ಸಾಧು ಕೊಟ್ಟ ೯೦ ಗೆ ಇನ್ನೊಂಚೂರು ಕಿಕ್ ಬೇಕಿತ್ತು.

-ಕೃತಿ ಕರುಗಲ್.

90 ಚಿತ್ರ ವಿಮರ್ಶೆ

   ಸಂಗೀತ ನಿರ್ದೇಶಕನಾಗಿ, ಹಾಸ್ಯನಟನಾಗಿ, ನಾಯಕ ನಟನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮ ಹಲವು ಕೊಡುಗೆನೀಡಿದ ಸಾಧು ಕೋಕಿಲ ಈ ಸಲ ನಿರ್ಮಾಪಕ ಕಮ್ ನಾಯಕನಾಗಿ ಕನ್ನಡದ ಜನರಿಗೆ ೯೦ಯ ಗಮ್ಮತ್ತು ತೋರಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. 
  ಚಿತ್ರದಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಧು ನಾಟಕಗಳಲ್ಲಿ ಬರುವಂಥ ಸೂತ್ರಧಾರನ ರೀತಿ ಕಥೆಯನ್ನು ತಮ್ಮ ಹೆಗಲಿಗೆ ಹಾಕಿಕೊಂಡು ಎಳೆದೊಯ್ಯುತ್ತಾರೆ. ಕುಡಿತದ ದಾಸರಾಗಿರುವ ನಾಲ್ಕಾರು ಗಂಡಸರ ಹಾಗೂ ಇಬ್ಬರು ಮಹಿಳೆಯರ ಕುಟುಂಬದ ಸ್ಥಿತಿಯನ್ನು ತೋರಿಸುವ ಮೂಲಕ ಮೊದಲರ್ಧದಲ್ಲಿ ಕುಡಿತದ ಕಾರಣಗಳನ್ನು ಹೇಳಿದ್ದಾರೆ. ದ್ವಿತೀಯಾರ್ಧದಲ್ಲಿ ಪರಿಹಾರಗಳನ್ನು ತೋರಿಸುವ ಮಾರ್ಗದರ್ಶಕನಾಗಿಯೂ ಗಮನ ಸೆಳೆದಿದ್ದಾರೆ. 
   ನೈಂಟಿ ಕುಡಿ ಪಲ್ಟಿ ಹೊಡಿ ಎಂದು ಹೇಳುವ ಮೂಲಕ ಪ್ರೇಕ್ಷಕರನ್ನು ಥೇಟರ್ ಕಡೆ ಕರೆಯುವ ಚಿತ್ರ ಮುಗಿದ ಮೇಲೆ ಕುಡಿದರೆ ನೈಂಟಿ ಆರಡಿ, ಮೂರಡಿ ಗ್ಯಾರಂಟಿ ಎಂಬ ಸಂದೇಶವನ್ನು ಸಾರುತ್ತದೆ. ನಡು ನಡುವೆ ಪೈರಸಿ ಸಿಡಿ, ಕನ್ನಡ ಚಿತ್ರರಂಗದ ದುಸ್ಥಿತಿ, ರಾಜ್ಯದಲ್ಲಿರುವ ಟಾಕೀಸ್‌ಗಳ ಅವ್ಯವಸ್ಥೆಗಳನ್ನ ಸಂಭಾಷಣೆಯಲ್ಲಿ ಕಣ್ಮುಂದೆ ತರುವ ೯೦ ನಿರ್ದೇಶಕ ಶಂಕರ್ ಪ್ರಯತ್ನ ಮೆಚ್ಚುವಂಥದ್ದು. ನಟ ಮಿತ್ರಾನ ಮೂಲಕ ರೌಡಿಸಂ, ರಾಜಕೀಯ, ಪ್ರಸ್ತುತ ಸಮಸ್ಯೆಗಳ, ಸರಕಾರದ ಯೋಜನೆಗಳ ಕುರಿತ ವ್ಯಂಗ್ಯ ಪ್ರಶಂಸಾರ್ಹವಾದರೂ ಕೊಂಚ ಹರಿತವಾಗಬೇಕಿತ್ತು.
   ಕುಡಿತದ ವಿಷಯವನ್ನೇ ಕಥಾವಸ್ತುವನ್ನಾಗಿಸಿಕೊಂಡು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಅಲ್ಲೆಲ್ಲಾ ಕೊನೆಗೆ ಕುಡಿಬೇಡಿ ಎಂಬ ಚಿಕ್ಕ ಸಂದೇಶ ಇತ್ತು. ಆದರೆ ೯೦ ಯಲ್ಲಿ ಅರ್ಧ ಕತೆಯ ನಂತರ ಆಲ್ಕೋಹಾಲ್ ಇಸ್ ಇಂಜೂರಿಯಸ್ ಟು ಲಿವರ್ & ಪವರ್ ಎಂಬುದನ್ನು ಹೇಳುತ್ತಾ, ಪರಿಣಾಮಗಳನ್ನು ಕೂಡಾ ತಿಳಿಸಲಾಗಿದೆ. ಈ ಕಾರಣಕ್ಕೆ ೯೦ ಮಹಿಳೆಯರಿಗೆ ಇಷ್ಟವಾಗುತ್ತದೆ. ಅದಕ್ಕೆ ೯೦ ಟೀಮ್‌ನವರು ಕಡ್ಡಾಯವಾಗಿ ಮಹಿಳೆಯರು ನೋಡಲೇಬೇಕಾದ ಚಿತ್ರ ಎಂಬ ಬರಹವನ್ನು ಪೋಸ್ಟರ್‌ನಲ್ಲಿ ಕಾಣಿಸಿದ್ದಾರೆ.
   ಪಡ್ಡೆಗಳನ್ನು ಸೆಳೆಯಲು ಪ್ರಜ್ಞಾ ಐಟಂ ಸಾಂಗ್‌ನಲ್ಲಿ ಕುಣಿಸಲಾಗಿದೆ ಮತ್ತು ಶಕೀಲಾಳನ್ನು ಆಗಾಗ ತೋರಿಸಲಾಗಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಜಾನಪದ ಗೀತೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಂಡ ಪ್ರಯೋಗಕ್ಕೆ ಪ್ರೇಕ್ಷಕರಿಂದ ಸಿಳ್ಳೆ, ಸಂತೋಷದ ಕೇಕೆ ಕೇಳಿ ಬರುತ್ತದೆ. ನಾಲ್ಕರು ಕುಟುಂಬಗಳ ಮೂಲಕ ಲವ್, ಸೆಂಟಿಮೆಂಟ್, ಕಾಮಿಡಿಯ ಉಪಕತೆಗಳು ಚಿತ್ರಕ್ಕೆ ಬೇಕಾದ ಸರಕನ್ನು ಒದಗಿಸಿವೆ. ಆದರೆ ಫೈಟ್‌ಪ್ರಿಯರಿಗೆ ೯೦ “ಕಿಕ್” ಕೊಡುವುದಿಲ್ಲ. ಒಮ್ಮೊಮ್ಮೆ ಸಿನಿಮಾ, ಧಾರವಾಹಿಯಂತೆ ಭಾಸವಾದರೂ ಆಗಾಗ ಬರುವ ಹಾಡುಗಳು ಟಿವಿ ಮುಂದೆ ಕುಳಿತಿಲ್ಲ ಎಂದು ಎಚ್ಚರಿಸುತ್ತವೆ. ೯೦ ಗೆ ದುಡ್ಡು ಸುರಿದ ಸಾಧು, ಸಂಗೀತವನ್ನೂ ನೀಡಿದ್ದಾರೆ. ಮೂರು ಜವಾಬ್ದಾರಿಗಳನ್ನು ಸಾಧುನಿರ್ವಹಿಸಿದ್ದರಿಂದ ಒಂದೇ ಹಾಡು ಸಕತ್ ಕಿಕ್ ಕೊಡುವಲ್ಲಿ ಗೆದ್ದಿದೆ.
   ೯೦ ಮೂಲಕ ಕನ್ನಡಿಗರಿಗೆ ಹೊಸ ಕಿಕ್ ಕೊಟ್ಟಿರೋ ನಿರ್ದೇಶಕ ಭರವಸೆ ಮೂಡಿಸಿದ್ದಾರೆ. ೯೦ ಸಿನಿಮಾ ಬಿಡುಗಡೆಯಾದ ಮೇಲೂ ಸಿನಿಮಾ ಕುರಿತ ಜನರ ಅಭಿಪ್ರಾಯವನ್ನು ಮುಂಚಿತವಾಗಿಯೇ ಊಹಿಸಿಕೊಂಡು ಮೂಡಿಬಂದಿರುವ ಕ್ಲೈಮ್ಯಾಕ್ಸ ಆವರ ವಿಭಿನ್ನತೆಗೆ ಹಿಡಿದ ಕನ್ನಡಿ. ಕೃಷ್ಣಕುಮಾರ್ ಛಾಯಾಗ್ರಹಣ ಖುಷಿ ಕೊಡುತ್ತದೆ. ಕಲಿಯುಗದ ಕುಡುಕ ಖ್ಯಾತಿಯ ರಾಜು ತಾಳಿಕೋಟಿ ಸಿನಿಮಾದಲ್ಲಿ ಸಾಧು ಜೊತೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡು ಕುಡುಕ ಪಾತ್ರಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಕುರಿ ಪ್ರತಾಪ್, ಮಿತ್ರಾ, ದೊಡ್ಡಣ್ಣ, ರಂಗಾಯಣ ರಘು, ನಾಗರಾಜ ಕೋಟೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 
   ೯೦ ಲೋ ಬಜೆಟ್ ಆದರೂ ಉತ್ತಮ ಕಥಾವಸ್ತು ಇರುವ ಸಿನಿಮಾ. ಇನ್ನೊಂಚೂರು ಕಿಕ್, ಪಂಚ್ ಇದ್ದಿದ್ದರೆ ಒಬ್ಬ ಪ್ರೇಕ್ಷಕ ೧೦ ಸಲ ೯೦ ಕುಡಿದರೂ ಅಲ್ಲಲ್ಲ ನೋಡಿದರೂ ಬೇಸರವಾಗುತ್ತಿದ್ದಿಲ್ಲ. ಅದರೂ ಈ ಸಿನಿಮಾ,  ಕುಡುಕರಿಗೆ ಮಾತ್ರವಲ್ಲ, ಮಹಿಳೆಯರಿಗೂ ಇಷ್ಟವಾಗುತ್ತದೆ ಎಂಬುದನ್ನು ಸೆನ್ಸಾರ್ ಮಂಡಳಿಯ ಕತ್ತರಿ ಅಲ್ಲಲ್ಲಿ ಕೆಲಸ ಮಾಡುವ ಮೂಲಕ ರುಜುವಾತುಪಡಿಸಿದೆ.
   ಡೋಂಟ್ ವರಿ ಸಾಧು, ನಿಮ್ಮ ಹಣವಂತು ವಾಪಸ್ ಬರುತ್ತದೆ. ಲಾಭವನ್ನು ನೀವು ವಿಘ್ನವಿನಾಶಕನನ್ನೇ ಕೇಳಬೇಕು.

Please follow and like us:
error