಗತಿಸಿದರು, ಬಸವರಾಜ ದೊಡ್ಡಮನಿ ವಂದಿಸಿದರು. ಸದಾಶಿವ ಪಾಟೀಲ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಮುಂತಾದ ಗಣ್ಯರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
Please follow and like us: