ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ

ಕೊಪ್ಪಳ ಸೆ. : ವಿವಿಧ ಕಾರಣಗಳಿಂದ ತೆರವಾಗಿರುವ  ಗ್ರಾಮ ಪಂಚಾಯತಿಗಳ ೧೪ ಸದಸ್ಯ ಸ್ಥಾನಗಳಿಗಾಗಿ ಉಪಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
  ಕೊಪ್ಪಳ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ ಗ್ರಾಮ ಪಂಚಾಯತಿಗಳ ಒಟ್ಟು ೧೪ ಸದಸ್ಯ ಸ್ಥಾನಗಳಿಗಾಗಿ ಉಪಚುನಾವಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಸಹ ಘೋಷಣೆಯಾಗಿರುವುದರಿಂದ, ಕೊಪ್ಪಳ ತಾಲೂಕಿನಲ್ಲಿ ತೆರವಾಗಿರುವ ಗ್ರಾಮ ಪಂಚಾಯತಿಗಳ ೪ ಸದಸ್ಯ ಸ್ಥಾನಗಳಿಗೆ ಚುನಾವಣೆ ಮುಂದೂಡಲಾಗಿದೆ.  ಅಧಿಸೂಚನೆ ಅನ್ವಯ  ಸೆ. ೧೨ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸೆ. ೧೩ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಉಮೇದುವಾರಿಕೆಯನ್ನು ಹಿಂಪಡೆಯಲು ಸೆ. ೧೫ ಕೊನೆಯ ದಿನಾಂಕವಾಗಿದ್ದು, ಅಗತ್ಯ ಬಿದ್ದಲ್ಲಿ ಮತದಾನ ಸೆ. ೨೫ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ.  ಮರು ಮತದಾನದ ಅಗತ್ಯ ಬಿದ್ದಲ್ಲಿ ಸೆ. ೨೮ ರಂದು ನಡೆಸಲಾಗುವುದು, ಮತ ಎಣಿಕೆ ಕಾರ್ಯ ಸೆ. ೨೯ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಯನ್ನು ಸೆ. ೩೦ ರ ಒಳಗಾಗಿ ಪೂರ್ಣಗೊಳಿಸಬೇಕಾಗಿರುತ್ತದೆ.  ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಯ ಹೆಸರು, ಕ್ಷೇತ್ರದ ಹೆಸರು, ಮೀಸಲಾತಿ ವಿವರ ಇಂತಿದೆ.  ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮ ಪಂಚಾಯತಿಯ ಬಳೂಟಗಿ (ಪ.ಜಾತಿ), ಮೆಣೆಧಾಳ ಗ್ರಾಮ ಪಂಚಾಯತಿಯ ಹಿರೇಮುಕರ್ತಿನಾಳ (ಸಾಮಾನ್ಯ(ಮಹಿಳೆ)), ಕಿಲಾರಹಟ್ಟಿ ಗ್ರಾಮ ಪಂಚಾಯತಿಯ ಗರ್ಜನಾಳ (ಸಾಮಾನ್ಯ), ಯಲಬುರ್ಗಾ ತಾಲೂಕು ಮುಧೋಳ ಗ್ರಾಮ ಪಂಚಾಯತಿ (ಹಿಂದುಳಿದ ವರ್ಗ-ಅ(ಮಹಿಳೆ)), ಹಿರೇಬಿಡನಾಳ (ಸಾಮಾನ್ಯ), ವಜ್ರಬಂಡಿ ಗ್ರಾಮ ಪಂಚಾಯತಿಯ ದಮ್ಮೂರು (ಸಾಮಾನ್ಯ), ಗಂಗಾವತಿ ತಾಲೂಕು ಮಲ್ಲಾಪುರ ಗ್ರಾಮ ಪಂಚಾಯತಿ (ಪ.ಜಾತಿ-ಮಹಿಳೆ), ಮರಳಿ (ಹಿಂ.ವರ್ಗ-ಅ-ಮಹಿಳೆ), ಕಾರಟಗಿ (ಪ.ಜಾತಿ-ಮಹಿಳೆ), ಚೆಳ್ಳೂರು (ಪ.ಜಾತಿ), ನವಲಿ (ಹಿಂ.ವರ್ಗ-ಅ), ಡಣಾಪುರ ಗ್ರಾಮ ಪಂಚಾಯತಿಯ ಹೆಬ್ಬಾಳ (ಸಾಮಾನ್ಯ) ಹಾಗೂ ಚಿಕ್ಕಜಂತಕಲ್ ಗ್ರಾಮ ಪಂಚಾಯತಿಯ ಅಯೋಧ್ಯ (ಸಾಮಾನ್ಯ-ಮಹಿಳೆ) ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Please follow and like us:
error