ಜಿಲ್ಲೆಯ ೩೦ ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಪ್ರಸ್ತಾವನೆ- ಜನಾರ್ಧನ ಹುಲಿಗಿ

 ಜಿಲ್ಲೆಯ ಸುಮಾರು ೩೦ ಗ್ರಾಮ ಪಂಚಾಯತಿಗಳಲ್ಲಿ ಘನ-ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ೧೦ ಲಕ್ಷ ರೂ. ಗಳ ವೆಚ್ಚದಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯತಿಗಳಲ್ಲಿ ಎಲ್ಲೆಂದರಲ್ಲಿ ತಿಪ್ಪೆ ಗುಂಡಿಗಳನ್ನು ಹಾಕುವುದು, ಕಸ ಬಿಸಾಕುವುದು ಮಾಡುವುದರಿಂದ, ಸ್ವಚ್ಛತೆ ಹಾಳಾಗಿ, ಇದರ ಪರಿಣಾಮವನ್ನು ಇಡೀ ಗ್ರಾಮಸ್ಥರು ಅನುಭವಿಸಬೇಕಾಗಿದೆ.  ಇದನ್ನು ನಿವಾರಿಸಲು, ಅಂತಹ ಪ್ರಮುಖ ಗ್ರಾಮ ಪಂಚಾಯತಿಗಳಲ್ಲಿ ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದ್ದು, ಗ್ರಾಮ ಪಂಚಾಯತಿಗಳಲ್ಲಿ ನಿಗದಿತ ಸ್ಥಳವನ್ನು ಗುರುತಿಸಿ, ಅಂತಹ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುವುದು, ಇದನ್ನು ಸಾವಯವ ಗೊಬ್ಬರವನ್ನಾಗಿ ತಯಾರಿಸಿ, ರೈತೋಪಯೋಗಿಯನ್ನಾಗಿಸುವುದು, ಇದಕ್ಕೆ ಬೇಕಾದ ವಿನ್ಯಾಸ ಸಿದ್ಧಪಡಿಸಲಾಗಿದ್ದು, ಈಗಾಗಲೆ ಇಂತಹ ೩೦ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.  ಪ್ರತಿ ಗ್ರಾಮ ಪಂಚಾಯತಿಗೆ ೧೦ ಲಕ್ಷ ರೂ. ವೆಚ್ಚ ಮಾಡಲು ರೂಪುರೇಷೆ ಸಿದ್ದಪಡಿಸಲಾಗಿದ್ದು, ಇದಕ್ಕಾಗಿ ಕೃಷಿ ಇಲಾಖೆ, ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಆಯಾ ಗ್ರಾಮ ಪಂಚಾಯತಿಗಳನ್ನು ತೊಡಗಿಸಿಕೊಂಡು, ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು.  ಇದಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಿ, ಸೆ. ೨೫ ರ ಒಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ತಾ.ಪಂ. ಇಓ ತರಾಟೆಗೆ : ಕುಷ್ಟಗಿ ತಾಲೂಕಿನ ಯಲಬುಣಚಿ ಗ್ರಾಮದಲ್ಲಿ ಚಿಕೂನ್ ಗುನ್ಯಾ ರೋಗ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ತರುವುದು ಕಷ್ಟಕರವಾಗಿದೆ.  ಸೊಳ್ಳೆಗಳ ನಿಯಂತ್ರಣಕ್ಕಾಗಿ ಅಗತ್ಯ ಔಷಧಿ ಸಿಂಪರಣೆ ಕೈಗೊಳ್ಳಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕುಷ್ಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದರೂ, ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ, ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ ಅವರು ಸಭೆಗೆ ವಿವರಿಸಿದರು, ಇದಕ್ಕೆ ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ವಿವರಣೆಗೆ ಅತೃಪ್ತಿ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.  ಅಲ್ಲದೆ ಕೂಡಲೆ ಅಗತ್ಯ ಔಷಧಿ ಖರೀದಿಸಿ, ಸೊಳ್ಳೆಗಳ ನಿರ್ಮೂಲನೆಗೆ ತೀವ್ರ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ ೧೦೫ ಕೋಟಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ಕುಡಿಯುವ ನೀರು ಸರಬರಾಜು ಕಾಮಗಾರಿಗಾಗಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತಿಯು ೧೦೫. ೫೯ ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಿದ್ದು, ಇದುವರೆಗೂ ಕೇವಲ ೧೩. ೪೪ ಕೋಟಿ ರೂ. ವೆಚ್ಚವಾಗಿದೆ.  ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದ್ದು, ಅನೇಕ ಕಾಮಗಾರಿಗಳಿಗೆ ಇದುವರೆಗೂ ಟೆಂಡರ್ ಕರೆಯದೇ ಇರುವುದರಿಂದ, ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆಗಳಿದ್ದು, ತುರ್ತು ಕುಡಿಯುವ ನೀರಿನ ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳು ಅಕ್ಟೋಬರ್ ಒಳಗಾಗಿ ಪೂರ್ಣಗೊಳಿಸುವಂತೆ ಪಂಚಾಯತಿರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮುರಳಿಧರ್ ಅವರಿಗೆ ಸೂಚನೆ ನೀಡಿದರು.
ಕೌಶಲ್ಯಾಧಾರಿತ ತರಬೇತಿಗೆ ಆದ್ಯತೆ : ಪ್ರಸಕ್ತ ಸಾಲಿನಲ್ಲಿ ಎನ್.ಆರ್.ಎಲ್.ಎಮ್. (ಸಂಜೀವಿನಿ) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯಡಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ನೋಟ್‌ಬುಕ್ ಪ್ರಿಂಟಿಂಗ್, ವಿದ್ಯುತ್ ಪರಿವರ್ತಕಗಳ ದುರಸ್ತಿ, ಫ್ಯಾಷನ್ ಡಿಸೈನಿಂಗ್, ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆ ಸೇರಿದಂತೆ ಹತ್ತು ಹಲವು ಕೌಶಲ್ಯಾಧಾರಿತ ಚಟುವಟಿಕೆ ಕೈಗೊಳ್ಳಲು ತರಬೇತಿ ನೀಡಲು ಯೋಜಿಸಲಾಗಿದೆ.  ಕೈಗಾರಿಕೆ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದ ಇಲಾಖೆಗಳ ಜೊತೆಗೆ ಜಿಲ್ಲೆಯ ಪ್ರಮುಖ ಕೈಗಾರಿಕೆಗಳನ್ನೂ ಈ ಯೋಜನೆಯಲ್ಲಿ ತೊಡಗಿಸಿಕೊಂಡು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
  ಯಲಬುರ್ಗಾ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಸುಮಾರು ೩೨ ಎಕರೆ ಫಾರ್ಮ್ ಇದ್ದು, ಸಿಬ್ಬಂದಿ ಕೊರತೆ ಮತ್ತು ನಿರ್ವಹಣೆ ಅನುದಾನವಿಲ್ಲದೆ ನಿಷ್ಪ್ರಯೋಜಕವಾಗಿರುವುದರಿಂದ, ಈ ಜಮೀನನ್ನು ತೋಟಗಾರಿಕೆ, ಅರಣ್ಯ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ಹಸ್ತಾಂತರಿಸಲು ನಿರ್ಧರಿಸಲಾಯಿತು.  ಎಲ್ಲಾ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯನ್ನು ಪ್ರಾರಂಭಿಸುವುದು, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ತಿಪ್ಪೆಗುಂಡಿ, ದನಗಳನ್ನು ಕಟ್ಟುವುದು ಮುಂತಾದವುಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರಿಗೆ ಸೂಚನೆ ನೀಡಲಾಯಿತು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ. ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error