ವಿಧಾನಪರಿಷತ್ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲಿ ಶೇ. ೯೯. ೯೩ ಮತದಾನ.

ಕೊಪ್ಪಳ ಡಿ. ೨೭ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ  ಭಾನುವಾರದಂದು ಕೊಪ್ಪಳ ಜಿಲ್ಲೆಯಾದ್ಯಂತ ಸುಗಮ ಮತದಾನವಾಗಿದ್ದು, ಶೇ. ೯೯. ೮೩ ರಷ್ಟು ಮತದಾನವಾಗಿದೆ.  ಅಲ್ಲದೆ ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.
     ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಸದಸ್ಯರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೨೯೮೭ ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.
     ಗಂಗಾವತಿ ತಾಲೂಕಿನಲ್ಲಿ ಪುರುಷ-೪೧೦, ಮಹಿಳೆ-೪೫೪, ಒಟ್ಟು ೮೬೪ ಮತದಾರರಿದ್ದು, ಈ ಪೈಕಿ ಎಲ್ಲ ಮತದಾರರು ಮತ ಚಲಾಯಿಸಿದ್ದು, ಇಲ್ಲಿ ಶೇ. ೧೦೦ ರಷ್ಟು ಮತದಾನವಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ-೩೧೫, ಮಹಿಳೆ- ೩೫೯, ಒಟ್ಟು ೬೭೪ ಮತದಾರರಿದ್ದು, ಎಲ್ಲ ಮತದಾರರು ಮತದಾನ ಮಾಡಿದ್ದು, ಇಲ್ಲಿಯೂ ಸಹ ಶೇ. ೧೦೦ ರಷ್ಟು ಮತದಾನವಾಗಿದೆ.  ಕೊಪ್ಪಳ ತಾಲೂಕಿನಲ್ಲಿ ಪುರುಷ- ೩೯೪, ಮಹಿಳೆ-೪೨೧, ಒಟ್ಟು ೮೧೫ ಜನ ಮತದಾರರಿದ್ದು ಈ ಪೈಕಿ ಪುರುಷ-೩೯೪, ಮಹಿಳೆ-೪೨೦, ಒಟ್ಟು- ೮೧೪ ಜನ ಮತದಾನ ಮಾಡಿದ್ದಾರೆ.  ಇಲ್ಲಿ ಶೇ. ೯೯. ೮೮ ರಷ್ಟು ಮತದಾನವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ-೨೯೮, ಮಹಿಳೆ- ೩೩೬, ಒಟ್ಟು ೬೩೪ ಮತದಾರರ ಪೈಕಿ ಪುರುಷ-೨೯೭, ಮಹಿಳೆ-೩೩೬, ಒಟ್ಟು ೬೩೩ ಜನರು ತಮ್ಮ ಮತ ಚಲಾಯಿಸಿದ್ದಾರೆ.  ಇಲ್ಲಿ ಶೇ. ೯೯. ೮೪ ರಷ್ಟು ಮತದಾನವಾಗಿದೆ.
     ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಸ್ಥಾಪಿಸಲಾಗಿದ್ದ ಒಟ್ಟು ೧೬೧ ಮತಗಟ್ಟೆಗಳಲ್ಲೂ ಮತದಾನ ಸುಗಮ ಹಾಗೂ ಶಾಂತಿಯುತವಾಗಿ ಜರುಗಿದೆ.  ಬೆಳಿಗ್ಗೆಯಿಂದಲೇ ತುರುಸಿನಿಂದ ನಡೆದ ಮತದಾನದ ಕಾರಣ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ. ೧೧. ೪೫ ರಷ್ಟು ಮತದಾನವಾಯಿತು.  ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ತಮ್ಮ ಮತ ಚಲಾವಣೆಯ ಹಕ್ಕು ಚಲಾಯಿಸಲು ಮುಂದಾಗಿದ್ದರಿಂದ ಶೇ. ೭೦. ೨೭ ರಷ್ಟು ಮತದಾನವಾಯಿತು.  ಇದರಲ್ಲಿ ಗಂಗಾವತಿ ತಾಲೂಕು- ಶೇ. ೭೧. ೩೦, ಕುಷ್ಟಗಿ- ಶೇ. ೭೨. ೧೧, ಕೊಪ್ಪಳ-ಶೇ. ೭೨. ೭೫ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಶೇ. ೬೩. ೭೨ ರಷ್ಟು ಮತದಾನವಾಯಿತು.   ಮಧ್ಯಾಹ್ನ ೦೨ ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. ೯೮. ೮೬ ರಷ್ಟು ಮತದಾನವಾಯಿತು.  ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ಶೇ. ೧೦೦ ರಷ್ಟು ಮತದಾನವಾಗಿತ್ತು.  ಇಲ್ಲಿನ ೮೬೪ ಮತದಾರರ ಪೈಕಿ ಎಲ್ಲ ಮತದಾರರೂ ಮಧ್ಯಾಹ್ನ ೨ ಗಂಟೆಯ ಹೊತ್ತಿಗೆ ಮತ ಚಲಾಯಿಸಿದ್ದರು.  ಉಳಿದಂತೆ ಕುಷ್ಟಗಿ- ಶೇ. ೯೭. ೧೮, ಕೊಪ್ಪಳ- ಶೇ. ೯೯. ೨೬ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಶೇ. ೯೮. ೫೮ ರಷ್ಟು ಮತದಾನವಾಯಿತು.  ಮಧ್ಯಾಹ್ನ ೨ ಗಂಟೆಯ ಹೊತ್ತಿಗಾಗಲೆ ಕೊಪ್ಪಳ ತಾಲೂಕಿನ ಕೋಳೂರು, ಹಿರೇಸಿಂದೋಗಿ, ಬಿಸರಳ್ಳಿ, ಅಳವಂಡಿ, ಕವಲೂರು ಹಾಗೂ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮಗಳ ಗ್ರಾಮ ಪಂಚಾಯತಿಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದು ಕಂಡುಬಂದಿತು.  ಕೋಳೂರು ಗ್ರಾಮ ಪಂಚಾಯತಿಯ ಮತಗಟ್ಟೆಯಲ್ಲಿ ಗ್ರಾ.ಪಂ. ಸದಸ್ಯರೋರ್ವರು ಸಹಾಯಕರ ನೆರವಿನೊಂದಿಗೆ ಮತ ಚಲಾಯಿಸಿದ್ದು ಕಂಡುಬಂದಿತು.  ಮತದಾನಕ್ಕೆ ಸಂಜೆ ೦೪ ಗಂಟೆಯವರೆಗೆ ಅವಕಾಶವಿದ್ದರೂ, ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನ ೩ ಗಂಟೆಯ ವೇಳೆಗಾಗಲೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.  ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ. ೩೦ ರಂದು ಮತ ಎಣಿಕೆ ಕಾರ್ಯ ರಾಯಚೂರಿನಲ್ಲಿ ನಡೆಯಲಿದೆ.
Please follow and like us:
error