ಉದ್ಯೋಗಖಾತ್ರಿಯಲ್ಲಿ ಯಂತ್ರ ಬಳಕೆ ಸಂಪೂರ್ಣ ನಿಷೇಧ-

 ಕೂಲಿಕಾರರಿಗೆ ಉದ್ಯೋಗ ಖಾತರಿ ಕಲ್ಪಿಸುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತರಿ ಯೋಜನೆಯ ಕಾಮಗಾರಿಗಳಿಗೆ ಯಂತ್ರ ಬಳಸುವುದು ಅಥವಾ ಗುತ್ತಿಗೆದಾರರನ್ನು ಬಳಸುವುದು ನಿಷಿದ್ಧವಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಎಚ್ಚರಿಕೆ ನೀಡಿದ್ದಾರೆ.
  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನರಿಗೆ ದೀರ್ಘಕಾಲದ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸುವುದು ಮತ್ತು ಸ್ವ-ಇಚ್ಚೆಯಿಂದ ಅರ್ಜಿ ಸಲ್ಲಿಸುವ ಅಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆಯನ್ನು ಒದಗಿಸುವುದು ಅಲ್ಲದೆ ಗ್ರಾಮೀಣ ಜನತೆಯ ವಲಸೆ ತಡೆಗಟ್ಟುವುದು ಪ್ರಮುಖ ಉದ್ದೇಶವಾಗಿದೆ.  ಅಕುಶಲ ಉದ್ಯೋಗಕ್ಕಾಗಿ ಉದ್ಯೋಗ ಚೀಟಿ ಹೊಂದಿದ್ದು, ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗಖಾತರಿ ಇರುತ್ತದೆ.  ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ದರ ಇದ್ದು, ದಿನವೊಂದಕ್ಕೆ ರೂ. 191 ಗಳ ಕೂಲಿಯನ್ನು ನಿಗದಿಪಡಿಸಲಾಗಿದೆ.  ಕೆಲಸ ಮಾಡಿದ ವಾರಾಂತ್ಯದಲ್ಲಿ ಕೂಲಿ ಪಾವತಿಸಬೇಕು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಗರಿಷ್ಠ 15 ದಿನಗಳಿಗೆ ಮೀರದಂತೆ ಕೂಲಿ ಪಾವತಿಸುವುದನ್ನು ಹಾಗೂ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.  ತೊಂದರೆ ಕಂಡುಬಂದಲ್ಲಿ, ರಾಜ್ಯ ಮಟ್ಟದಲ್ಲಿ ಉಚಿತ ಸಹಾಯವಾಣಿ ಪ್ರಾರಂಭಿಸಲಾಗಿದ್ದು, 1800 425 8666 ಕ್ಕೆ ಕರೆ ಮಾಡಬಹುದಾಗಿದೆ.  ಗ್ರಾಮೀಣ ಪ್ರದೇಶದ ಬಡ ಕೂಲಿಕಾರರ ಅಭ್ಯುದಯಕ್ಕಾಗಿ ಜಾರಿಗೊಳಿಸಲಾಗಿರುವ ಈ ಯೋಜನೆಯಲ್ಲಿ ಯಂತ್ರಗಳನ್ನು ಬಳಸುವುದನ್ನು ಅಥವಾ ಗುತ್ತಿಗೆದಾರರಿಗೆ ಕೆಲಸ ವಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಒಂದು ವೇಳೆ ಯಂತ್ರಗಳನ್ನು ಬಳಸುವುದು ಕಂಡುಬಂದಲ್ಲಿ, ಯಂತ್ರಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.  ಉದ್ಯೋಗ ಚೀಟಿಯನ್ನು ಹೊಂದಿರುವ ಕೂಲಿಕಾರರು, ಯಾವುದೇ ಆಮಿಷಕ್ಕೆ ಒಳಗಾಗಿ ಗುತ್ತಿಗೆದಾರರಿಗೆ ಉದ್ಯೋಗಚೀಟಿಯನ್ನು ಮಾರಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಇಂತಹ ಯಾವುದೇ ಸನ್ನಿವೇಶ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೊ: 9480871000 ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. 
  ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ದೂರುಗಳು ಇತ್ಯರ್ಥವಾಗದಿದ್ದಲ್ಲಿ ಜಿಲ್ಲಾ ಮಟ್ಟದ ಓಂಬುಡ್ಸ್‍ಮನ್ ರವರಿಗೆ ಸಂಪರ್ಕಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ  

ತಿಳಿಸಿದ್ದಾರೆ.

Leave a Reply