ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ

ಪೊಲೀಸ್ ಇಲಾಖೆಯಿಂದ ಕರ್ನಾಟಕ ರಾಜ್ಯಾದ್ಯಂತ ಡಿ.೧ ರಿಂದ ಡಿ.೩೧ ರವರೆಗೆ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸುತ್ತಿದ್ದು, ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಟಿ.ಡಿ.ಪವಾರ್ ಅವರು ವಹಿಸಿ ಮಾತನಾಡಿ, ಅಪರಾಧ ತಡೆ ಮಾಸಾಚರಣೆ ನಿಮಿತ್ಯ ಆಟೋ ಚಾಲಕರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿಗೆ ಬಾಡಿಗೆ ಹಣವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳದಂತೆ ತಿಳಿಸಿದರು. ಅಪರಾಧ ತಡೆಯುವಲ್ಲಿ ಪೊಲೀಸರಿಗೆ ಸಹಾಯ ಸಹಕಾರ ನೀಡುವಂತೆ ತಿಳಿಸಿದ ಅವರು, ಒಂದು ವೇಳೆ ಯಾರಾದರೂ ಪ್ರಯಾಣಿಕರು ತಮ್ಮ ಯಾವುದೇ ವಸ್ತುಗಳನ್ನು ಅಟೋಗಳಲ್ಲಿ ಮರೆತು ಬಿಟ್ಟು ಹೋದಲ್ಲಿ ಅವುಗಳನ್ನು ಸಂಬಂಧಪಟ್ಟ ಪ್ರಯಾಣಿಕರಿಗಾಗಲಿ ಅಥವಾ ಪೊಲೀಸ್ ಠಾಣೆಗೆ ತಲುಪಿಸುವಂತೆ ಸೂಚಿಸಿದರು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕಂಡು ಬಂದಲ್ಲಿ ತಡಮಾಡದೇ ಅಂತಹ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಟಿ.ಡಿ.ಪವಾರ್ ಅವರು ಸೂಚಿಸಿದರು. 
ಸಭೆಯಲ್ಲಿ ಪೊಲೀಸ್ ಉಪಾಧೀಕ್ಷಕ ರಾಜೀವ್ ಎಂ., ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಮೋಹನ್ ಪ್ರಸಾದ, ನಗರ ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಅಶೋಕ ಗಲಿಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply