ಸರ್ಕಾರದ ಎಲ್ಲ ಸೌಲಭ್ಯ ಪಡೆಯಲು ಇನ್ನು ಮುಂದೆ ಆಧಾರ್ ಅತ್ಯಗತ್ಯ

ಮಕ್ಕಳನ್ನು ಶಾಲೆಗೆ ಸೇರಿಸಲು, ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಸರ್ಕಾರದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು, ಇನ್ನುಮುಂದೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಇದು ಸರ್ಕಾರ ಮಾಡಿರುವ ಕಟ್ಟಾಜ್ಞೆ. ಏನಿದು ಆಧಾರ್, ಇತ್ತೀಚೆಗೆ ಎಲ್ಲರ ಬಾಯಲ್ಲಿ, ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಹೀಗೆ ಎಲ್ಲೆಲ್ಲಿಯೂ ಕೇಳಿಬರುತ್ತಿರುವ ಒಂದೇ ಪದ ಆಧಾರ್ ಎಂದುಕೊಂಡರೆ, ತಮ್ಮ ಊಹೆ ನಿಜ.
ಪ್ರತಿಯೊಬ್ಬ ಭಾರತೀಯ ನಿವಾಸಿಗೆ ಒಂದು ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದೇ ಆಧಾರ್ ಯೋಜನೆ. ವಿಶ್ವದಲ್ಲಿಯೇ ಪ್ರಪ್ರಥಮ ಹಾಗೂ ವಿಶಿಷ್ಟವಾದ ಈ ಪ್ರಕ್ರಿಯೆಯಲ್ಲಿ ಭಾರತ ಶತಕೋಟಿಗೂ ಮೀರಿದ ನಿವಾಸಿಗಳಿಗೆ ದೇಶದ ಗೌರವಾನ್ವಿತ ಪ್ರಜೆ ಎಂದು ಹೇಳಿಕೊಳ್ಳಲು ಅಗ್ಯತವಾದ ಗುರುತಿನ ಚೀಟಿ ದೊರೆಯುತ್ತದೆ. ಭಾರತ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಗುಲಬರ್ಗಾ ವಿಭಾಗದ ೬ ಜಿಲ್ಲೆಗಳಿಗೂ ಎರಡನೇ ಹಂತದಲ್ಲಿ ಅನುಷ್ಠಾನಗೊಳ್ಳಲಿದ್ದು, ಇದೇ ಜೂನ್ ೨೭ ಕ್ಕೆ ಕೊಪ್ಪಳ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ರಾಜ್ಯದಲ್ಲಿ ಆಧಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಇಅಡಳಿತ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ನೇಮಿಸಿದೆ. ನೋಂದಣಿ ಪ್ರಕ್ರಿಯೆ ನಡೆಸಲು ಇಆಡಳಿತ ಕೇಂದ್ರವನ್ನು (ಅeಟಿಣಡಿe ಜಿoಡಿ e -ಉoveಡಿಟಿಚಿಟಿಛಿe) ರಿಜಿಸ್ಟ್ರಾರ್ ಎಂದು ಗುರುತಿಸಿದೆ. ಈ ಸಂಸ್ಥೆಯ ಮೂಲಕ ಸರ್ಕಾರ ಪ್ರಾಯೋಗಿಕವಾಗಿ ನೋಂದಣಿ ಪ್ರಕ್ರಿಯೆಯನ್ನು ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ೨೦೧೦ರ ಅಕ್ಟೋಬರ್ ೮ ರಂದು ಪ್ರಾರಂಭಿಸಿದ್ದು, ಈ ಜಿಲ್ಲೆಗಳಲ್ಲಿ ಶೇ. ೯೮ ರಷ್ಟು ನೋಂದಣಿ ಪೂರ್ಣಗೊಂಡು ಈ ಜಿಲ್ಲೆಗಳು ಆಧಾರ್ ಸಂಖ್ಯೆ ನೀಡಿದ ರಾಷ್ಟ್ರದ ಪ್ರಥಮ ಜಿಲ್ಲೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಲಿವೆ.
ಏನಿದು ಆಧಾರ್ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕೋಟಿಗಟ್ಟಲೆ ಅನುದಾನವನ್ನು ಖರ್ಚು ಮಾಡುತ್ತಿದೆ. ಆದರೆ ಯೋಜನೆಯ ಲಾಭ ಹೆಚ್ಚಾಗಿ ಅನರ್ಹರ ಪಾಲಾಗುತ್ತಿದೆ, ಅಲ್ಲದೆ ಶ್ರೀಸಾಮಾನ್ಯನಿಗೆ ಲಭಿಸಬೇಕಾಗಿರುವ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬುದನ್ನು ಮನಗಂಡಿರುವ ಸರ್ಕಾರ, ಇಂತಹ ತೊಂದರೆಯನ್ನು ನಿವಾರಿಸಿ, ಅರ್ಹ ಫಲಾನುಭವಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂಬ ಆಶಯದೊಂದಿಗೆ ಆಧಾರ್ ಯೋಜನೆಯನ್ನು ಜಾರಿಗೊಳಿಸಿದೆ. ಆಧಾರ್ ಯೋಜನೆಯಲ್ಲಿ ಪ್ರತಿಯೊಬ್ಬ ಭಾರತೀಯ ನಿವಾಸಿಗೆ ೧೨ ಅಂಕಿಗಳಿರುವ ಒಂದು ವಿಶಿಷ್ಟ ಗುರುತಿನ ಸಂಖ್ಯೆ ಇರುವ ಕಾರ್ಡನ್ನು ನೀಡಲಾಗುತ್ತದೆ. ಸರ್ಕಾರದ ವಿವಿಧ ಜನ ಕಲ್ಯಾಣ ಯೋಜನೆಗಳ ಪ್ರಯೋಜನ ನೇರವಾಗಿ ಫಲಾನುಭವಿಗೆ ದೊರೆಯುವಂತೆ ಮಾಡುವುದೇ ಈ ಯೋಜನೆಯ ಧ್ಯೇಯವಾಗಿದೆ.
ಶ್ರೀ ಸಾಮಾನ್ಯನ ಅಧಿಕಾರದ ದ್ಯೋತಕವಾದ ಈ ಸಂಖ್ಯೆ ಭಾರತದ ತಾಂತ್ರಿಕ ನೈಪುಣ್ಯದ ಪ್ರತೀಕವಾಗಿರುವುದರೊಂದಿಗೆ ರಾಷ್ಟ್ರೀಯ ಏಕತೆಗೆ ಸಹಕಾರಿಯಾಗಲಿದೆ. ನವಜಾತ ಶಿಶುವಿನಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲರಿಗೂ ಈ ಸಂಖ್ಯೆ ಲಭ್ಯವಾಗುತ್ತದೆ. ಈ ಸಂಖ್ಯೆ ಪಡೆಯಲು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಆಧಾರವಾಗಲಿದ್ದು, ಮಕ್ಕಳನ್ನು ಶಾಲೆಗೆ ಸೇರಿಸಲು, ವೃದ್ಧಾಪ್ಯ ವೇತನ ಪಡೆಯಲು, ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಹಾಗೂ ಆರೋಗ್ಯ ಸೇವೆಯಂತಹ ವ್ಯಕ್ತಿಗತ ಯೋಜನೆಗಳ ಲಾಭ ಪಡೆಯಲು ಆಧಾರ ಸಂಖ್ಯೆ ಶಕ್ತಿಯುತವಾದ ಸಾಧನವಾಗಿ ಕಾರ್ಯನಿರ್ವಹಿಸಲಿದೆ.
ಆಧಾರ್ ಪಡೆಯುವ ವಿಧಾನ:
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ಬಾರಿ ಜಿಲ್ಲಾಧಿಕಾರಿಗಳ ನೇತೃತ್ವದ ಯೋಜನಾ ಅನುಷ್ಠಾನ ಮತ್ತು ಸಮನ್ವಯ ಸಮಿತಿಯದಾಗಿರುತ್ತದೆ. ತಾಲ್ಲೂಕಾ ಮಟ್ಟದಲ್ಲೂ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂತಹುದೇ ಸಮಿತಿ ರಚನೆಯಾಗುತ್ತದೆ. ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ ಹಾಗೂ ಗ್ರಾಮಗಳ ಜನಸಂಖ್ಯೆ ಸಂಗ್ರಹಿಸಿದ ನಂತರ ಆಧಾರ್ ಸಂಖ್ಯೆ ನೀಡುವುದಕ್ಕಾಗಿ ನೋಂದಣಿ ಕೇಂದ್ರ ಸ್ಥಾಪಿಸಲು ಸ್ಥಳಗಳನ್ನು ಗುರುತಿಸಿ ಅಲ್ಲಿ ಆಧಾರ್ ವಿತರಣಾ ಕೇಂದ್ರ ತೆರೆಯಲಾಗುತ್ತದೆ. ನಿಗದಿತ ದಿನಾಂಕದಂದು ಈ ಕೇಂದ್ರಕ್ಕೆ ತೆರಳಿ, ಅಲ್ಲಿ ಸ್ವಯಂ ವಿವರ ನೀಡುವ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ತಮ್ಮ ವಿಳಾಸ ಮತ್ತು ಗುರುತಿನ ದೃಢೀಕರಣ ದಾಖಲೆಗಳೊಂದಿಗೆ ನೀಡಬೇಕು. ಈ ಮಾಹಿತಿ ಪರಿಶೀಲನೆಯ ನಂತರ ವಿವರಗಳನ್ನು ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಅರ್ಜಿದಾರರು ಕಂಪ್ಯೂಟರಿನಲ್ಲಿ ಅಳವಡಿಸುವ ಈ ಮಾಹಿತಿ ಪರೀಕ್ಷಿಸಲು ಅವಕಾಶವಿರುತ್ತದೆ. ನಂತರ ವೆಬ್‌ಕ್ಯಾಮ್‌ನಲ್ಲಿ ಅರ್ಜಿದಾರರ ಭಾವಚಿತ್ರ ತೆಗೆಯಲಾಗುತ್ತದೆ. ಅರ್ಜಿದಾರರ ಎರಡೂ ಅಕ್ಷಿಪಟಲಗಳ (ಬೈಯೊಮೆಟ್ರಿಕ್) ಸ್ಕ್ಯಾನ್ ಮಾಡಲಾಗುವುದು ಹಾಗೂ ಎರಡೂ ಕೈಗಳ ಹತ್ತು ಬೆರಳುಗಳ ಬೆರಳಚ್ಚನ್ನು ಸಂಗ್ರಹಿಸಲಾಗುವದು. ಈ ಪ್ರಕ್ರಿಯೆಯ ನಂತರ ಒಂದು ತಾತ್ಕಾಲಿಕ ಸ್ವೀಕೃತಿ ಪತ್ರ ನೀಡುತ್ತಾರೆ. ನಂತರ ೪೦ ದಿನಗಳೊಳಗಾಗಿ ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆಯ ಕಾರ್ಡನ್ನು ಮನೆಯ ವಿಳಾಸಕ್ಕೆ ಕಳುಹಿಸುತ್ತಾರೆ.
ಯಾವ ದಾಖಲೆಗಳು ಬೇಕು :
ಆಧಾರ್ ಸಂಖ್ಯೆ ಪಡೆಯುವದಕ್ಕಾಗಿ ಅರ್ಜಿದಾರರ ಗುರುತಿಗಾಗಿ ಈ ಕೆಳಕಂಡ ೧೭ ದಾಖಲೆಗಳ ಪೈಕಿ ಯಾವುದಾದರೊಂದು ಮೂಲ ದಾಖಲೆಯನ್ನು ಒದಗಿಸಬೇಕು. ಪಾಸ್‌ಪೋರ್ಟ್, ಆದಾಯ ತೆರಿಗೆ ಪಾನ್ ಕಾರ್ಡ್, ಭಾವಚಿತ್ರದೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಚಾಲನೆ ಪರವಾನಗಿ ಪತ್ರ (ಡಿ.ಎಲ್.), ಭಾವಚಿತ್ರದೊಂದಿಗೆ ಸರ್ಕಾರಿ ಗುರುತಿನ ಚೀಟಿ, ಗ್ರಾಮೀಣ ಉದ್ಯೋಗ ಖಾತ್ರಿ ಚೀಟಿ, ಭಾವಚಿತ್ರದೊಂದಿಗೆ ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳ ಗುರುತಿನ ಚೀಟಿ, ಬಂದೂಕು ಪರವಾನಿಗೆ ಪತ್ರ, ಭಾವಚಿತ್ರದೊಂದಿಗೆ ಎ.ಟಿ.ಎಂ. ಬ್ಯಾಂಕ್ ಕಾರ್ಡ್, ಭಾವಚಿತ್ರದೊಂದಿಗೆ ಪಿಂಚಣಿದಾರರ ಸರ್ಕಾರಿ ಗುರುತಿನ ಚೀಟಿ, ಭಾವಚಿತ್ರದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಸರ್ಕಾರಿ ಗುರುತಿನ ಚೀಟಿ, ಭಾವಚಿತ್ರದೊಂದಿಗೆ ರೈತರ (ಕಿಸಾನ್) ಪಾಸ್ ಬುಕ್, ಭಾವಚಿತ್ರದೊಂದಿಗೆ ಸಿ. ಜಿ. ಹೆಚ್.ಎಸ್./ಇ.ಸಿ.ಹೆಚ್.ಎಸ್. ಗುರುತಿನ ಚೀಟಿ, ಭಾವಚಿತ್ರದೊಂದಿಗೆ ಅಂಚೆ ಇಲಾಖೆಯಿಂದ ನೀಡಲ್ಪಟ್ಟ ಹೆಸರು ಮತ್ತು ವಿಳಾಸದ ಪತ್ರ, ಭಾವಚಿತ್ರದೊಂದಿಗೆ ಎ ದರ್ಜೆ ಪತ್ರಾಂಕಿತ ಅಧಿಕಾರಿಗಳ ಪತ್ರ ಶೀರ್ಷಿಕೆಯಲ್ಲಿ ನೀಡಲ್ಪಟ್ಟ ಗುರುತಿನ ಚೀಟಿ. ಗುರುತನ್ನು ದೃಢೀಕರಿಸಲು ಋಣ ಖುಲಾಸೆ ಪ್ರಮಾಣಪತ್ರ /ಗ್ಯಾಸ್ ಕಾರ್ಡ್/ ಭಾವಚಿತ್ರವಿಲ್ಲದ ಎಟಿಎಂ ಕಾರ್ಡ್ ಹಾಗೂ ಆದಾಯ ತೆರಿಗೆ ಪತ್ರಗಳನ್ನು ಮಾನ್ಯ ಮಾಡಲಾಗುವುದಿಲ್ಲ.
ಅರ್ಜಿದಾರನ ವಿಳಾಸ ಪರಿಶೀಲನೆಗಾಗಿ ಈ ಕೆಳಕಂಡ ೨೯ ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ನೀಡಬೇಕು. ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಅಂಚೆ ಕಚೇರಿ ಪಾಸ್‌ಬುಕ್, ಮತದಾರರ ಗುರುತಿನ ಚೀಟಿ, ಭಾವಚಿತ್ರದೊಂದಿಗೆ ಪಡಿತರ ಚೀಟಿ, ಚಾಲನಾ ಪರವಾನಿಗೆ ಪತ್ರ, ಭಾವಚಿತ್ರದೊಂದಿಗೆ ಸರ್ಕಾರಿ ಗುರುತಿನ ಚೀಟಿ, ಜೀವ ವಿಮಾ ಪಾಲಸಿ ಹಾಗೂ ವಿದ್ಯುತ್ ಬಿಲ್, ನೀರಿನ ಬಿಲ್,ಸ್ಥಿರ ದೂರವಾಣಿ ಬಿಲ್, ಆಸ್ತಿ ತೆರಿಗೆ ರಸೀದಿ, ಕ್ರೆಡಿಟ್ ಕಾರ್ಡ್ ಪಟ್ಟಿ (ಈ ಎಲ್ಲ ದಾಖಲೆಗಳು ೩ ತಿಂಗಳಿಗಿಂತ ನಿಕಟ ಪೂರ್ವದ್ದಾಗಿರಬೇಕು), ಬ್ಯಾಂಕ್ ಪತ್ರ ಶೀರ್ಷಿಕೆಯಲ್ಲಿ ಭಾವಚಿತ್ರದೊಂದಿಗೆ ಸಹಿಯಾದ ಪತ್ರ, ನೋಂದಾಯಿತ ಕಂಪನಿಯ ಪತ್ರ ಶೀರ್ಷಿಕೆಯಳ್ಳ ಭಾವಚಿತ್ರದೊಂದಿಗೆ ಸಹಿಯಾದ ಪತ್ರ, ಗ್ರಾಮೀಣ ಉದ್ಯೋಗ ಖಾತ್ರಿ ಚೀಟಿ, ಬಂದೂಕು ಪರವಾನಿಗೆ ಪತ್ರ, ಪಿಂಚಣಿದಾರರ ಸರ್ಕಾರಿ ಗುರುತಿನ ಚೀಟಿ, ಸ್ವಾತಂತ್ರ್ಯ ಹೋರಾಟಗಾರರ ಸರ್ಕಾರಿ ಗುರುತಿನ ಚೀಟಿ, ರೈತ (ಕಿಸಾನ್) ಪಾಸ್ ಬುಕ್, ಸಿಜಿಹೆಚ್‌ಎಸ್/ಇಸಿಹೆಚ್‌ಎಸ್ ಗುರುತಿನ ಚೀಟಿ, ಲೋಕಸಭಾ ಸದಸ್ಯರ / ಶಾಸಕರು / ಎ ದರ್ಜೆ ಪತ್ರಾಂಕಿತ ಅಧಿಕಾರಿಗಳ ಪತ್ರ ಶೀರ್ಷಿಕೆಯಲ್ಲಿ ಭಾವಚಿತ್ರದೊಂದಿಗೆ ನೀಡಲ್ಪಟ್ಟ ಗುರುತಿನ ಚೀಟಿ, ಗ್ರಾಮ ಪಂಚಾಯತಿ ಅಧ್ಯಕ್ಷರು ನೀಡಲ್ಪಟ್ಟ ವಿಳಾಸ ಪ್ರಮಾಣಪತ್ರ, ಅದಾಯ ತೆರಿಗೆ ನಿರ್ಧಾರಣಾ ಆದೇಶ, ವಾಹನ ನೋಂದಣಿ ಪ್ರಮಾಣಪತ್ರ, ನೋಂದಾಯಿತ ಮಾರಾಟ/ ಗುತ್ತಿಗೆ/ಬಾಡಿಗೆ ಕರಾರುಪತ್ರ. ಜನ್ಮ ದಿನಾಂಕ ನೀಡುವುದು ಕಡ್ಡಾಯವಾಗಿರದೇ ಐಚ್ಛಿಕವಾಗಿರುತ್ತದೆ. ಅರ್ಜಿದಾರನ ವಯಸ್ಸನ್ನು ಅಂದಾಜಿನ ಮೇಲೆ ಅಥವಾ ಅರ್ಜಿದಾರರು ತಿಳಿಸಿದಂತೆ ಇಲ್ಲವೇ ದಾಖಲಾತಿಗಳ ಪ್ರಕಾರ ಪರಿಗಣಿಸಲಾಗುವದು.
ಆತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾದ ಈ ಆಧಾರ್ದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ವ್ಯಕ್ತಿಯ ಬಯೋಮೆಟ್ರಿಕ್ (ಜೈವಿಕ ಮಾನದಂಡ ದತ್ತಾಂಶ) ವಿವರಗಳನ್ನು ಬಳಸಲಾಗುತ್ತದೆ. ಈ ಅಧಿಕೃತ ಗುರುತು ದೃಢೀಕರಿಸುವ ಆಧಾರ್ ಸಂಖ್ಯೆ ಜೀವಮಾನವಿಡಿ ಊರ್ಜಿತವಾಗಿರುತ್ತದೆ. ಮಕ್ಕಳು ಬೆಳೆದಂತೆ ೫ ಹಾಗೂ ೧೨ ವರ್ಷ ವಯಸ್ಸಿನಲ್ಲಿ ಪುನ: ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸಿಕೊಳ್ಳಲಾಗುವುದು.
ಪ್ರಯೋಜನ:
ಆಧಾರ್ ಸಂಖ್ಯೆಯ ಗುರುತು ನೀಡಿ ಕಡು ಬಡವರು ಸಹ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನದಾರರಿಗೆ ಕೂಲಿ ಹಣ, ವಿವಿಧ ಮಾಸಾಶನ ಪಡೆಯುವವರಿಗೆ ಪಿಂಚಣಿ ಹಣವನ್ನು ನೇರವಾಗಿ ಬ್ಯಾಂಕಿಗೆ ಜಮಾ ಮಾಡಲು ಸಹಕಾರಿಯಾಗುತ್ತದೆ. ಇದಲ್ಲದೇ ಭಿನ್ನ ಪರಿಸ್ಥಿತಿಯಲ್ಲಿರುವ ವಿವಿಧ ವರ್ಗಗಳ ಅಸಂಖ್ಯಾತ ಜನರ ಗುರುತಿನ ಸಮಸ್ಯೆಯನ್ನು ಈ ಯೋಜನೆ ನಿವಾರಿಸಿ ಸುಲಭವಾಗಿ ವಿವಿಧ ಸೇವೆಗಳು ನೇರವಾಗಿ ಅವರಿಗೆ ದೊರೆಯವಂತಾಗುವುದಲ್ಲದೇ ಸರ್ಕಾರಿ ಸೌಲಭ್ಯಗಳ ಅಪವ್ಯಯ ಹಾಗೂ ಮುಖ್ಯವಾಗಿ ಮಧ್ಯವರ್ತಿಗಳ ವಂಚನೆ ತಪ್ಪಲಿದೆ.
ಇದೇ ಜುಲೈ ೨೭ ರಂದು ಕೊಪ್ಪಳ ಜಿಲ್ಲೆಯಲ್ಲಿ ಆಧಾರ್ ಯೋಜನೆಗೆ ಚಾಲನೆ ದೊರೆಯಲಿದ್ದು, ಎಲ್ಲ ಸಾರ್ವಜನಿಕರು ತಪ್ಪದೆ ಆಧಾರ್ ಕಾರ್ಡ್ ಪಡೆಯಲು ಮುಂದಾಗಬೇಕು.

– ತುಕಾರಾಂ ರಾವ್ ಬಿ.ವಿ.
ಜಿಲ್ಲಾ ವಾರ್ತಾಧಿಕಾರಿ,
ಕೊಪ್ಪಳ.

Please follow and like us:
error