ಪರಿಸರವನ್ನು ಸಂರಕ್ಷಿಸದಿದ್ದರೆ ಅದು ನಮ್ಮನ್ನು ಸಂಹರಿಸುತ್ತದೆ.

  ಮಹಾಂತೇಶ ಚನ್ನಿನಾಯ್ಕರ
ಕೊಪ್ಪಳ :. ನಾವು ಪರಿಸರವನ್ನು ಸಂರಕ್ಷಿಸದಿದ್ದರೆ ಅದು ನಮ್ಮನ್ನು ಸಂಹರಿಸುತ್ತದೆ. ಗಿಡಮರಗಳನ್ನು ಬೆಳೆಸದಿದ್ದರೆ ದೇವರು ಮುನಿಸಿಕೊಳ್ಳತ್ತಾನೆ ಎನ್ನುವ ಭಯವನ್ನು ಜನರಲ್ಲಿ ಹುಟ್ಟಿಸಿ ಗಿಡಮರಗಳನ್ನು ಬೆಳೆಸುವುದರ ಕಡೆಗೆ ಅವರು ಗಮನಹರಿಸುವಂತೆ ಮಾಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿಯವರಾಗಲಿ, ನಗರಸಭೆಯವರಾಗಲಿ ಅವರಿಗೆ ಸಿಗುವ ಸೌಲಭ್ಯಗಳನ್ನು ನಿಲ್ಲಿಸಬೇಕು. ಅಂದಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹಿರೇಸಿಂದೋಗಿ ಸರಕಾರಿ  ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕರಾದ ಮಹಾಂತೇಶ ಚನ್ನಿನಾಯ್ಕರ ಹೇಳಿದರು. 
ಅವರು ಮಂಗಳವಾರ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ  ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡ ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. 
ಅವರು ಮುಂದುವರೆದು ಮಾತನಾಡುತ್ತ, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದಾಗಿದೆ. ಯುವಕರಿಂದ ಮಾತ್ರ ಏನಾದರು ಬದಲಾವಣೆ ತರಲು ಸಾಧ್ಯ. ಆದ್ದರಿಂದ ಯುವಕರು ಪರಿಸರವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕೆಂದು ಹೇಳಿದರು. 
 ಹಿರೇಸಿಂದೋಗಿ ಸರಕಾರಿ  ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಪ್ರತಿಯೊಬ್ಬರು ತಮ್ಮ ತಮ್ಮ ಮನೆ ಮುಂದೆ, ಹೊಲಗಳಲ್ಲಿ ಗಿಡಗಳನ್ನು ತಪ್ಪದೇ ಬೆಳೆಸಬೇಕು. ಜೀವಿಗಳಿರುವ ಏಕೈಕ ಗ್ರಹವೆಂದರೆ ಭೂಮಿ. ಇಂದು ಭೂಮಿ, ಜಲ, ಗಾಳಿ ಮಲಿನಗೊಳ್ಳುತ್ತಿವೆ. ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ಜನಾಂಗಕ್ಕೆ ಶದ್ದವಾದ ಗಾಳಿ, ನೀರು ದೊರೆಯುವದು ಕಠಿಣವಾಗುತ್ತದೆ ಎಂದರು. 
ಉಪನ್ಯಾಸಕರಾದ ಜೆ.ಪ್ರದೀಪಕುಮಾರ ಮಾತನಾಡಿ, ಭೂತಾಯಿ ವಸುಂದರೆಗೆ ಜಾಗತೀಕರಣದ ಪ್ರಭಾವದಿಂದಾಗಿ ಪರಿಸರ ನಾಶವಾಗುತ್ತಿದೆ. ಇದರಿಂದಾಗಿ ಸುನಾಮಿ, ಹವಾಮಾನ ವೈಪರಿತ್ಯ, ತಾಪಮಾನದ ಏರುಪೇರುಗಳು ಸಂಭವಿಸುತ್ತವೆ. ಹೀಗಾಗಿ ಭೂತಾಯಿ ವಸುಂದರೆ ಮುನಿದಿದ್ದಾಳೆ. ಆದ್ದರಿಂದ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಕೂಡಾ ಬಹಳ ಮಹತ್ವದ್ದಾಗಿದೆ ಎಂದರು. 
ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚನ್ನನಗೌಡ ಮಾಲಿಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು. 
ಕುಮಾರಿ ಭಾಗ್ಯಶ್ರೀ ಕುರ್ತಕೋಟಿ, ಯಲ್ಲಮ್ಮ ಮಾಲಗಿ ಪ್ರಾರ್ಥಿಸಿದರು. ಕುಮಾರಿ ಶಾರದಾ ಬೂದಿಹಾಳ ಸ್ವಾಗತಿಸಿದರು.  ಉಪನ್ಯಾಸಕರಾದ ರಾಚಪ್ಪ ಕೇಸರಬಾವಿ ನಿರೂಪಿಸಿದರು. ಕುಮಾರಿ ವಿದ್ಯಾ ಹಿರೇಸಿಂದೋಗಿ ವಂದಿಸಿದರು. 
Please follow and like us:
error