ಮಧ್ಯಸ್ಥಿಕೆ ವ್ಯವಸ್ಥೆಯಿಂದ ಸಾಮರಸ್ಯ ವೃದ್ಧಿಗೆ ಸಹಕಾರಿ- ಶ್ರೀಕಾಂತ ಬಬಲಾದಿ

 : ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳನ್ನು ಮಧ್ಯಸ್ಥಿಕೆ ವ್ಯವಸ್ಥೆಗೆ ಶಿಫಾರಸು ಮಾಡಿದಲ್ಲಿ, ಅಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬಹುದಾಗಿದೆ ಅಲ್ಲದೆ, ಇದರಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಹೇಳಿದರು.
     ಮಧ್ಯಸ್ಥಿಕಾ ಕೇಂದ್ರ ಬೆಂಗಳೂರು, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಬಾರ್ ಅಸೋಸಿಯೇಷನ್ ಮತ್ತು ಜಿಲ್ಲಾ ಪಂಚಾಯತಿ ಇವರ ಸಂಯುಕ್ತ ಆಶ್ರಯದೊಂದಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಕೀಲರಿಗಾಗಿ ಏರ್ಪಡಿಸಲಾಗಿದ್ದ ಮಧ್ಯಸ್ಥಿಕಾ ವ್ಯವಸ್ಥೆಯ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಸಮಾಜದಲ್ಲಿ ದಿನನಿತ್ಯ ಕಂಡುಬರುವ ಬಹುತೇಕ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿದೆ.  ಕೌರವರು ಮತ್ತು ಪಾಂಡವರ ನಡುವೆ ಶ್ರೀಕೃಷ್ಣ ರಾಜಿ ಸಂಧಾನ ಮಾಡಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದನಾದರೂ, ಅದು ವಿಫಲವಾಗಿದ್ದರಿಂದಲೇ, ಕುರುಕ್ಷೇತ್ರ ಯುದ್ಧ ನಡೆದು, ಸಾವು-ನೋವಿಗೆ ಕಾರಣವಾಯಿತು ಎಂಬುದನ್ನು ಮಹಾಭಾರತದಲ್ಲಿ ಹೇಳಲಾಗಿದೆ.  ಅಂದರೆ ರಾಜಿ-ಸಂಧಾನಕ್ಕೆ ಅಷ್ಟೊಂದು ಮಹತ್ವವಿದೆ.  ಇದೀಗ ಕೆಳಹಂತದ ನ್ಯಾಯಾಲಯದಿಂದ ಮೊದಲುಗೊಂಡು ಸರ್ವೋಚ್ಛ ನ್ಯಾಯಾಲಯದವರೆಗೂ ಮಧ್ಯಸ್ಥಿಕಾ ವ್ಯವಸ್ಥೆ ಜಾರಿಯಲ್ಲಿದ್ದು, ಬಹಳಷ್ಟು ಪ್ರಕರಣಗಳನ್ನು ಮಧ್ಯಸ್ಥಿಕಾ ವ್ಯವಸ್ಥೆಯಡಿ ಇತ್ಯರ್ಥಗೊಳಿಸಲು ಅವಕಾಶ ಕಲ್ಪಿಸಲಾಗುತ್ತಿದೆ.  ಮಧ್ಯಸ್ಥಿಕಾ ವ್ಯವಸ್ಥೆಗೆ ಪ್ರಕರಣಗಳ ಶಿಫಾರಸು ಮಾಡಿದಲ್ಲಿ, ವಕೀಲರುಗಳಿಗೆ ಕೇಸ್‌ಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂಬ ತಪ್ಪು ಕಲ್ಪನೆ ಇದೆ.  ಆದರೆ, ಬಹಳಷ್ಟು ಜನ ಪ್ರಕರಣಗಳ ವಿಳಂಬ ವಿಲೇವಾರಿ ಕಾರಣದಿಂದಲೇ, ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲು ಹಿಂಜರಿಯುವಂತಹ ಸ್ಥಿತಿ ಇದ್ದು, ಮಧ್ಯಸ್ಥಿಕಾ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾದಲ್ಲಿ, ಹೆಚ್ಚು, ಹೆಚ್ಚು ಜನ ಇಂತಹ ವಕೀಲರ ಬಳಿಯೇ ಪ್ರಕರಣಗಳ ಇತ್ಯರ್ಥಕ್ಕೆ ಆಸಕ್ತಿ ವಹಿಸುತ್ತಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಹೇಳಿದರು.
     ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಮಾತನಾಡಿ, ಸಾಮಾಜಿಕ ಚಿಂತನೆಯಲ್ಲಿ ಮಧ್ಯಸ್ಥಿಕೆ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಿದೆ. ನ್ಯಾಯಾಲಯಗಳಿಗೆ ಬರುವ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ರಾಜಿ ಸಂಧಾನದಡಿ ಇತ್ಯರ್ಥ ಪಡಿಸುವ ವ್ಯವಸ್ಥೆಯು ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ ಕ್ಷೇತ್ರಗಳಿಗೂ ಪ್ರಸ್ತುತವಾಗಿದೆ.  ಲೋಕಅದಾಲತ್ ಮತ್ತು ಮಧ್ಯಸ್ಥಿಕಾ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾದಲ್ಲಿ, ಜನರಿಗೆ ಮತ್ತು ಕಕ್ಷಿದಾರರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಇನ್ನಷ್ಟು ವಿಶ್ವಾಸ ಬರಲು ಸಾಧ್ಯವಾಗಲಿದೆ ಎಂದರು.
     ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ಚೆಗರೆಡ್ಡಿ, ಸಿವಿಲ್ ನ್ಯಾಯಾಧೀಶರಾದ ಕಾವೇರಿ, ಪುನಶ್ಚೇತನಾ ತರಬೇತಿ ಕಾರ್ಯಾಗಾರಕ್ಕೆ ಆಗಮಿಸಿದ್ದ ಮಾಸ್ಟರ್ ಟ್ರೇನರ್‌ಗಳಾದ ವಿಜಯಕುಮಾರ್, ಜಿ.ವಿ. ಚಂದ್ರಶೇಖರ್, ಎಂ. ಜ್ಯೋತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ವಕೀಲರುಗಳು ಭಾಗವಹಿಸಿದ್ದರು.  ಸಮಾರಂಭದಲ್ಲಿ ಮಾಲಾರ್ಪಣೆ ಮೂಲಕ ಗಣ್ಯರನ್ನು ಸ್ವಾಗತಿಸುವ ಬದಲಾಗಿ, ಗಿಡಗಳನ್ನು ವಿತರಣೆ ಮಾಡುವ ಮೂಲಕ ಸ್ವಾಗತ ಕಾರ್ಯಕ್ರಮ ನೆರವೇರಿಸಿದ್ದು, ವಿಶೇಷವಾಗಿದ್ದು, ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಶ್ರೀಕಾಂತ ದಾ ಬಬಲಾದಿ ಅವರ ಈ ನೂತನ ಚಿಂತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Please follow and like us:
error