ಕೊಪ್ಪಳ ಜಿಲ್ಲೆಯ ಶೌಚಾಲಯ ಅಭಿಯಾನ ಮಾದರಿ ಅನುಕರಣೀಯ – ಶಿವಮೊಗ್ಗ ತಂಡ ಪ್ರಶಂಸೆ

 ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 54 ಸಾವಿರ ಶೌಚಾಲಯಗಳನ್ನು ಒಂದೇ ವರ್ಷದಲ್ಲಿ ನಿರ್ಮಾಣ ಮಾಡಲು ಕೈಗೊಂಡ ಅಭಿಯಾನ ಮಾದರಿಯು ಇತರೆ ಜಿಲ್ಲೆಗಳಗೆ ಅನುಕರಣೀಯವಾಗಿದೆ ಎಂಬುದಾಗಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಮುರಳಿಧರ ಅವರು ಪ್ರಶಂಸೆ ವ್ಯಕ್ತಪಡಿಸಿದರು.
  ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆ ಇಡೀ ರಾಜ್ಯಕ್ಕೆ ಮೊದಲನೆ ಸ್ಥಾನ ಪಡೆದ ಯಶೋಗಾಥೆ ಕುರಿತ ಅಧ್ಯಯನಕ್ಕಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಾ ಪಂಚಾಯತಿಯ ತಂಡದೊಂದಿಗೆ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಂದು ಕುಟುಂಬಗಳು ಶೌಚಾಲಯ ಹೊಂದುವುದು ಅಗತ್ಯವಾಗಿದ್ದು, ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಒಂದೇ ವರ್ಷದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಿದ ಯಶೋಗಾಥೆ ನಿಜಕ್ಕೂ, ಇತರೆ ಜಿಲ್ಲೆಗಳಿಗೆ ಅನುಕರಣೀಯವಾಗಿದೆ.  ಇಲ್ಲಿನ ಸಾಧನೆ ಕುರಿತು ಖುದ್ದು ಭೇಟಿ ಮಾಡಿ ಅಧ್ಯಯನ ನಡೆಸುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್ ಹಾಗೂ ಸಾಗರ ಕ್ಷೇತ್ರದ ಶಾಸಕರೂ ಆಗಿರುವ ಕಾಗೋಡು ತಿಮ್ಮಪ್ಪ ಅವರು ಸೂಚಿಸಿದ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಗೆ ಭೇಟಿ ಮಾಡಿ ಇಲ್ಲಿನ ಸಾಧನೆ ಬಗ್ಗೆ ವೀಕ್ಷಣೆ ನಡೆಸಿದ್ದೇವೆ.  ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶೌಚಾಲಯವನ್ನು ಇಲ್ಲಿ ನಿರ್ಮಿಸಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ.  ಶೌಚಾಲಯ ಕಟ್ಟಿಸಿಕೊಳ್ಳಲು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರಮಿಸಿದ ರೀತಿ ಎಲ್ಲರಿಗೂ ಪ್ರೇರಣೆಯನ್ನು ನೀಡಿದೆ.  ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಶೌಚಾಲಯದ ಅಗತ್ಯತೆಯ ಬಗ್ಗೆ ಹೆಚ್ಚಿನ ಅರಿವು ಇದೆ.  ಆದರೆ ಅನುಷ್ಠಾನದಲ್ಲಿ ಅಲ್ಪ-ಸ್ವಲ್ಪ ತೊಂದರೆಯೂ ಇದೆ.  ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಇಲ್ಲಿನ ಅನುಷ್ಠಾನದ ರೀತಿಯನ್ನು ಅರಿತ ನಂತರ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗಿದೆ.  ಇದೇ ಮಾದರಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೂ ಅಳವಡಿಸಿ, ಅಲ್ಲಿನ ಎಲ್ಲ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಾಗರ ತಾಲೂಕು ಪಂಚಾಯತಿ ಅಧ್ಯಕ್ಷೆ ಜ್ಯೋತಿ ಮುರಳೀಧರ್ ಅವರು ಹೇಳಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಜಿ.ಪಂ. ನ ಹಿಂದಿನ ಅಧ್ಯಕ್ಷರಾಗಿದ್ದ ಜನಾರ್ಧನ ಹುಲಿಗಿ ಅವರು ಶೌಚಾಲಯ ಅಭಿಯಾನಕ್ಕಾಗಿ ವಿಶೇಷ ಆಸಕ್ತಿ ವಹಿಸಿ ಶ್ರಮಿಸಿದರು.  ಅಲ್ಲದೆ ಜನರ ಮನವೊಲಿಸಲು ಅವರು ಕೈಗೊಂಡ ಅನೇಕ ಪ್ರಯತ್ನಗಳ ಬಗೆಯನ್ನು ಸಭೆಗೆ ವಿವರಿಸಿ ಜಿಲ್ಲೆಯಲ್ಲಿ ಈ ವರ್ಷ 41 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
  ಜಿ.ಪಂ. ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ.  ಸಿಕ್ಕಿದಂತಹ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು, ಜನರ ಸೇವೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.  ಕಳೆದ ವರ್ಷ ಜಿಲ್ಲೆಗೆ 13 ಸಾವಿರ ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು.  ಆದರೆ ನಾವು 1 ಲಕ್ಷ ಶೌಚಾಲಯ ಕಟ್ಟಿಸುವ ಗುರಿ ಹಮ್ಮಿಕೊಂಡಿದ್ದೇವೆ ಎಂದಾಗ ಅನೇಕರು ಅಪಹಾಸ್ಯ ಮಾಡಿದ್ದೂ ಉಂಟು.  ಅಲ್ಲದೆ ಆರಂಭದಲ್ಲಿ ಅನೇಕ ಅಡ್ಡಿಗಳು ಎದುರಾದವು.  ಇಂತಹ ಸಮಸ್ಯೆಗಳನ್ನು ಪ್ರಾಮಾಣಿಕ ಶ್ರಮದಿಂದಲೇ ನಿವಾರಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪ್ರಗತಿ ಸಾಧಿಸಲು ಶ್ರಮಿಸಿದ್ದೇನೆ.  ಲೋಕಸಭಾ ಚುನಾವಣಾ ನೀತಿ ಸಂಹಿತೆಯ ಅಡ್ಡಿ ಇಲ್ಲದೇ ಹೋಗಿದ್ದಲ್ಲಿ, 01 ಲಕ್ಷ ಶೌಚಾಲಯ ಗುರಿ ಸಾಧಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಮಾತನಾಡಿ, ಈ ವರ್ಷವೂ ಕೊಪ್ಪಳ ಜಿಲ್ಲೆಯಲ್ಲಿ 41 ಸಾವಿರ ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.  ಸಭೆಯಲ್ಲಿ ಸಾಗರ ತಾಲೂಕು ಪಂಚಾಯತಿಯ ಸದಸ್ಯರುಗಳು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓ ಗಳು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭಾಗವಹಿಸಿ, ಇಲ್ಲಿನ ಯಶೋಗಾಥೆಯ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.  ಜಿ.ಪಂ. ಸದಸ್ಯರುಗಳಾದ ರಾಮಣ್ಣ ಸಾಲಭಾವಿ, ಅರವಿಂದಗೌಡ ಪಾಟೀಲ, ಅಶೋಕ್ ತೋಟದ, ವನಿತಾ ಗಡಾದ, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ
  ಇದಕ್ಕೂ ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಂಡ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿ, ಶೌಚಾಲಯ ನಿರ್ಮಾಣದ ಸಾಧನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕುರಿತಂತೆ ಅಧ್ಯಯನ ನಡೆಸಿತು.  
Please follow and like us:
error