ಆಧಾರ್ ಕುರಿತು ಸುಪ್ರೀಂ ಎಚ್ಚರಿಕೆ: ರಾಗ ಬದಲಿಸಿದ ಅನಿಲ ಕಂಪೆನಿಗಳು

 ಅಡುಗೆ ಅನಿಲದ ಸಬ್ಸಿಡಿ ಸಹಿತ ಸರಕಾರಿ ಸೌಲಭ್ಯವನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತನ್ನ ನಿಲುವು ತಿಳಿಸಿದ್ದು, ಆಧಾರ್ ನಂಬರ್ ಕಡ್ಡಾಯವಾಗಿ ನೀಡಲೇಬೇಕು ಎಂದು ನಿನ್ನೆ ಮೊನ್ನೆಯವರೆಗೂ ಹೇಳುತ್ತಿದ್ದ ಅನಿಲ ಕಂಪೆನಿಗಳು ಇದೀಗ ರಾಗ ಬದಲಿಸಿವೆ.
ನ್ಯಾಯಾಲಯದ ಆದೇಶ ಪಾಲಿಸದ ಬಗ್ಗೆ ಸುಪ್ರೀಂ ಕೋರ್ಟ್ ಎರಡನೆ ಬಾರಿ ಎಚ್ಚರಿಕೆ ನೀಡಿದ್ದು, ನ್ಯಾಯಾಂಗ ನಿಂದನೆಯ ಉರುಳು ಕೊರಳಿಗೆ ಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಧಾರ್ ಈಗ ಬೇಕೆಂದೇನೂ ಇಲ್ಲ. ಭವಿಷ್ಯದಲ್ಲಿ ಬೇಕಾಗಬಹುದು. ಮುಂದೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೇಳುತ್ತಿದ್ದೇವೆ. ಸಾಧ್ಯವಿದ್ದವರು ಕೊಡಲಿ, ಇಲ್ಲದಿದ್ದವರಿದ್ದರೆ ತಾವೇನೂ ಹೇಳುವುದಿಲ್ಲ ಎಂದು ಅನಿಲ ಕಂಪೆನಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಯಾವ ಅಧಿಕಾರಿಯೂ ಅಧಿಕೃತ ಹೇಳಿಕೆ ನೀಡಲು ಸಿದ್ಧನಿಲ್ಲ.
ಕಾನೂನು ರೂಪಿಸದೇ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದೀರಾ? ಆಧಾರ್ ಯೋಜನೆಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಂಡಿದ್ದೀರಿ? ಎಂದು ಪ್ರಶ್ನಿಸಿರುವ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ನೇತೃತ್ವದ ನ್ಯಾಯಪೀಠ ಇದರ ಬಗ್ಗೆ ಮಾಹಿತಿ ಕೊಡಿ ಎಂದು ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರಕಾರದ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಕೆ.ಎನ್.ಪುಟ್ಟಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ ಹೊರಡಿಸಿದ ಆದೇಶದಲ್ಲಿ ಈ ವಿಷಯವಾಗಿ ರಾಜ್ಯ ಸರಕಾರಗಳಿಂದ ಸ್ಪಷ್ಟೀಕರಣ ಬಯಸಿದೆ. ಆಧಾರನ್ನು ಸರಕಾರದ ಯಾವುದಾದರೂ ಸೇವೆಯಲ್ಲಿ ಸೇರಿಸಲಾಗಿದೆಯೇ ಎಂದು ಎಲ್ಲ ರಾಜ್ಯಗಳೂ ತಿಳಿಸಬೇಕು. ಎಲ್ಲ ರಾಜ್ಯಗಳ ವಾದ ಆಲಿಸದೆ ತೀರ್ಪು ನೀಡುವಂತಿಲ್ಲ ಎಂದು ಹೇಳಿರುವ ನ್ಯಾಯಪೀಠ, ಡಿಸೆಂಬರ್ 10ರಂದು ಮತ್ತೆ ಈ ವಿಚಾರ ಎತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.
ಆಧಾರನ್ನು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಡ್ಡಾಯಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಾಗಿದೆ. ಕೇರಳದಲ್ಲಿ ಕೆಲವು ಸಿಬಿಎಸ್‌ಸಿ ಶಾಲೆಗಳಲ್ಲೂ ಕೂಡ ಆಧಾರ್ ಕಡ್ಡಾಯಗೊಳಿಸಲಾಗಿದೆ. 18 ವರ್ಷ ಪೂರ್ತಿಯಾಗದ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿದೆ. ಅಡುಗೆ ಅನಿಲದ ಸಬ್ಸಿಡಿ ಪಡೆಯಲು ಆಧಾರ್ ಬೇಕೆಂದು ಪೆಟ್ರೋಲಿಯಂ ಸಚಿವಾಲಯ ಆದೇಶಿಸಿದೆ. ದೇಶದ ಶೇ.50ರಷ್ಟು ಮಂದಿ ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ ಎಂಬುದಾಗಿ ಕೇಂದ್ರ ಸರಕಾರ ವಾದಿಸುತ್ತಿದೆ. ಆಧಾರ್ ಕಡ್ಡಾಯ ಗೊಳಿಸಲು ಇದು ಸಮರ್ಥನೆಯಾಗುವುದಿಲ್ಲ ಎಂಬುದಾಗಿ ಅರ್ಜಿದಾರರ ಪರ ನ್ಯಾಯವಾದಿ ಶ್ಯಾಂದಿವಾನ್ ವಾದಿಸಿದ್ದಾರೆ.
ಆಧಾರ್ ಮಾಹಿತಿ ಸಂಗ್ರಹದ ವಿಧಾನ ವ್ಯಕ್ತಿಗಳ ಖಾಸಗಿತನದ ಮೇಲೆ ನಡೆಸುವ ಅತಿಕ್ರಮಣ. ಆಧಾರ್ ಎನ್ರೋಲ್‌ಮೆಂಟನ್ನು ಖಾಸಗಿ ಸಂಸ್ಥೆಗಳು ನಡೆಸುತ್ತಿರುವುದು ಗಂಭೀರ ವಿಚಾರ ಎಂದು ಸುಪ್ರಿಂ ಕೋರ್ಟ್ ಎತ್ತಿ ಹೇಳಿದೆ. ಆಧಾರ್‌ಗೆ ಸಂಗ್ರಹಿಸುವ ಮಾಹಿತಿ ಖಾಸಗಿ ವ್ಯಕ್ತಿಗಳ ವಶದಲ್ಲಿ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ನ್ಯಾಯವಾದಿ ಶ್ಯಾಂದಿವಾನ್‌ರ ವಾದವನ್ನು ನ್ಯಾಯಾಧೀಶರು ಅಂಗೀಕರಿಸಿದ್ದಾರೆ. 
ಲಿಖಿತ ಆದೇಶ ಇಲ್ಲವೇ ಇಲ್ಲ
 ಸಬ್ಸಿಡಿ ಬೇಕಿದ್ದರೆ ಆಧಾರ್ ನಂಬರ್ ಕೊಡಿ ಎಂದು ಗ್ಯಾಸ್ ಏಜೆನ್ಸಿಯವರು ಕೇಳುತ್ತಿದ್ದಾರೆ. ವಾಸ್ತವದಲ್ಲಿ ಈ ವಿಷಯವಾಗಿ ಕೇಂದ್ರ ಸರಕಾರವಾಗಲಿ, ಪೆಟ್ರೋಲಿಯಂ ಕಂಪನಿಗಳಾಗಲಿ ಅದಿಕೃತ ಲಿಖಿತ ಆದೇಶವನ್ನೇ ಹೊರಡಿಸಿಲ್ಲ.
 ಆಧಾರ್ ಪಡೆಯಲೇಬೇಕು ಎಂದು ನಿಮಗೆ ಹೇಳಿದ್ಯಾರು ಎಂದರೆ ಗ್ಯಾಸ್ ಕಂಪೆನಿಯವರು ಸೂಚಿಸಿದ್ದಾರೆ ಎನ್ನುತ್ತಾರೆ. ಲಿಖಿತ ಆದೇಶ ಇದೆಯೇ ಎಂದು ಗ್ಯಾಸ್ ಎಜೆನ್ಸಿಯವರಲ್ಲಿ ವಿಚಾರಿಸಿದರೆ, ಪೆಟ್ರೋಲಿಯಂ ಕಂಪೆನಿಯವರು ಸಭೆ ಕರೆದು ಬಾಯಿ ಮಾತಿನ ಒತ್ತಡ ಹೇರುತ್ತಿದ್ದಾರೆ ನಾವೇನು ಮಾಡಬೇಕು? ಲಿಖಿತ ಆದೇಶ ಕೋರಿದರೂ ಕೊಡುತ್ತಿಲ್ಲ. ಆದುದರಿಂದ ನಾವು ಗ್ರಾಹಕರಿಗೆ ಹೆಚ್ಚಿನ ಒತ್ತಡ ಹೇರುತ್ತಿಲ್ಲ. ಅವರಾಗಿಯೇ ಆಧಾರ್ ನಂಬರ್ ಕೊಟ್ಟರೆ ಅದನ್ನು ದಾಖಲಿಸುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ ಗ್ಯಾಸ್ ಎಜೆನ್ಸಿಯ ಮಾಲಕರು.
ಕಾನೂನು ರೂಪಿಸದೆ ಆಧಾರ್ ಕಡ್ಡಾಯ ಗೊಳಿಸುವುದನ್ನು ಸುಪ್ರೀಂ ಕೋರ್ಟ್ ಎರಡನೆ ಬಾರಿ ಆಕ್ಷೇಪಿಸಿದುದರ ಹಿಂದೆಯೇ ಕೇಂದ್ರ ಸರಕಾರದ ಇಂಧನ ಇಲಾಖೆಯ ಅಧಿಕಾರಿಗಳೂ ಎಚ್ಚೆತ್ತು ಕೊಂಡಿದ್ದು, ಆಧಾರ್ ಕೊಡುವವರು ಕೊಡಲಿ ಎಂದು ಹೇಳಿಕೆ ಬದಲಿಸಿದ್ದಾರೆ.                                                                                              varthabharati
Please follow and like us:
error