ಸಮಾಜದ ಸಂಘಟನೆಗೆ ಜಾತ್ಯಾತೀತ ನಿಲುವು ಅವಶ್ಯಕ-ವೆಂಕಟರಾವ್ ಘೋರ್ಪಡೆ

ಕೊಪ್ಪಳ. ಯಾವುದೇ ಸಮಾಜದ ಸಂಘಟನೆ ಪ್ರಬಲವಾಗಿ ಬೆಳೆಯಲು ಜಾತ್ಯಾತೀತ ನಿಲುವು ಅವಶ್ಯಕವಾಗಿದೆ ಎಂದು ಕಾಂಗ್ರೆಸ್ ಮುಖಂಡ ವೆಂಕಟರಾವ್ ಘೋರ್ಪಡೆ ಹೇಳಿದರು.

ಅವರು ಭಾನುವಾರ ನಗರದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಮರಾಠ ಸಂಘ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಕ್ಷತ್ರೀಯ ಮರಾಠ ಸಂಘಟನಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಮರಾಠ ಜನಾಂಗದ ನಾಯಕ ಶಿವಾಜಿ ತನ್ನ ಬುದ್ದಿಮತ್ತೆಯಿಂದ ಸುಸಜ್ಜಿತ ಸಂಘಟನೆಯನ್ನು ಕಟ್ಟಿದರು. ಅವರು ಸಂಘಟನೆಯಲ್ಲಿ ಜಾತ್ಯಾತೀತ ನಿಲುವನ್ನು ಹೊಂದದ್ದಿದ್ದ ಪಕ್ಷದಲ್ಲಿ ಸುಭದ್ರ ರಾಜ್ಯವನ್ನು ಸ್ಥಾಪಿಸಲು ಆಗುತ್ತಿರಲಿಲ್ಲ. ಶಿವಾಜಿ ಮಹಾರಾಜರು ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆ ನೀಡುತ್ತಿದ್ದರೆ ಹೊರತು ಅವರು ಎಂದಿಗೂ ಜಾತಿಗೆ ಬೆಲೆ ನೀಡಲಿಲ್ಲ. ಇಂತಹ ಶ್ರೇಷ್ಠ ಕುಲದ ಜನಾಂಗವಾಗಿರುವ ನಾವು ನಮ್ಮ ಸಮಾಜದ ಸಂಘಟನೆಗಾಗಿ ಜಾತ್ಯಾತೀತ ನಿಲುವನ್ನು ಹೊಂದುವುದು ಅವಶ್ಯಕವಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು ೩೦ಲಕ್ಷ ಮರಾಠ ಜನಾಂಗವಿದೆ. ಆದರೆ ಮರಾಠ ಸಮಾಜದಲ್ಲೇ ಒಟ್ಟು ೩೪ ಒಳ ಪಂಗಡಗಳಾಗಿ ಹರಿದು ಹಂಚಿ ಹೋಗಿರುವುದರಿಂದ ಇವುಗಳಿಗೆ ಸರಕಾರದ ಯಾವುದೆ ಯೋಜನೆಗಳು ಸಿಗುತ್ತಿಲ್ಲ. ಆದ್ದರಿಂದ ಮರಾಠ ಜನಾಂಗದ ಎಲ್ಲ ಒಳಪಂಗಡಗಳು ಒಂದಾಗಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮರಾಠ ಸಮಾಜದ ಸ್ವಾಮೀಜಿ ಶ್ರೀ ಸುರೇಶ್ವರಾನಂದ ಭಾರತಿ ಶ್ರೀಗಳಿಗೆ ಸಮಾವೇಶ ಒಂದು ನಿಮಿಷದ ಶ್ರದ್ದಾಂಜಲಿ ಸಲ್ಲಿಸಿತು.
ಸನ್ಮಾನ: ಇದೇ ಸಂದರ್ಭದಲ್ಲಿ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ಸಂಡೂರಿನ ಗಣಿ ಮಾಲೀಕ ಎಂ.ಹನುಮಂತರಾವ್ ಬೋಸ್ಲೆ, ಗುಪ್ತಚರ ಇಲಾಖೆಯ ಸಿಪಿಐ ಕೆ.ರಾಮರಾವ್, ಗಂಗಾವತಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಜ್ಯೋತಿಬಾ ಜಾಧವ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪದಗ್ರಹಣ: ಇದೇ ವೇಳೆ ಕ್ಷತ್ರೀಯ ಮರಾಠ ಸಂಘದ ಜಿಲ್ಲಾಧ್ಯಕ್ಷರಾಗಿ ಫಕೀರಪ್ಪ ಆರೇರ್, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಮಂಗಳೂರ ಹಾಗೂ ಖಜಾಂಚಿಯಾಗಿ ವಸಂತ ಲೊಂಡೆ ಪದಗ್ರಹಣ ಮಾಡಿದರು.
ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ, ಮಾಜಿ ಶಾಸಕ ಸಂಗಣ್ಣ ಕರಡಿ, ಕಾಂಗ್ರೆಸ್ ಮುಖಂಡ ವೆಂಕಟರಾವ್ ಘೋರ್ಪಡೆ, ನಗರಸಭಾ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ, ಉಪಾಧ್ಯಕ್ಷ ಅಮ್ಜದ ಪಟೇಲ್, ಕೆಕೆಎಂಪಿ ಖಜಾಂಚಿ ಬೈನೋಜಿರಾವ್ ಮೋರೆ, ಪ್ರಧಾನ ಕಾರ್ಯದರ್ಶಿ ಶಿವಾಜಿರಾವ್ ಜಾಧವ್, ಕ್ಷತ್ರೀಯ ಮರಾಠ ಪತ್ರಿಕೆ ಸಂಪಾದಕ ವಿಠ್ಠಲ್‌ರಾವ್ ಗಾಯಕವಾಡ, ಕಿರುತೆರೆಯ ಕಲಾವಿದ ಗಣೇಶ ಕೇಸರಕಲ್, ಮರಾಠ ಸಮಾಜದ ಮುಖಂಡರಾದ ಎಂ.ಪಿ ಶಿಂಧೆ, ರಾಜು ಬಾಕಳೆ, ಕ್ಷತ್ರೀಯ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಫಕೀರಪ್ಪ ಆರೇರ್, ನಗರಸಭೆ ಸದಸ್ಯ ಅಪ್ಪಣ್ಣ ಪದಕಿ, ಉದ್ಯಮಿ ಹನುಮಂತಪ್ಪ ಅಂಗಡಿ, ಜೀಜಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಹೇಮಾವತಿ ಮಂಗಳೂರು, ಜಿಲ್ಲಾ ಮರಾಠ ಸಂಘದ ಪದಾಧಿಕಾರಿಗಳಾದ ಪ್ರಕಾಶ ಮಂಗಳೂರ, ವಸಂತ ಲೊಂಡೆ, ಕೃಷ್ಣಪ್ಪ ಬಂಕದ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಉಮೇಶ ಸುರ್ವೆ ಹಾಗೂ ವಿದ್ಯಾ ಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.
ಮರಾಠ ಸಮಾಜವನ್ನು ೨ಎ ಗೆ ಸೇರಿಸಿ-ವಿ.ಎ.ರಾಣೋಜಿರಾವ್ ಸಾಠೆ ಸರಕಾರಕ್ಕೆ ಒತ್ತಾಯ
ಕೊಪ್ಪಳ. ಸಮಾಜದ ಎಲ್ಲ ರಂಗಗಳಲ್ಲೂ ಹಿಂದುಳಿದಿರುವ ಮರಾಠ ಸಮಾಜವನ್ನು ಹಿಂದುಳಿದ ೨ಎ ವರ್ಗಕ್ಕೆ ಸೇರಿಸಬೇಕೆಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷ ವಿ.ಎ.ರಾಣೋಜಿರಾವ್ ಸಾಠೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಅವರು ಭಾನುವಾರ ನಗರದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಮರಾಠ ಸಂಘ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಕ್ಷತ್ರೀಯ ಮರಾಠ ಸಂಘಟನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಸುಮಾರು ೩೦ಲಕ್ಷ ಮರಾಠ ಜನಾಂಗ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲೂ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸರಕಾರ ಈ ನಮ್ಮ ಮರಾಠ ಸಮಾಜವನ್ನು ೩ಬಿ ಯಿಂದ ೨ಎ ಗೆ ಸೇರಿಸಿ ಸಮಾಜದ ಬೆಳವಣಿಗೆಗೆ ಸಹಕರಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಶಿವಾಜಿ ಜಯಂತಿಯನ್ನು ಸರಕಾರವೇ ಆಚರಿಸಬೇಕೆಂಬ ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವೇರಿಸಿದರು. ಆದರೆ ನಮ್ಮ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿದ್ದ ೨ಎ ವರ್ಗೀಕರಣದ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಕಾರಣ ನಮ್ಮ ಬೇಡಿಕೆ ಮತ್ತೆ ನೆನೆಗುದಿಗೆ ಬಿದ್ದಿತ್ತು. ಈಗೀನ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಮರಾಠ ಸಮಾಜವನ್ನು ೨ಎ ಗೆ ಸೇರಿಸಬೇಕೆಂಬ ನಮ್ಮ ಬೇಡಿಕೆಯನ್ನು ತಿಳಿಸಿದ್ದೇವೆ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸಮಾಜದ ಪ್ರಗತಿಗೆ ಶಿಕ್ಷಣ ಹಾಗೂ ಅಂತರಂಗದ ಛಲ ಬೇಕು-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಕರೆ
ಕೊಪ್ಪಳ. ಯಾವುದೇ ಒಂದು ಸಮಾಜದ ಪ್ರಗತಿಗೆ ಸಂಘಟನೆ ಶಿಕ್ಷಣ ಹಾಗೂ ಅಂತರಂಗದ ಛಲ ಮುಖ್ಯವಾಗಿ ಬೇಕು ಎಂದು ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗಳು ಹೇಳಿದರು.
ಅವರು ಭಾನುವಾರ ನಗರದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಮರಾಠ ಸಂಘ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಕ್ಷತ್ರೀಯ ಮರಾಠ ಸಂಘಟನಾ ಸಮಾವೇಶದ ದಿವ್ಯ ಸಾನಿಧ್ಯವಹಿಸಿ ನಂತರ ಮಾತನಾಡಿದರು.
ಒಂದು ಸಸಿ ಹೆಮ್ಮರವಾಗಿ ಬೆಳೆಯಬೇಕಾದರೆ ಅದಕ್ಕೆ ಒಳ್ಳೆಯ ಮಣ್ಣು, ನೀರು, ಗಾಳಿ ಹೇಗೆ ಅವಶ್ಯಕವಾಗುವವೋ ಹಾಗೆ ಹಿಂದುಳಿದ ಸಮಾಜಗಳ ಪ್ರಗತಿಗೆ ಉತ್ತಮ ಶಿಕ್ಷಣ ಜೊತೆಗೆ ಅಂತರಂಗದ ಛಲವೂ ಅವಶ್ಯ ಎಂದರು.
ದೇಶದ ಇತಿಹಾಸದಲ್ಲಿ ಮರಾಠ ಸಮಾಜದ ಕೊಡುಗೆ ಅಪಾರ. ಶಿವಾಜಿ ಮಹಾರಾಜರು, ವಿಶ್ವ ಗುರು ಬಸವಣ್ಣನವರು ದೇಶದ ಮಕ್ಕಳು. ಇವರು ತಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಂಡರೆ ಹೊರತು ಜಾತಿಯಿಂದಲ್ಲ ಎಂದರು.
ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಮಾತನಾಡಿ, ದೇಶದ ಐಕ್ಯತೆಗೆ ಹೋರಾಡಿ ಏಕೈಕ ಸಮಾಜವೆಂದರೆ ಅದು ಮಾರಾಠ ಸಮಾಜ. ಯಾವುದೇ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಮಾಜಿ ಶಾಸಕ ಸಂಗಣ್ಣ ಕರಡಿ ಮಾತನಾಡಿ, ಹಿಂದು ಸಮಾಜದ ರಕ್ಷಣೆಗೆ ಹೋರಾಡಿದ ಶಿವಾಜಿ ಮಹಾರಾಜರು ತಮ್ಮ ಸ್ವಶಕ್ತಿ ಸಾಮಾರ್ಥ್ಯದಿಂದ ಸ್ವಂತ ರಾಜ್ಯವನ್ನು ಸ್ಥಾಪಿಸಿದರು.
ಇಂತಹ ಸಮಾಜದ ಬಾಂಧವರಾಗಿರುವ ನೀವು ಸಮಾಜದ ಮುಖ್ಯವಾಹಿನಿಗೆ ಬರಲು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಮಾತ್ರ ಸಾಧ್ಯ ಎಂದ ಅವರು, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಸಮಾಜದ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಮಾಶಾಸನ ಹಾಗೂ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದರು.
Please follow and like us:
error