ಕುಷ್ಟಗಿ :ಆಮರಣ ಉಪವಾಸ ಸತ್ಯಾಗ್ರಹ

ಕುಷ್ಟಗಿ: ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಮತ್ತು ದುಡಿದ ಕಾರ್ಮಿಕರಿಗೆ ಕೂಲಿ ಪಾವತಿಸುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಮೂರು ದಿನಗಳನ್ನು ಪೂರೈಸಿದ್ದು ಶುಕ್ರವಾರದಿಂದ ಆಮರಣ ಉಪವಾಸ ನಡೆಸುವ ಬಗ್ಗೆ ತಿಳಿಸಲಾಗಿದೆ.
ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ರೈತರು ಕಚೇರಿ ಆವರಣದಲ್ಲಿ ಬೀಡುಬಿಟ್ಟಿದ್ದು ಬೇಡಿಕೆ ಈಡೇರುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಎರಡು ವಾರದ ಒಳಗೆ ನಿಯಮಾನುಸಾರ ಬೇಡಿಕೆಗಳನ್ನು ಈಡೇರಿಸುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಿಖಿತ ಭರವಸೆ ನೀಡಿದ್ದಾರೆ.
ಅಲ್ಲದೇ ಬುಧವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವೀರೇಶ ಬಿರಾದಾರ ಅಧಿಕಾರಿಯ ಭರವಸೆಯಂತೆ ಧರಣಿ ಕೈಬಿಡಲು ಮಾಡಿದ ಮನವಿಗೆ ಒಪ್ಪದ ರೈತರು, ಇದೇ ರೀತಿ ಹಲವು ಬಾರಿ ನೀಡಿದ ಲಿಖಿತ ಭರವಸೆಗಳು ಈಡೇರಿಲ್ಲ, ಹಾಗಾಗಿ ಕೂಲಿಹಣ ಪಾವತಿಯಾಗಬೇಕು ಮತ್ತು ಕೆಲಸ ಆರಂಭಿಸಿದ ನಂತರವಷ್ಟೇ ಧರಣಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದರು.
ಗುರುವಾರ ಸಂಜೆ ಈ ಕುರಿತು `ಪ್ರಜಾವಾಣಿ`ಯೊಂದಿಗೆ ಮಾತನಾಡಿದ ಸಂಘದ ಮುಖಂಡ ಆರ್.ಕೆ.ದೇಸಾಯಿ, ರಾಮಣ್ಣ ಭಾವಿಕಟ್ಟಿ, ದೊಡ್ಡನಗೌಡ ಪಾಟೀಲ ಇತರರು, ಈಗಲೇ ಕೆಲಸ ಆರಂಭಿಸಿದರೆ ಖಾತರಿಯ ಕೋಟ್ಯಂತರ ಹಣ ಲಪಟಾಯಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಮತ್ತು ಕೆಲ ಪಟ್ಟಭದ್ರರು ಫೆಬ್ರವರಿ ಅಂತ್ಯದವರೆಗೂ ಕಾಯುತ್ತಾರೆ. ನಂತರ ಯಂತ್ರಗಳಿಂದ ಅರೆಬರೆ ಕೆಲಸ ಆರಂಭಿಸಿ ಇಡಿ ಹಣ ನುಂಗಿಹಾಕುವ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಉದ್ಯೋಗ ಖಾತರಿ ಕೆಲಸವೂ ಇಲ್ಲ, ಜನ ಗುಳೆ ಹೋಗುತ್ತಿದ್ದಾರೆ, ಬರಗಾಲ ಕಾಮಗಾರಿಯನ್ನಾದರೂ ಆರಂಭಿಸಿ ಎಂದರೆ ಎಂದು ಜಿಲ್ಲಾಧಿಕಾರಿಯನ್ನು ಕೇಳಿದರೆ ಅರ್ಜಿ ಕೊಡಿ ಎನ್ನುತ್ತಾರೆ, ಬರಪರಿಹಾರ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುತ್ತದೆ ಎಂದು ಹೇಳುತ್ತಾರೆ. 
ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳ ದುರ್ವರ್ತನೆಯಿಂದಾಗಿ ಬಡ ರೈತರು, ಕೂಲಿಕಾರ್ಮಿಕರು ಕಂಗೆಟ್ಟು ಹೋಗಿದ್ದಾರೆ. ಸರ್ಕಾರದ ಯೋಜನೆಗಳ ಲಾಭ ಜನರಿಗಂತೂ ತಲುಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply