ಗುಹಾ, ಪೈ, ಖಲೀಲ್, ರೋಡ್ರಿಗಸ್‌ಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ

ಬೆಂಗಳೂರು, ಡಿ.21: ಕನ್ನಡದ ಸಾಹಿತಿ ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ರಾಮಚಂದ್ರ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’ ಆಂಗ್ಲ ಕೃತಿ, ಕೊಂಕಣಿಯ ವೆುಲ್ವಿನ್ ರೋಡ್ರಿಗಸ್‌ರವರ ‘ಪ್ರಕ್ರಿತಿಚೋಪಾಸ್’ ಕಾದಂಬರಿ, ಉರ್ದುವಿನ ಖಲೀಲ್ ಮಾಮುನ್‌ರವರ ‘ಆಫಾಕ್ ಕಿ ತರಫ್’ ಕಾದಂಬರಿ ಸೇರಿದಂತೆ ಒಟ್ಟು 23 ಭಾಷೆಯ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸುನಿಲ್ ಗಂಗೋಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸದಸ್ಯರ ಸಭೆಯಲ್ಲಿ 2010ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡದ ಡಾ. ಬಂಜಗೆರೆ ಜಯಪ್ರಕಾಶ್, ಡಿ.ಎಸ್. ನಾಗಭೂಷಣ್ ಮತ್ತು ಡಾ.ವೀಣಾ ಶಾಂತೇಶ್ವರ ಅವರು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಮುಂದಿನ ಸಾಲಿನ ಫೆ.14ರಂದು ಹೊಸದಿಲ್ಲಿಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ಗೋಪಾಲಕೃಷ್ಣ ಪೈ ಪರಿಚಯ: ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ಅವರು ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ಕಥಾ ಸಂಕಲನ ಸೇರಿದಂತೆ, ಆಧುನಿಕ ಚೀನಿ ಸಣ್ಣ ಕಥಾ ಸಂಕಲನವನ್ನು ರಚಿಸಿದ್ದಾರೆ. ರಾಷ್ಟ್ರ ಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿರುವ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಚಿತ್ರಕ್ಕೆ ಚಿತ್ರಕಥೆ ಮತ್ತು ಪಿ.ಶೇಷಾದ್ರಿ ನಿರ್ದೇಶನದ ‘ಬೆಟ್ಟದ ಜೀವ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಇವರ ಚಿತ್ರಕಥೆಗಾಗಿ ರಾಷ್ಟ್ರೀಯ ಉತ್ತಮ ಚಿತ್ರಕಥಾ ಪ್ರಶಸ್ತಿ ದೊರಕಿದೆ. ಹಲವಾರು ನಾಟಕ, ಪ್ರಬಂಧ, ಲೇಖನಗಳನ್ನು ಬರೆದಿದ್ದಾರೆ. ಕಾಸರಗೋಡು ಚಿನ್ನಾ ನಿರ್ದೇಶಿಸಿರುವ ಕೊಂಕಣಿ ಭಾಷೆಯ ‘ಉಜ್ವಾಡು’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ಪೈ ಬರೆದಿದ್ದಾರೆ. ಕೇಂದ್ರದ ಪ್ರತಿಷ್ಠಿತ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷವಾಗಿದೆ. ಈ ಕಾದಂಬರಿಗೆ ನಾನು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಯನ್ನು ನಡೆಸಿದ್ದೆ. ಅದರ ಪ್ರತಿಫಲವಾಗಿ ನನಗೆ ಈ ಪ್ರಶಸ್ತಿ ಲಭಿಸಿದೆ. ನನ್ನ ಹಿಂದಿನ ಹಿರಿಯ ಲೇಖಕರೇ ನನಗೆ ಈ ಪ್ರಶಸ್ತಿ ದೊರಕಲು ಪ್ರಮುಖ ಕಾರಣ. ಕತೆ, ಕಾದಂಬರಿ, ನಾಟಕ, ವಿಮರ್ಶೆ ಎಲ್ಲ ರೀತಿಯಲ್ಲಿಯೂ ಸಾಹಿತ್ಯ ಕೃಷಿ ನಡೆಯಬೇಕಾಗಿದೆ. ಉತ್ತಮ ಕೃತಿಗಳು ಬಂದರೆ ಅದಕ್ಕೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ ಎಂದು ಗೋಪಾಲಕೃಷ್ಣ ಪೈ ತಮ್ಮ ಸಂತೋಷವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.
Please follow and like us:
error