ಜಾತಿ ಜನಗಣತಿಗೆ ಅಪಸ್ವರ ಏಕೆ?

ವೈದಿಕ ಪುರೋಹಿತಶಾಹಿ ಶಕ್ತಿಗಳ ವಿರುದ್ಧ ನೂರಾರು ವರ್ಷಗಳಿಂದ ನಡೆಯುತ್ತ ಬಂದ ಸಂಘರ್ಷದಲ್ಲಿ ಈಗ ಪುರೋಗಾಮಿ ಶಕ್ತಿಗಳಿಗೆ ಹಿನ್ನಡೆ ಉಂಟಾಗಿದೆ. ಕಳೆದ ಒಂದೂವರೆ ಶತಮಾನದಲ್ಲಿ ಇದೇ ಮೊದಲ ಬಾರಿ ಈ ಕರಾಳ ಶಕ್ತಿಗಳು ಹೆಡೆಯೆತ್ತಿ ನಿಂತಿವೆ. ಬುದ್ಧ, ಬಸವ, ಅಂಬೇಡ್ಕರ ಮುನ್ನಡೆಸಿದ ಇತಿಹಾಸ ಚಕ್ರ ಈಗ ಹಿಮ್ಮುಖವಾಗಿ ಚಲಿಸುವ ಗಂಡಾಂತರ ಎದುರಾಗಿದೆ. ಇಂಥ ಕಾಲಘಟ್ಟದಲ್ಲಿ ನರೇಂದ್ರ ಮೋದಿಯಂಥವರು ಪ್ರಧಾನಿಯಾಗುತ್ತಾರೆ. ಪ್ರವೀಣ್ ತೊಗಾಡಿಯಾರಂಥವರು ಹೀರೋಗಳಾಗುತ್ತಾರೆ. ಹಿಂದೆಲ್ಲ ಕಮ್ಯುನಿಸ್ಟ್, ಸೋಷಲಿಸ್ಟ್ ನಾಯಕರಾದ ಡಾಂಗೆ-ನಂಬೂದ್ರಿಪಾದ, ಲೋಹಿಯಾ ಭಾಷಣಗಳನ್ನು ಸರಕಾರ ನಿರ್ಬಂಧಿಸುತ್ತಿತ್ತು. ಆಗ ಜನ ಅವರ ಭಾಷಣ ಕೇಳಲು ಎಲ್ಲ ಅಡ್ಡಿ ಆತಂಕ ಎದುರಿಸಿ ಬರುತ್ತಿದ್ದರು. ಈಗ ತೊಗಾಡಿಯಾ, ಸಿಂಘಾಲರಂಥವರ ಕಾಲ.
ಇಂಥ ಕಾಲಘಟ್ಟದಲ್ಲಿ ಸಮಾಜವಾದಿ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದಾರೆ. ಹಿಂದುಳಿದ ಸಮುದಾಯ ಪ್ರತಿನಿಧಿಸುವ ಅವರು ಯಾವುದೇ ಜಾತಿಯ ಜೊತೆ ಗುರುತಿಸಿಕೊಂಡಿಲ್ಲ. ಆದರೆ ಅವರನ್ನು ಪದಚ್ಯುತಗೊಳಿಸಲು ಮೇಲ್ಜಾತಿಯ ಪಟ್ಟಭದ್ರ ಹಿತಾಸಕ್ತಿಗಳು ಶತಾಯ ಗತಾಯ ಯತ್ನ ನಡೆಸಿದೆ. ಭ್ರಷ್ಟಾಚಾರದ ಕೊಚ್ಚೆಯಲ್ಲಿ ಮುಳುಗಿ ಎದ್ದಿರುವ ಬಿಜೆಪಿ ನಾಯಕರು ಈ ಚಾರಿತ್ರವಧೆಗೆ ಕೈ ಹಾಕಿದ್ದಾರೆ. ಈ ವಿದ್ಯಮಾನಗಳನ್ನು ಗಮನಿಸುತ್ತಿರುವ ನನಗೆ ನಾಲ್ಕು ದಶಕಗಳ ಹಿಂದಿನ ದೇವರಾಜ ಅರಸು ದಿನಗಳು ನೆನಪಿಗೆ ಬಂದವು.
ಆಗ ಅರಸರ ವಿರುದ್ಧ ಇಂಥದೆ ಪಿತೂರಿಗಳು ನಡೆದಿದ್ದವು. ಆಗ ಬಿಜೆಪಿ ಅಷ್ಟೊಂದು ಪ್ರಬಲವಾಗಿರಲಿಲ್ಲ. ಜನತಾದಳದವರೇ ಇಂಥ ಕೆಲಸಕ್ಕೆ ಕೈ ಹಾಕಿದ್ದರು. ಈಗ ಸಿದ್ದರಾಮಯ್ಯ ಸರಕಾರ ಮೊದಲ ಬಾರಿ ಜಾತಿ ಜನಗಣತಿಯಂಥ ಚಾರಿತ್ರಿಕ ಹೆಜ್ಜೆ ಇರಿಸಿದಾಗ ಮೇಲ್ಜಾತಿ ಗಳಿಂದ ತೀವ್ರ ವಿರೋಧ ಬರುತ್ತಿದೆ. ಅದರಲ್ಲೂ ಮುಖ್ಯ ವಾಗಿ ಅಖಿಲ ಭಾರತ ವೀರಶೈವ ಮಹಸಭಾ ಈ ಜಾತಿ ಜನಗಣತಿ ವಿರುದ್ಧ ಸಮರವನ್ನು ಸಾರಿದೆ. ಜಾತಿ ಜನಗಣತಿಯಿಂದ ತಮ್ಮ ಸಮಾಜಕ್ಕೆ ಪೆಟ್ಟು ಬೀಳುತ್ತದೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷರೂ ಆದ ಸಚಿವ ಶಾಮನೂರು ಶಿವಶಂಕರಪ್ಪ ತಕರಾರು ತೆಗೆದಿದ್ದರೆ, ಬಿಜೆಪಿ ನಾಯಕರು ಇದನ್ನು ವಿರೋಧಿಸಿದ್ದಾರೆ.
ಬಸವಣ್ಣನವರ ಹೆಸರು ಹೇಳಿಕೊಳ್ಳುವ ಸಮುದಾಯದ ನಾಯಕರು ಈ ರೀತಿ ಸಂಕುಚಿತವಾಗಿ ಯೋಚಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ವೀರಶೈವ ಲಿಂಗಾಯತ ನಾಯಕರಿಗೆ ಇರುವ ಆತಂಕವೆಂದರೆ ಈ ಜಾತಿ ಜನಗಣತಿಯಿಂದ ತಮ್ಮ ಸಮುದಾಯದ ಒಗ್ಗಟ್ಟು ಮುರಿಯುತ್ತದೆ ಎಂಬುದಾಗಿದೆ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ನೇಕಾರರಿಗೆ, ಕ್ಷೌರಿಕರಿಗೆ, ಗಾಣಿಗರಿಗೆ ಹೀಗೆ ವಿವಿಧ ಕಸುಬುದಾರರಿಗೆ ಲಿಂಗಕಟ್ಟಿ ಲಿಂಗಾಯತರನ್ನಾಗಿ ಮಾಡಿದರು. ಈ ತಳ ಸಮುದಾಯದವರೆಲ್ಲ ಕೊರಳಲ್ಲಿ ಇಷ್ಟಲಿಂಗ ಧರಿಸುತ್ತಿದ್ದರೂ ಅವರೆಂದೂ ಸಮಾಜದ ಮುಖ್ಯವಾಹಿನಿಗೆ ಬರಲಿಲ್ಲ. ಈ ಜಾತಿ ಜನಗಣತಿಯಿಂದ ಈ ನಿರ್ಲಕ್ಷಿತ ಸಮುದಾಯಗಳು ಬೆಳಕಿಗೆ ಬರುವ ಅವಕಾಶ ದೊರತಿದೆ.
ಇದನ್ನು ವಿರೋಧಿಸುವವರು ಶಾಮನೂರು, ರೇಣುಕಾಚಾರ್ಯರಂಥ ರಾಜಕೀಯ ನಾಯಕರು ಮಾತ್ರ. ಜಾತಿ ಜನಗಣತಿಯಲ್ಲಿ ಲಿಂಗಾಯತ ಜಾತಿಯ ವಿವಿಧ ಪಂಗಡಗಳ ಜನರು ತಮ್ಮ ಉಪಪಂಗಡಗಳ ಹೆಸರನ್ನು ನಮೂದಿಸುವ ಅವಕಾಶವಿದೆ. ಇದರಿಂದ ಒಟ್ಟು ವೀರಶೈವರ ಜನಸಂಖ್ಯೆ ಕಡಿಮೆ ಇರುವಂತೆ ವರದಿಯಲ್ಲಿ ದಾಖಲಾಗಬಹುದು ಎಂಬುದು ವೀರಶೈವ ಮಹಾಸಭಾ ನಾಯಕರ ಆತಂಕವಾಗಿದೆ. ಆದರೆ ಲಿಂಗಾಯತರು, ಲಿಂಗಾಯತ/ಗಾಣಿಗ, ಲಿಂಗಾಯತ/ಸಿಂಪಿಗ, ಲಿಂಗಾಯತ/ಪಂಚಮಸಾಲಿ ಇತ್ಯಾದಿ ದಾಖಲಿಸಿದರೂ ವೀರಶೈವ ಸಮಾಜ ಆತಂಕ ಪಡಬೇಕಾಗಿಲ್ಲ. ಅಷ್ಟಕ್ಕೂ ಈ ಜನಗಣತಿ ನಡೆಯುತ್ತಿರುವುದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ.
ಈಗ ಜಾತಿ ಮೀಸಲಾತಿಗೆ ವೈಜ್ಞಾನಿಕ ಆಧಾರಗಳಿಲ್ಲ. ಸ್ವಾತಂತ್ರ ನಂತರ ಜಾತಿ ಜನಗಣತಿ ನಡೆದಿಲ್ಲ. ಇಂಥ ಜನಗಣತಿ ಬ್ರಿಟಿಷರ ಕಾಲದಲ್ಲಿ ನಡೆದಿತ್ತು. ಆಗಿನ ಜನಗಣತಿ ಆಯುಕ್ತ ಡಬ್ಲೂ.ಸಿ. ಪೌಡೆನ್ ಜನಗಣತಿ ಸಂದರ್ಭದಲ್ಲಿ ಜಾತಿ ಸಮೀಕ್ಷೆ ನಡೆಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ 1881ರಿಂದ 1931ರವರೆಗೆ ಜನಗಣತಿ ಸಂದರ್ಭದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಆದರೆ 1941ರಲ್ಲಿ ಜನಗಣತಿಯಲ್ಲಿ ಜಾತಿ ಕಾಲಂ ಕೈ ಬಿಡಲಾಯಿತು. ಅಲ್ಲಿಂದ ಇಲ್ಲಿವರೆಗೆ ಜಾತಿ ಸಮೀಕ್ಷೆ ನಡೆದಿಲ್ಲ. ಈ ಕಾರಣದಿಂದಲೇ ಜಾತಿ ಆಧರಿತ ಮೀಸಲು ಹಾಗೂ ಜಾತಿ ಪಟ್ಟಿಗಳು ಅವೈಜ್ಞಾನಿಕ ಎಂದು ಮಾನವ ಶಾಸ್ತ್ರಜ್ಞರು ವಾದಿಸುತ್ತಾರೆ. ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಯಾವುದೇ ಮೊಕದ್ದಮೆಗಳು ವಿಚಾರಣೆಗೆ ಬಂದಾಗಲೆಲ್ಲ ನ್ಯಾಯಾಲಯಗಳು ತಕರಾರು ತೆಗೆಯುತ್ತವೆ.
ಇದನ್ನು ಮನಗಂಡು 2005ರಲ್ಲಿ ಅಂದಿನ ಕೇಂದ್ರ ಯುಪಿಎ ಸರಕಾರ ಜಾತಿವಾರು ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಿತು. ಪ್ರಾಯೋಗಿಕವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿತು. ಈ ಉದ್ದೇಶಕ್ಕಾಗಿ ರಾಜ್ಯ ಹಿಂದುಳಿದ ಆಯೋಗ 21.05 ಕೋಟಿ ರೂ. ಬಿಡುಗಡೆ ಮಾಡಿದ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದರು. ಆಗ ನಿಂತು ಹೋಗಿದ್ದ ಜಾತಿ ಸಮೀಕ್ಷೆ ಕಾರ್ಯಕ್ಕೆ ಸಿದ್ದರಾಮಯ್ಯ ಸರಕಾರ ಚಾಲನೆ ನೀಡಿ 175 ಕೋಟಿ ರೂಪಾಯಿ ಅನುದಾನ ಒದಗಿಸಿದೆ. ಜಾತಿ ಆಧರಿತ ಮೀಸಲಾತಿ ಯೋಜನೆಗಳ ಸಮರ್ಪಕ ಜಾರಿಗೆ ಇದರಿಂದ ಅನುಕೂಲವಾಗುತ್ತದೆ. ಸಂವಿಧಾನದ ಆಶಯದಂತೆ ಎಲ್ಲ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಅರಿತು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿಸಲು ಇಂಥ ಜನಗಣತಿಯಿಂದ ಸಾಧ್ಯವಾಗುತ್ತದೆ. ಇದನ್ನು ಯಾವುದೇ ಜಾತಿಯ ವಿರುದ್ಧ ಪಿತೂರಿ ಎಂದು ಭಾವಿಸಬೇಕಾಗಿಲ್ಲ.
ಸಮಾಜದ ಶೋಷಿತ ವರ್ಗಗಳು ಮುಖ್ಯವಾಹಿನಿಗೆ ಬರಲು ಮುಂದಾದಾಗಲೆಲ್ಲ ಪಟ್ಟಭದ್ರ ಜಾತಿವಾದಿ ಶಕ್ತಿಗಳು ಅಡ್ಡಗಾಲು ಹಾಕುವುದು ಈ ದೇಶದ ಚರಿತ್ರೆಯಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲು ವ್ಯವಸ್ಥೆ ಕಲ್ಪಿಸಲು ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಹಾವನೂರು ಆಯೋಗ ರಚಿಸಿದಾಗಲೂ ಈ ಪಟ್ಟಭದ್ರ ಜಾತಿವಾದಿ ಶಕ್ತಿಗಳು ಇದೇ ರೀತಿ ವಿರೋಧಿಸಿದ್ದವು. ಆಗಲೂ ವೀರಶೈವ ಮಹಾಸಭಾ ಅಪಸ್ವರ ತೆಗೆದಿತ್ತು.
ಅವಿಭಜಿತ ಧಾರವಾಡ ಜಿಲ್ಲೆಯ ರಾಣೆಬೆನ್ನೂರಿನ ಲಕ್ಷ್ಮಣ ಹಾವನೂರು ಆ ಕಾಲದಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಸುಪ್ರಸಿದ್ಧ ವಕೀಲರಾಗಿ ದ್ದರು. ಅಗಾಧ ಕಾನೂನು ಪಾಂಡಿತ್ಯ ಹೊಂದಿದ್ದ ಹಾವನೂರು ವಕೀಲರು ಒಮ್ಮೆ ತುಂಬಿದ ನ್ಯಾಯಾಲಯದಲ್ಲಿ ನ್ಯಾಯ ಮೂರ್ತಿ ಗೋವಿಂದ ಭಟ್ಟರನ್ನು ತರಾಟೆಗೆ ತೆಗೆದು ಕೊಂಡಿದ್ದರು. ಈಗಿನ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರು ಮೊದಲು ಹಾವನೂರು ವಕೀಲರ ಕಚೇರಿಯಲ್ಲೇ ಸೇವೆ ಸಲ್ಲಿಸಿ ಹೆಸರು ಮಾಡಿದರು. ಇಂಥ ಹಾವನೂರು ವಕೀಲರ ವಿರುದ್ಧ ಆಗ ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಮಸಲತ್ತು ನಡೆಸಿದವು. ಅವರ ಸಭೆಗಳಲ್ಲಿ ಗಲಾಟೆ ನಡೆಸುತ್ತಿದ್ದವು. ಒಮ್ಮೆ ದಾವಣಗೆರೆಗೆ ಹಾವನೂರರು ಬಂದಾಗ ಇಲ್ಲಿನ ನಾಯಕ ಹಾಸ್ಟೆಲ್‌ನಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಸಮಾವೇಶವೊಂದು ನಡೆಯಿತು.
ಆಗ ಮೇಲ್ಜಾತಿ ಲಿಂಗಾಯತರು ಹಾಸ್ಟೆಲ್‌ಗೆ ಮುತ್ತಿಗೆ ಹಾಕಿ ಹಾವನೂರು ವಿರುದ್ಧ ಘೋಷಣೆ ಕೂಗ ತೊಡಗಿದರು. ಹಾವನೂರುರನ್ನು ಹೊರಗೆ ಹೋಗಲು ಬಿಡುವುದಿಲ್ಲ ಎಂದು ಕೂಗಾಡ ತೊಡಗಿದರು. ಆಗ ದಾವಣಗೆರೆ ಕಮ್ಯುನಿಸ್ಟ್ ಶಾಸಕರಾಗಿದ್ದ ಪಂಪಾಪತಿ ಹೊರಗೆ ಬಂದು ಗುಡುಗಿದ ನಂತರ ಈ ಗುಂಪು ಚದುರಿತು. ಹೀಗೆ ಸಮಾಜದ ದಮನಿತ ವರ್ಗಗಳು ಎಚ್ಚೆತ್ತು ಮುಂದೆ ಬರಲು ಹೊರಟಾಗೆಲ್ಲ ಜಾತಿವಾದಿ ಪ್ರತಿಗಾಮಿ ಶಕ್ತಿಗಳು ಅಡ್ಡಗಾಲು ಹಾಕುತ್ತ ಬಂದಿವೆ. ಈಗ ಜಾತಿ ಜನಗಣತಿಯನ್ನು ಇದೇ ಪ್ರಗತಿ ವಿರೋಧಿ ಶಕ್ತಿಗಳು ವಿರೋಧಿಸುತ್ತಿವೆ. ಆದರೆ ಚರಿತ್ರೆಯ ಚಕ್ರವನ್ನು ಹಿಂದಕ್ಕೆ ತಿರುಗಿಸುವುದು ಸಾಧ್ಯವಿಲ್ಲ ಎಂಬುದನ್ನು ಈ ಕರಾಳ ಶಕ್ತಿಗಳು ತಿಳಿದುಕೊಳ್ಳಬೇಕಾಗಿದೆ.
-varthabharati
Please follow and like us:
error