– ಸಂಸದ ಶಿವರಾಮಗೌಡ
ಕೊಪ್ಪಳ ಜ. : ದೇಶದ ಉತ್ತಮ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಶಿಕ್ಷಣದ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅಗತ್ಯವಿದೆ. ಉದ್ಯೋಗಕ್ಕಾಗಿ ಶಿಕ್ಷಣ ಎಂಬ ನೀತಿಯಲ್ಲಿ ಬದಲಾವಣೆ ತರಲು ಇದೀಗ ಕಾಲ ಪಕ್ವವಾಗಿದೆ ಎಂದು ಸಂಸದ ಶಿವರಾಮಗೌಡ ಅವರು ಅಭಿಪ್ರಾಯಪಟ್ಟರು.
ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದಲ್ಲಿ ೧.೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವ ಗುರುತರ ಹೊಣೆ ಜಿಲ್ಲೆಯ ಸಮಗ್ರ ವಿದ್ಯಾರ್ಥಿಗಳ ಮೇಲಿದೆ. ಜಿಲ್ಲೆಯಲ್ಲಿ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದರೂ, ಅವರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ, ಹಿನ್ನಡೆ ಅನುಭವಿಸುವಂತಾಗಿದೆ. ಉನ್ನತ ಶಿಕ್ಷಣದ ಸೌಲಭ್ಯ ಜಿಲ್ಲೆಯಲ್ಲಿ ಇಲ್ಲವೆಂಬ ಕೊರಗನ್ನು ಇದೀಗ ಸರ್ಕಾರ ನಿವಾರಿಸಿದ್ದು, ಗಂಗಾವತಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗಿದೆ. ಕೃಷ್ಣ-ಬಿ ಸ್ಕೀಂ ಅಡಿ ಜಿಲ್ಲೆಗೆ ದೊರೆಯುವ ನೀರನ್ನು ಸದುಪಯೋಗಪಡಿಸಿಕೊಳ್ಳಲು, ಇಲ್ಲಿನ ರೈತರ ಜಮೀನಿಗೆ ನೀರಾವರಿ ಒದಗಿಸಬಹುದಾದ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ. ಈಗಾಗಲೆ ಈ ಕುರಿತಂತೆ ಸ್ಥಳೀಯ ರೈತರೊಂದಿಗೆ ಸಮಾಲೊಚನೆ ನಡೆಸಲಾಗಿದೆ ಎಂದರು.
ಕುದರಿಮೋತಿ ಮಠದ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಎಸ್. ಪಟ್ಟಣಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಶರಣಪ್ಪ ಪಟ್ಟಣಶೆಟ್ಟಿ, ಗಣ್ಯರಾದ ಸಂಗನಗೌಡ ಪಾಟೀಲ, ವೀರಬಸಪ್ಪ ಪಟ್ಟಣಶೆಟ್ಟಿ, ವೀರಬಸಪ್ಪ ಶೆಟ್ಟರ್, ಬಸವರಾಜ ಮೂಲಿಮನಿ, ರಾಮಚಂದ್ರ ದೇಸಾಯಿ, ಮಂಜುನಾಥ ಸಿದ್ದಾಪುರ, ಮನೋಹರ್, ಬಸವರಾಜ ಪಿನ್ನಿ, ಹನುಮೇಶ್ ಶೆಟ್ಟರ್, ಕಾಲೇಜು ಕಟ್ಟಡಕ್ಕೆ ಸ್ಥಳ ದಾನ ಮಾಡಿದ ಶ್ರೀನಾಥರೆಡ್ಡಿ, ಮಲ್ಲಪ್ಪ ಪಟ್ಟಣಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಿದ್ದರು, ಹೆಚ್.ಎಮ್. ಗುಡಿಹಿಂದಿನವರ್ ಸ್ವಾಗತಿಸಿದರು, ಶೃತಿ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು, ಕೆ.ಎಸ್. ಛತ್ರದ ಕಾರ್ಯಕ್ರಮ ನಿರೂಪಿಸಿದರು.
Please follow and like us: