ಕೊಪ್ಪಳಕ್ಕೆ ೧೩ ನೇ ಸ್ಥಾನ, ಸರ್ಕಾರಿ ಶಾಲೆಗಳೇ ಮುಂದು

 ಎಸ್‌ಎಸ್‌ಎಲ್‌ಸಿ ಫಲಿತಾಂಶ 
 ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. ೮೫. ೯೦ ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಜಿಲ್ಲೆ ೧೩ ನೇ ಸ್ಥಾನ ಪಡೆದಿದೆ.  ವಿಶೇಷವೆಂದರೆ ಈ ಬಾರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಹೆಚ್ಚು ಫಲಿತಾಂಶವನ್ನು ಪಡೆದುಕೊಂಡಿದ್ದು, ಒಟ್ಟು ೪೧ ಶಾಲೆಗಳಲ್ಲಿ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.  ಶೂನ್ಯ ಫಲಿತಾಂಶ ಯಾವುದೇ ಶಾಲೆಯಲ್ಲಿ ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೧೫೬೭೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಇದರಲ್ಲಿ ೧೩೪೬೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. ೮೫. ೯೦ ರಷ್ಟು ಫಲಿತಾಂಶ ದಾಖಲಾಗಿದೆ.  ಕಳೆದ ೨೦೧೩ ರಲ್ಲಿ ಜಿಲ್ಲೆಯಲ್ಲಿ ಶೇ. ೮೧. ೯೩ ರಷ್ಟು ಫಲಿತಾಂಶ ಬಂದಿತ್ತು.  ಕಳೆದ ಬಾರಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ೧೬ ನೇ ಸ್ಥಾನ ಪಡೆದುಕೊಂಡಿತ್ತು.  ಕಳೆದ ಬಾರಿಯ ಫಲಿತಾಂಶವನ್ನು ಹೋಲಿಸಿದಾಗ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಕೊಪ್ಪಳ ಜಿಲ್ಲೆ ೧೩ನೇ ಸ್ಥಾನವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿದೆ.  ಜಿಲ್ಲೆಯಲ್ಲಿ ೧೫೯- ಸರ್ಕಾರಿ, ೨೪- ಅನುದಾನಿತ ಹಾಗೂ ೭೬- ಅನುದಾನ ರಹಿತ ಶಾಲೆಗಳಿವೆ.  ವಿಶೇಷವೆಂದರೆ ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ದಾಖಲಾಗಿದ್ದು, ಸರ್ಕಾರಿ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಿರುವುದಕ್ಕೆ ಸಾಕ್ಷಿಯಾಗಿದೆ.  ಈ ಬಾರಿ ೧೧೪ ಸರ್ಕಾರಿ ಶಾಲೆಗಳು ಶೇ. ೮೦ ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದರೆ, ೧೯- ಅನುದಾನಿತ ಶಾಲೆಗಳು ಹಾಗೂ ೬೩- ಅನುದಾನ ರಹಿತ ಶಾಲೆಗಳು ಶೇ. ೮೦ ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ. 
  ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೫೩೧ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್‌ನಲ್ಲಿ ಪಾಸಾಗಿದ್ದರೆ, ೪೫೦೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ.  ೨೮೯೯ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, ೫೫೩೭ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.  ಒಟ್ಟು ೪೧ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದ್ದು, ಇದರಲ್ಲಿ ೨೦ ಸರ್ಕಾರಿ ಶಾಲೆಗಳು, ೦೨- ಅನುದಾನಿತ ಶಾಲೆಗಳು ಹಾಗೂ ೧೯- ಅನುದಾನ ರಹಿತ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ.  ಗಂಗಾವತಿ ತಾಲೂಕಿನಲ್ಲಿ ಸರ್ಕಾರಿ-೩, ಅನುದಾನಿತ-೦೧ ಹಾಗೂ ಅನುದಾನರಹಿತ- ೧೦ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ.  ಕೊಪ್ಪಳ ತಾಲೂಕಿನಲ್ಲಿ ಸರ್ಕಾರಿ-೩, ಅನುದಾನ ರಹಿತ-೦೬.  ಕುಷ್ಟಗಿ ತಾಲೂಕಿನಲ್ಲಿ ಸರ್ಕಾರಿ-೬, ಅನುದಾನ ರಹಿತ-೦೨.  ಯಲಬುರ್ಗಾ ತಾಲೂಕಿನಲ್ಲಿ ಸರ್ಕಾರಿ-೮, ಅನುದಾನಿತ-೦೧ ಹಾಗೂ ಅನುದಾನ ರಹಿತ-೦೧ ಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ.
  ರಾಜ್ಯದಲ್ಲಿ ಈ ಬಾರಿ ಶೇ. ೮೧. ೧೯ ರಷ್ಟು ಫಲಿತಾಂಶ ಬಂದಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಶೇ. ೮೫. ೯೦ ರಷ್ಟು ಫಲಿತಾಂಶ ಬಂದಿದೆ.  ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಹಲವಾರು ತರಬೇತಿ ಶಿಬಿರಗಳನ್ನು ಆಯೋಜಿಸಿ, ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದು, ನಿರೀಕ್ಷೆಯಷ್ಟು ಅಲ್ಲವಾದರೂ, ತೃಪ್ತಿಕರ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ   ತಿಳಿಸಿದ್ದಾರೆ.
Please follow and like us:
error