fbpx

ಮುಕ್ತ, ನ್ಯಾಯಸಮ್ಮತ ಚುನಾವಣೆ: ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟ ಡಿ.ಸಿ.

 ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಚುನಾವಣಾ ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.
  ಚುನಾವಣೆ ನಡೆಸುವ ಸಂಬಂಧದ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೊಪ್ಪಳ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೀಕ್ಷಕರೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ವಿಧಾನಸಭಾ ಚುನಾವಣೆಯನ್ನು ನಿಸ್ಪಕ್ಷಪಾತ ಹಾಗೂ ಮುಕ್ತವಾಗಿ ಶಾಂತಿಯಿಂದ ಜರುಗಿಸಲು ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರತಿ ೮-೧೦ ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು ೧೦೯ ಸೆಕ್ಟರ್ ಅಧಿಕಾರಿಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೦೩ ತಂಡಗಳಂತೆ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನೇಮಕ ಮಾಡಲಾಗಿದೆ.  ಅಲ್ಲದೆ ಪ್ರತಿ ಫ್ಲೈಯಿಂಗ್ ಸ್ಕ್ವಾಡ್‌ತಂಡದಲ್ಲಿ ವಿಡಿಯೋ ಸರ್ವೆಲನ್ಸ್ ತಂಡ ಸಹ ಕಾರ್ಯನಿರ್ವಹಿಸಿ, ವಿವಿಧ ಅಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ನಡೆಸಲಿದೆ.  ಈ ವಿಡಿಯೋ ಚಿತ್ರಗಳನ್ನು ವೀಕ್ಷಿಸಿ, ವರದಿ ಸಲ್ಲಿಸಲು ವಿಡಿಯೋ ವೀಕ್ಷಣಾ ತಂಡವನ್ನು ಸಹ ರಚಿಸಲಾಗಿದೆ.  ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಜಿಲ್ಲೆಯ ಗಡಿ ಭಾಗಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಹಣ, ಮದ್ಯ ಹಾಗೂ ಇತರೆ ಸಾಮಗ್ರಿಗಳು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಮೊಬೈಲ್ ಚೆಕ್‌ಪೋಸ್ಟ್ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.   ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಣ ಹಾಗೂ ಮದ್ಯ, ಇನ್ನಿತರೆ ಸಾಮಗ್ರಿ ಹಂಚಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.  ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಸಾಗಾಣಿಕೆಯನ್ನು ಪತ್ತೆ ಹಚ್ಚಲು  ಹೆಚ್ಚಿನ ನಿಗಾ ವಹಿಸಿದ್ದು, ಅಬಕಾರಿ ಇಲಾಖೆ, ಪೊಲೀಸ್ ಹಾಗೂ ಅಬಕಾರಿ ಜಾರಿ ಮತ್ತು  ಲಾಟರಿ ನಿಷೇಧ ದಳವೂ ಸಹ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲಿವೆ.  ಕೊಪ್ಪಳ ಜಿಲ್ಲೆಯಲ್ಲಿ ಕಳೆದೆರಡು ಚುನಾವಣೆಗಳ ಇತಿಹಾಸವನ್ನು ಅವಲೋಕಿಸಿದಾಗ, ಅಂತಹ ಯಾವುದೇ ಅಕ್ರಮಗಳು ಕಂಡುಬಂದಿಲ್ಲವಾದ್ದರಿಂದ, ಈ ಬಾರಿಯೂ ಸುಗಮ ಮತ್ತು ಶಾಂತಿಯುತ ಚುನಾವಣೆ ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. ೬೨. ೮೭ ರಷ್ಟು ಮತದಾನವಾಗಿದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸಲು, ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಜಾಗೃತಿಗೆ ಸ್ವೀಪ್ ಕಾರ್ಯಕ್ರಮದಡಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  ಈ ಬಾರಿ ಜಿಲ್ಲೆಯ ಮತದಾನದ ಪ್ರಮಾಣವನ್ನು ಶೇ. ೮೦ ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.  ಚುನಾವಣೆಗೆ ನೇಮಿಸಲಾಗಿರುವ ಅಧಿಕಾರಿಗಳಿಗೆ ಏ. ೨೩ ರಂದು ಮೊದಲ ಹಂತದಲ್ಲಿ ತರಬೇತಿ ನೀಡಲು ದಿನಾಂಕ ನಿಗದಿಪಡಿಸಲಾಗಿದ್ದು, ಮತದಾನ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಲು ಮೈಕ್ರೋ ಅಬ್ಸರ್ವರ್ (ಒiಛಿಡಿo ಔbseಡಿveಡಿs) ಗಳನ್ನು ಸಹ ನೇಮಕ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಇದರಲ್ಲಿ ಕೇಂದ್ರ ಸರ್ಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರನ್ನು ನೇಮಕ ಮಾಡಲಾಗುವುದು.  ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾ ಆಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರು ನಿರ್ಭೀತಿಯಿಂದ ಮತ ಚಲಾವಣೆ ಮಾಡುವಂತಹ ವಾತಾವರಣ ನೀಡಲು, ಮತದಾರರಿಗೆ ವಿಶ್ವಾಸ ತುಂಬುವ ಕಾರ್ಯ ಮಾಡಲಾಗುವುದು.  ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಭಾತ್ ಶಂಕರ್ ಅವರು ಮಾತನಾಡಿ, ಮತದಾನ ದಿನದಂದು ಗೈರು ಹಾಜರಿಯಿರುವ, ಹಾಗೂ ಮೃತಪಟ್ಟಿರುವ ಮತದಾರರ ಮತ ಚಲಾವಣೆಯಾಗದಂತೆ ಸೂಕ್ತ ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು
  ಸಭೆಯಲ್ಲಿ ಚುನಾವಣಾ ಪೊಲೀಸ್ ವೀಕ್ಷಕ ಎ. ಪಾರಿ, ಕೊಪ್ಪಳ ವಿಧಾನಸಭಾ ಚುನಾವಣಾ ವೀಕ್ಷಕಿ ನೀಲಂಗುಪ್ತಾ, ಕನಕಗಿರಿ ಕ್ಷೇತ್ರದ ಚುನಾವಣಾ ವೀಕ್ಷಕ ವಿ.ವಿ. ಶಾಜಿಮೋನ್, ಕುಷ್ಟಗಿ ಕ್ಷೇತ್ರ ಚುನಾವಣಾ ವೀಕ್ಷಕ ಎ.ಎಸ್.ಕೆ. ಸಿನ್ಹಾ, ಯಲಬುರ್ಗಾ ಕ್ಷೇತ್ರ ಚುನಾವಣಾ ವೀಕ್ಷಕ ಭರತ್‌ಲಾಲ್ ರಾಯ್ ಅವರು ಭಾಗವಹಿಸಿ ನಿಸ್ಪಕ್ಷಪಾತ ಚುನಾವಣೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
  ಸಭೆಯಲ್ಲಿ ಅಬಕಾರಿ ಡಿಸಿ ಅಬೀದ್ ಹುಸೇನ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!