ಬ್ರೇಕಿಂಗ್ ನ್ಯೂಸ್ ಚಿತ್ರ ವಿಮರ್ಶೆ

                      ಟಿವಿ ಸ್ಟುಡಿಯೋ ಎಂಬ ಬಲಿಪೀಠಕ್ಕೆ ಇದು ಸಕಾಲ ದರ್ಶನ      ಅಯ್ಯೋ ಟಿವಿಯವ್ರು ಕಡ್ಡಿನೇ ಗುಡ್ಡಾ ಮಾಡ್ತಾರೆ ಬಿಡ್ರಿ ಎಂಬ ಮಾತು ಹೊಸತೇನಲ್ಲ. ಅಂದೊಂದು ಕಾಲ ಇತ್ತು, -ಅಯ್ಯೋ ಗುಡ್ಡಾನೇ ಬಿದ್ದಿದೆ ಬನ್ರಪಾ ಎಂದರೂ ಯಾರೂ ಬರ‍್ತಿರ‍್ಲಿಲ್ಲ. ಈಗಿನ ಕಾಲ ಹೇಗಿದೆಯಂದರೆ ಮನೆಯೊಳಗೆ ಬೆಕ್ಕು ಹೋಗಿ ೩ ಗಂಟೆಯಾದರೂ ಹೊರಬಂದಿಲ್ಲ ಎಂಬ ಸುದ್ದಿಯನ್ನೇ ಬಿತ್ತರಿಸಲು ಹತ್ತಾರು ಗಂಟೆಗಳ ಕಾಲ ಲೈವ್ ವ್ಯಾನ್ ಬಂದು ನಿಲ್ಲುತ್ತವೆ. ಮಾಧ್ಯಮಗಳು ಸೆನ್ಷೆಷನಲ್ ಹೆಸರಿನಲ್ಲಿ  ಮಾನವೀಯತೆ ಮರೆಯುತ್ತಿವೆ ಎಂಬುದನ್ನು ನಾಗತಿಹಳ್ಳಿ ತಮ್ಮ ಸಕಾಲದಲ್ಲಿ ಬ್ರೇಕಿಂಗ್‌ನ್ಯೂಸ್ ಮೂಲಕ ಹೇಳಿದ್ದಾರೆ. ಜೊತೆಗೆ ಗೆದ್ದಿದ್ದಾರೆ ಕೂಡಾ.
     ಅಮೃತಧಾರೆ ಸಿನಿಮಾದಲ್ಲೇ ಮೇಷ್ಟ್ರು ಗೋಲ್ಡನ್ ಸ್ಟಾರ್ ಗಣೇಶ್ ಮೂಲಕ ಟಿವಿ ವಾರ್ತೆಗಳನ್ನು ಅಣುಕಿಸಿದ್ದರು. ತಮ್ಮ ಒಲವೇ ಜೀವನ ಲೆಕ್ಕಾಚಾರದಲ್ಲಿ ಭವಿಷ್ಯ, ಜಾತಕವನ್ನು ಹೇಳುವ ನೆಪದಲ್ಲಿ ಮುಂಜಾನೆ ಟಿವಿ ಮುಂದೆ ಕೂತವರಿಗೆ ಹುಳಬಿಡುವ ಜ್ಯೋತಿಷಿಗಳನ್ನು ಟೀಕಿಸಿದ್ದರು. ಈಗ ಇಡೀ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ಪ್ರೀತಿ ಎಂಥೆಂಥ ಸುದ್ದಿಗಳನ್ನು ಸೃಷ್ಟಿಸಬಲ್ಲದು ಎಂದು ಕಾಲ್ಪನಿಕ ಕತೆಯ ಮೂಲಕ ಪ್ರೇಕ್ಷಕರ ಮನ ಮುಟ್ಟಿದ್ದಾರೆ.

       ಕ್ಯಾಮರಾ, ಕನ್ನಡಿಯನ್ನ ಪ್ರೀತಿಸದೇ ಇರೋರು ತುಂಬಾ ಅಪರೂಪ ಎಂದು ನಾಗತಿಹಳ್ಳಿಯವರು ಬರೆದಿರುವ ಈ ಒಂದು ಮಾತೇ ಚಿತ್ರದ ಕತೆಯನ್ನು ಹೇಳಿಬಿಡುವಷ್ಟು ಅರ್ಥಗರ್ಭಿತವಾಗಿದೆ.  ನನ್ನಿಂದ ಸಮಾಜಕ್ಕೆ ಒಳಿತಾಗಬೇಕು. ಮಾಧ್ಯಮದ ಮೂಲಕ ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂಬ ತುಡಿತ ಇಟ್ಟುಕೊಂಡ ಯುವಕ ಪತ್ರಿಕೋದ್ಯಮ ಮುಗಿಸಿ ಚಾನೆಲ್‌ವೊಂದರ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಶುರುಮಾಡುತ್ತಾನೆ. ಕ್ರಮೇಣ ಆತ ವರದಿಗಾರಿಕೆಗೂ ಸೈ, ಬಾಸ್  ಬೈಗುಳಕ್ಕೂ ಸೈ, ಯಾಕಂದ್ರೆ ಈತ ಮಾಡುವ ಯಾವುದೇ ಕೆಲಸ ಎಡವಟ್ಟು. ಸುದ್ದಿ ಕೊಡಬೇಕು ಎಂಬುದನ್ನು ಬಿಟ್ಟರೆ ಸೆನ್ಷೆಷನಲ್ ಕೊಡಬೇಕು ಎಂಬ ತುಡಿತ ಇಲ್ಲ. ಲೋಕಾಯುಕ್ತರ ಸಂದರ್ಶನ ಪಡೆಯಲು ಪರವಾನಿಗೆ ಸಿಕ್ಕ ವಿಷಯ ಸಕಾಲ ಚಾನೆಲ್‌ನಲ್ಲಿ ಪ್ರೋಮೋ ಆಗುತ್ತದೆ. ಲೋಕಾಯುಕ್ತರು ಯಾರಿಗೂ ಪರವಾನಿಗೆ ಕೊಟ್ಟಿಲ್ಲ ಎಂದು ಚಾನೆಲ್‌ನ ಮುಖ್ಯಸ್ಥರನ್ನೇ ದಬಾಯಿಸುತ್ತಾರೆ. ಇದರಿಂದಾಗಿ ನಾಯಕ ಕೆಲಸ ಕಳೆದುಕೊಳ್ಳುತ್ತಾನೆ.

       ಭೂಹಗರಣದಲ್ಲಿ ಸಿಲುಕಿರುವ ರಾಜಕಾರಣಗಳಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಸೋಮಶೇಖರ ಎಂದಿಗೂ ಕರ್ತವ್ಯಕ್ಕೆ ಚ್ಯುತಿ ತರುವವರಲ್ಲ. ಭೂಹಗರಣದ ದಾಖಲೆಗಳನ್ನು ಲೋಕಾಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಶೀಘ್ರದಲ್ಲಿಯೇ ಲೂಟಿಕೋರರು ಕಂಬಿ ಹಿಂದೆ ಹೊರಡಲು ಸಿದ್ಧರಾಗಿ ಎಂದು ಕಹಳೆ ಊದಿದ್ದೇ ತಡ ಸಿನಿಮಾ ವಿಸ್ತಾರವಾಗುತ್ತಾ ಸಾಗುತ್ತದೆ. ಲೋಕಾಯುಕ್ತರ ಏಕಮಾತ್ರ ಪುತ್ರಿಗೆ ಅತಿಯಾದ ಕಾಳಜಿ ಮನೆಯಲ್ಲಿದ್ದು ಖೈದಿಯ ಭಾವ, ಆಕೆಗೆ ಹೇಗಾದರೂ ಸರಿ ಮನೆ ಎಂಬ ಜೈಲಿನಿಂದ ಸ್ವಾತಂತ್ರ್ಯ ಪಡೆಯಬೇಕು ತುಡಿತ, ಖಳರಿಗೆ ಲೋಕಾಯುಕ್ತರ ಮಗಳನ್ನು ಅಪಹರಿಸಬೇಕು ಎಂಬ ಸೇಡು, ನಾಯಕನಿಗೆ ಹೇಗಾದರೂ ಸರಿ ಕೆಲಸ ಉಳಿಸಿಕೊಳ್ಳಬೇಕೆಂಬ ಹಠ…   
        ರಾಯಲ್‌ಸ್ಟಾರ್ ಅಜೇಯ್ ಈ ಚಿತ್ರದ ಮೂಲಕ ಅಭಿನವ ಕೃಷ್ಣನಾಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ರಾಧಿಕಾ ಪಂಡಿತ್ ಅವರದ್ದು ಚಿನಕುರಳಿಯಷ್ಟೇ ಲವಲವಿಕೆಯ ಅಭಿನಯ. ಅನಂತ್‌ನಾಗ್ ಚಿತ್ರಕ್ಕೊಂದು ರತ್ನ. ಅವರು ಅಭಿನಯಿಸಿದರೂ ನಿಜವಾಗಿಯೂ ಅವರೇ ಲೋಕಾಯುಕ್ತರು ಎನ್ನುವಷ್ಟು ನೈಜವಾಗಿ ನಟಿಸಿದ್ದಾರೆ. ಸಾಧುಕೋಕಿಲಾ, ಬಿರಾದಾರ್, ಮಂಡ್ಯ ರಮೇಶ್ ಕೊನೆಗೆ ನಾಗತಿಹಳ್ಳಿ ಮೇಷ್ಟ್ರು ಹೀಗೆ ಬಂದು ಹಾಗೆ ಹೋಗುತ್ತಾರೆ. ಅರುಣಸಾಗರ್, ಚಿದಾನಂದ, ರಂಗಾಯಣ ರಘು ಪಾತ್ರಕ್ಕೆ ನ್ಯಾ ಒದಗಿಸಿದ್ದಾರೆ. ಸ್ಟಿಫನ್ ಪ್ರಯೋಗ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಎರಡು ಹಾಡುಗಳು ಇಂಪಾಗಿವೆ. ಕೃಷ್ಣಕುಮಾರ್ ಛಾಯಾಗ್ರಹಣ ಮುದ ನೀಡುತ್ತದೆ. ಸಾಹಸ ಸಂಯೋಜಿಸಿರುವ ಥ್ರಿಲ್ಲರ್ ಮಂಜು ಫೈಟಿನಲ್ಲಿ ಥ್ರಿಲ್ ಕೊಡುತ್ತಾರೆ. ಕ್ಲೈಮ್ಯಾಕ್ಸ ಫೈಟ್‌ಗೆ ಹಳೇ ಸಿನಿಮಾಗಳಂತೆ ಕಾಮಿಡಿ ಟಚ್ ನೀಡಿ ಎಲ್ಲ ಮುಗಿದ ಮೇಲೆ ಪೊಲೀಸರು ಬರುವ ಕಲ್ಪನೆ ಪ್ರೇಕ್ಷಕರಿಗೆ ೮೦ರ ದಶಕದ ಸಿನಿಮಾಗಳನ್ನು ನೆನಪಿಸುತ್ತದೆ. ಕಾಸು ಹಾಕಿದ ಹನುಮಂತರಾಯ, ರಾಜ್‌ಕುಮಾರ್ ಬಂಡವಾಳದ ಬಗ್ಗೆ ಚಿಂತೆ ಪಡಬೇಕಿಲ್ಲ.
     ಲೋಕಾಯುಕ್ತರ ಹೆಸರಿನಲ್ಲಿ ವರದಿಗಾರನಿಗೆ ಪರವಾನಿಗೆ ಕೊಟ್ಟವರು ಯಾರು, ಕೆಲಸ ಹೋದ ಮೇಲೆ ನಾಯಕ ಏನು ಮಾಡುತ್ತಾನೆ. ಭೂಹಗರಣದಲ್ಲಿ ಸಿಲುಕಿರುವ ಖಳರು ಲೋಕಾಯುಕ್ತರಿಗೆ ಧಮಕಿ ಹಾಕಿ ಜೈಲು ಪಾಲಾಗುತ್ತಾರಾ, ಲೋಕಾಯುಕ್ತರು ಏನು ಮಾಡುತ್ತಾರೆ ಮತ್ತಿತರ ಕುತೂಹಲಗಳು ನಿಮ್ಮಲ್ಲಿ ಹುಟ್ಟಿದರೆ ಸಿನಿಮಾ ನೋಡಿ. 
-ಚಿತ್ರಪ್ರಿಯ ಸಂಭ್ರಮ್.
Please follow and like us:
error