ಅಧಿಕಾರಿಗಳ ಕಾರ್ಯಾಚರಣೆ : ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿ

ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಗುರುವಾರದಂದು ಜರುಗಬೇಕಾಗಿದ್ದ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಜಂತಕಲ್‍ನ ಹದಿನೈದೂವರೆ ವರ್ಷದ ಬಾಲಕಿಯ ವಿವಾಹವನ್ನು ತಡೆಯುವಲ್ಲಿ ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಯ ಯುನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
     ಗಂಗಾವತಿ ತಾಲೂಕು ಹಿರೇಜಂತಕಲ್‍ನ ನಾರಾಯಣಪ್ಪ ಅವರ ಹದಿನೈದೂವರೆ ವರ್ಷದ ಪುತ್ರಿಯ ವಿವಾಹವನ್ನು ದಾವಣಗೆರೆ ಜಿಲ್ಲೆ ಹರಿಯರದ ದಿ. ರಂಗಪ್ಪ ಅಳವಂಡಿ ಇವರ ಪುತ್ರನೊಂದಿಗೆ ವಿವಾಹ ಡಿ. 18 ರಂದು ಗುರುವಾರ ಹರಿಹರದ ಎಸ್‍ಎಸ್‍ಕೆ ಕಲ್ಯಾಣ ಮಂಟಪದಲ್ಲಿ ನಡೆಸಲು ಸಿದ್ಧತೆಗಳು ನಡೆದಿದ್ದವು.  ಈ ಕುರಿತು ಸಾರ್ವಜನಿಕರ ಮಾಹಿತಿಯನ್ವಯ, ಕೊಪ್ಪಳದ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು, ಹರಿಹರದ ಸಿಡಿಪಿಓ ಹಾಗೂ ಸ್ಥಳೀಯ ನಗರ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಅವರ ನೆರವಿನೊಂದಿಗೆ, ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲಾಗಿದ್ದು, ಬಾಲಕಿಯನ್ನು ದಾವಣಗೆರೆಯ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯ ಮುಂದಿನ ಶೈಕ್ಷಣಿಕ ಪುನರ್ವಸತಿ ಕಲ್ಪಿಸುವುದಾಗಿ ಯುನಿಸೆಫ್‍ನ ಸಂಯೋಜಕ ಹರೀಶ್ ಜೋಗಿ ತಿಳಿಸಿದ್ದಾರೆ.

Please follow and like us:
error

Related posts

Leave a Comment