ಪ್ರತಿವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುವ ಗ್ರಾಮಗಳಿಗೆ ಶಾಶ್ವತ ಯೋಜನೆ ರೂಪಿಸಿ- ಕೆ. ರತ್ನಪ್ರಭ

  ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುವ ಗ್ರಾಮಗಳನ್ನು ಗುರುತಿಸಿ, ಅಂತಹ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ರತ್ನಪ್ರಭ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯಲ್ಲಿನ ಬರಪರಿಸ್ಥಿತಿ ಪರಿಶೀಲನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸಾಮಾನ್ಯವಾಗಿ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬಹಳಷ್ಟು ಗ್ರಾಮಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ.  ಇಂತಹ ಗ್ರಾಮಗಳ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ, ಈ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಸಿ, ಯೋಜನೆಗಳನ್ನು ರೂಪಿಸಿ, ಬರುವ ಆರ್ಥಿಕ ವರ್ಷದಲ್ಲಿ ಯೋಜನೆಗಳು ಜಾರಿಯಾಗುವ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕು.  ರಾಜೀವ್‌ಗಾಂಧಿ ಸಬ್‌ಮಿಷನ್ ನಂತಹ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳು ತೀವ್ರ ಸಮಸ್ಯೆ ತಲೆದೋರುವ ಗ್ರಾಮಗಳಿಗೆ ವರದಾನವಾಗಿದೆ.  ಸದ್ಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಗಳ ಪೈಕಿ ಶ್ರೀರಾಮನಗರ, ಆನೆಗೊಂದಿ ಮತ್ತು ಕಾರಟಗಿಯ ಯೋಜನೆಗಳು ಮಾರ್ಚ್ ತಿಂಗಳಾಂತ್ಯದ ವೇಳೆಗೆ ನೀರು ಪೂರೈಕೆಗೆ ಸಿದ್ಧವಾಗಲಿವೆ ಎಂಬುದಾಗಿ ತಿಳಿದುಬಂದಿದ್ದು, ಉಳಿದ ಯೋಜನೆಗಳ ಅನುಷ್ಠಾನ ಕಾರ್ಯ ತ್ವರಿತಗತಿಯಲ್ಲಾಗಬೇಕು.  ತಹಸಿಲ್ದಾರರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಸೋಮವಾರ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದುಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.  ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ನಡೆಸಲಾಗುವ ಜನಸ್ಪಂದನ ಸಭೆಗಳು ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಬೇಕು.  ಇದರಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಸೂಚನೆ ನೀಡಿದರು.
  ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ವಿಸ್ತರಣೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಲಾಗಿದ್ದರೂ ಫಲಿತಾಂಶ ಮಾತ್ರ ತೃಪ್ತಿಕರವಾಗಿಲ್ಲ.  ಅಧಿಕಾರಿಗಳು ಸ್ಥಳೀಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು, ಸಂಘಗಳ ಸಹಯೋಗದೊಂದಿಗೆ ಅರಣ್ಯ ಪ್ರದೇಶಾಭಿವೃದ್ಧಿಗೆ ಮುಂದಾಗಬೇಕು.  ಈ ಯೋಜನೆಯಡಿ ಅರಣ್ಯ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗಿದ್ದರೂ ಅನುಷ್ಠಾನ ಸಮರ್ಪಕವಾಗಿಲ್ಲ.  ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿ ಜಿಲ್ಲೆಗೆ ಸುಮಾರು ೬. ೩೫ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ೫. ೨೬ ಕೋಟಿ ರೂ. ವೆಚ್ಚವಾಗಿದೆ.  ಆದರೆ ಶೌಚಾಲಯಗಳ ನಿರ್ಮಾಣ, ಗ್ರಾಮ ನೈರ್ಮಲ್ಯ, ಸ್ವಚ್ಛತೆ ಜಿಲ್ಲೆಯಲ್ಲಿ ತೃಪ್ತಿಕರವಾಗಿಲ್ಲ.  ಯೋಜನೆಯ ಅನುಷ್ಠಾನ ಸಮಾಧಾನಕರವಾಗಿಲ್ಲ.  ಆಯಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜನೆಯ ಅನುಷ್ಠಾನ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಿ, ಒಂದು ವಾರದೊಳಗಾಗಿ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು.  ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ತಮ್ಮ ವಿವಿಧ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಜಮೀನು ಪಡೆದಿದ್ದು, ಬಹಳಷ್ಟು ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ಎಷ್ಟು ಪ್ರಮಾಣದ ಜಮೀನು ಪಡೆದಿವೆ,  ಅದರ ಸದ್ಬಳಕೆ, ಅಗತ್ಯಕ್ಕಿಂತ ಹೆಚ್ಚು ಜಮೀನು ಪಡದಿರುವ ಪ್ರಕರಣಗಳನ್ನು ತಹಸಿಲ್ದಾರರು ಪರಿಶೀಲಿಸಿ, ಸಮಗ್ರ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಾದ ಕೆ. ರತ್ನಪ್ರಭ ಅವರು ತಹಸಿಲ್ದಾರರುಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್, ಸಹಾಯಕ ಆಯುಕ್ತ ಕೆ. ಶರಣಬಸಪ್ಪ, ಉಪಕಾರ್ಯದರ್ಶಿ ಅನ್ನದಾನಯ್ಯ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply