You are here
Home > Koppal News > ಕೊಪ್ಪಳದಲ್ಲಿ ಏ. ೦೧ ರಿಂದ ಆದಾಯ ತೆರಿಗೆ ಕಚೇರಿ ಪ್ರಾರಂಭ – ಆಯುಕ್ತ ಗಣೇಶನ್

ಕೊಪ್ಪಳದಲ್ಲಿ ಏ. ೦೧ ರಿಂದ ಆದಾಯ ತೆರಿಗೆ ಕಚೇರಿ ಪ್ರಾರಂಭ – ಆಯುಕ್ತ ಗಣೇಶನ್

  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಬರುವ ಏ. ೦೧ ರಿಂದ ಆದಾಯ ತೆರಿಗೆ ಇಲಾಖೆ ಕಚೇರಿ ಪ್ರಾರಂಭವಾಗಲಿದ್ದು,  ಈ ಕುರಿತ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆ ಗುಲಬರ್ಗಾ ವಿಭಾಗದ ಆಯುಕ್ತ ಗಣೇಶನ್ ಅವರು ಹೇಳಿದರು.

  ಕೊಪ್ಪಳ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ, ಬಳ್ಳಾರಿಯ ಟಿ ಡಿ ಎಸ್ ವಿಭಾಗದ ವತಿಯಿಂದ ಟಿಡಿಎಸ್ ಆದಾಯ ತೆರಿಗೆ ಕುರಿತಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆ ಹೊಸದಾಗಿ ರಚನೆಯಾದ ಜಿಲ್ಲೆಯಾಗಿದ್ದು, ಇಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿ ಇಲ್ಲ.  ಸದ್ಯ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಿಂದಲೇ ಕೊಪ್ಪಳ ಜಿಲ್ಲೆಯ ನಿರ್ವಹಣೆ ಮಾಡಲಾಗುತ್ತಿದೆ.  ಇದೀಗ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯ ಇಲಾಖೆಯ ಕಚೇರಿ ಪ್ರಾರಂಭಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಬರುವ ಏ. ೦೧ ರಿಂದ ಕೊಪ್ಪಳದಲ್ಲಿ ಕಚೇರಿ ಕಾರ್ಯಾರಂಭವಾಗುವ ಸಾಧ್ಯತೆ ಇದೆ.  ಸುಮಾರು ೧೪ ಲಕ್ಷ ಜನಸಂಖ್ಯೆ ಹೊಂದಿರುವ ಕೊಪ್ಪಳ ಜಿಲ್ಲೆಯಿಂದ ವರ್ಷಕ್ಕೆ ಸುಮಾರು ೭ ರಿಂದ ೧೦ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದು, ಬಳ್ಳಾರಿ ವಲಯದ ತೆರಿಗೆ ಸಂಗ್ರಹಣೆಯಲ್ಲಿ ಕೊಪ್ಪಳ ಬಹುದೊಡ್ಡ ಕೊಡುಗೆ ನೀಡುತ್ತಿದೆ.  ಕೊಪ್ಪಳ ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಆದಾಯ ತೆರಿಗೆ ಸಂಗ್ರಹದಲ್ಲಿ ವಿಭಾಗ ಮಟ್ಟದಲ್ಲಿ ಮುಂಚೂಣಿಯಲ್ಲಿದೆ.  ಆದಾಯ ತೆರಿಗೆ ಕಡಿತಗೊಳಿಸಿ, ಟಿಡಿಎಸ್ ಸಲ್ಲಿಸುವುದು ಹಾಗೂ ಇಲಾಖೆಗೆ ರಿಟರ್ನ್ಸ್ ಸಲ್ಲಿಸುವುದು ಮುಂತಾದ ಪ್ರಕ್ರಿಯೆಗಳನ್ನು ಇದೀಗ ಬಹಳಷ್ಟು ಸರಳಗಳಿಸಲಾಗಿದ್ದರೂ, ಇನ್ನೂ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಗೊಂದಲಗಳಿರುವುದು ಕಂಡುಬರುತ್ತಿದೆ.  ದೇಶದ ತೆರಿಗೆ ಸಂಗ್ರಹಣೆಯಲ್ಲಿ ಶೇ. ೫೦ ರಷ್ಟು ತೆರಿಗೆ ಸಂಗ್ರಹವು ಟಿಡಿಎಸ್ ಮೂಲಕವೇ ಸಲ್ಲಿಕೆಯಾಗುತ್ತಿದೆ.  ಈ ದಿಸೆಯಲ್ಲಿ ಟಿಡಿಎಸ್ ಸಲ್ಲಿಕೆ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯಾಗಾರಗಳನ್ನು ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.  ತೆರಿಗೆ ಪಾವತಿದಾರರು ನಿಗದಿತ ಸಮಯದಲ್ಲಿ ತೆರಿಗೆ ಪಾವತಿಸುವುದರಿಂದ ಮಾತ್ರ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ ಗಣೇಶನ್ ಅಭಿಪ್ರಾಯಪಟ್ಟರು.
  ಆದಾಯ ತೆರಿಗೆ ಇಲಾಖೆ ಬಳ್ಳಾರಿ ವಲಯದ ಜಂಟಿ ಆಯುಕ್ತ ವಿ.ಜಿ. ಇರಕಲ್ ಅವರು ಮಾತನಾಡಿ, ಬಳ್ಳಾರಿ ವಲಯದ ತೆರಿಗೆ ಸಂಗ್ರಹಣೆ ಈ ವರ್ಷ ಒಂದು ಸಾವಿರ ಕೋಟಿಯ ಗಡಿ ದಾಟಿದೆ.  ಸಂಗ್ರಹಣೆ ಪ್ರಕ್ರಿಯೆಯು ದೇಶದ ಆರ್ಥಿಕ ಭದ್ರತೆಗೆ ಪೂರಕವಾಗಿ ಸಲ್ಲಿಸುವಂತಹ ಸೇವೆಯಾಗಿದೆ.  ಸರ್ಕಾರಿ ವ್ಯವಸ್ಥೆಯ ವ್ಯವಹಾರಗಳಲ್ಲಿ ತೆರಿಗೆ ಕಡಿತಗೊಳಿಸಿ, ತೆರಿಗೆ ಇಲಾಖೆ ಖಾತೆಗೆ ಸಲ್ಲಿಸುವ ಪ್ರಕ್ರಿಯೆ ನಿಯಮಬದ್ಧವಾಗಿ ನಡೆಯಬೇಕಿದೆ.  ಕೆಲವೊಮ್ಮೆ ತಪ್ಪುಗಳಾಗುವುದು ಸಹಜವಾದರೂ, ಉದ್ದೇಶಪೂರ್ವಕವಾಗಿ ಅಥವಾ ಪದೇ ಪದೇ ತಪ್ಪುಗಳಾದಾಗ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ.  ತೆರಿಗೆ ಕಡಿತ ವಿವರವನ್ನು ಟಿಡಿಎಸ್ ಸಲ್ಲಿಕೆ ವ್ಯವಸ್ಥೆಯಲ್ಲಿ ಈಗ ಬಹಳಷ್ಟು ಸುಧಾರಣೆಗಳಾಗಿದ್ದು, ಎಲ್ಲವನ್ನು ಸರಳಗೊಳಿಸಿ, ಗಣಕೀಕೃತಗೊಳಿಸಲಾಗಿದೆ.  ಆನ್‌ಲೈನ್‌ನಲ್ಲಿಯೇ ಎಲ್ಲವನ್ನೂ ನಿರ್ವಹಿಸುವಂತಹ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿದ್ದು, ಎಲ್ಲ ಇಲಾಖೆ ಅಧಿಕಾರಿಗಳು, ತಮ್ಮ ಕಚೇರಿಗಳಲ್ಲಿ ಟಿಡಿಎಸ್ ಸಲ್ಲಿಕೆ, ರಿಟರ್ನ್ಸ್ ಸಲ್ಲಿಕೆ ಕುರಿತ ಯಾವುದೇ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ಮೂಲಕ ಆಗಾಗ್ಗೆ ಹೊರಡಿಸುವ ಸೂಚನೆಗಳನ್ನು ಪಾಲಿಸಬೇಕು ಎಂದರು.
  ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಸೌರಭ್ ನಾಯಕ್, ಬಾಲಕೃಷ್ಣ, ಕೆ.ಆರ್. ನಾರಾಯಣನ್ ಸೇರಿದಂತೆ ಟಿಡಿಎಸ್ ವಿಭಾಗದ ಅಧಿಕಾರಿ ಪಾಂಡುರಂಗ ಅವರು ಉಪಸ್ಥಿತರಿದ್ದರು.  ತರಬೇತಿ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು, ಬ್ಯಾಂಕ್, ಅಂಚೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

Top