ಸ್ವವಿಮರ್ಶೆಯಿಂದ ಕವಿ ಬೆಳೆಯುತ್ತಾನೆ- ಡಾ.ಮಹಾಂತೇಶ ಮಲ್ಲನಗೌಡರ


ಕೊಪ್ಪಳ : ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಓದುವದು ಮತ್ತು ಸಮಕಾಲೀನ ಸಾಹಿತ್ಯದ ಅರಿವಿನೊಂದಿಗೆ ಹಿರಿಯರ ಕಾವ್ಯ ಓದಿ ಜೀರ್ಣಿಸಿಕೊಳ್ಳಬೇಕು. ನಮ್ಮ ಕಾವ್ಯದ ಸ್ವವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಕಾವ್ಯ ಮಿತಿಯ ವಾಸ್ತವದ ಅರಿವಿನೊಂದಿಗೆ ಬೆಳೆಯುವ ದಾರಿಯನ್ನು ಕಂಡುಕೊಳ್ಳಬೇಕು ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೬೩ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾವ್ಯ ಪರಂಪರೆಯ ಕುರಿತು ಮಾತನಾಡಿದ ಅವರು ವಿವಿಧ ಕಾಲಘಟ್ಟದಲ್ಲಿ ಕಾವ್ಯ ನಡೆದು ಬಂದ ಹಾದಿಯ ಕುರಿತು ಸುದೀರ್ಘವಾಗಿ ಮಾತನಾಡಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಲಲಿತಾ ಭಾವಿಕಟ್ಟಿ- ಅಣಕ, ಹಾಸ್ಯಲಹರಿ, ಪುಷ್ಪಲತಾ- ಪ್ರೀತಿನಾ? ಸ್ನೇಹನಾ?, ಶಾಂತಾದೇವಿ ಹಿರೇಮಠ- ತುಂಬು ಬಾಳಿನ ಸಿರಿರೂಪ, ಎಸ್.ಎಂ.ಕಂಬಾಳಿಮಠ- ನಿತ್ಯಾನಂದ, ಎನ್.ಜಡೆಯಪ್ಪ- ಲಂಚ, ವಿಮಲಾ ಇನಾಂದಾರ- ವಿಶ್ವಶಾಂತಿ, ಇವರು ನಮ್ಮವರು, ವಾಸುದೇವ ಕುಲಕರ್ಣಿ- ಬದುಕು, ಕನಕಪ್ಪ ತಳವಾರ- ಕಳೆ, ನಟರಾಜ ಸವಡಿ- ತುಂಗಭದ್ರೆಯ ತೀರದ ದಾಹ, ಎ.ಪಿ.ಅಂಗಡಿ- ನಾಗರಹಾವೇ. ಡಾ.ಮಹಾಂತೇಶ ಮಲ್ಲನಗೌಡರ- ಪ್ರೇಮಗೀತೆಗಳು, ಬಸವರಾಜ ಸಂಕನಗೌಡರ- ಭಾರತೀಯ ಯುವಕರು, ಪುಷ್ಪಲತಾ ಏಳುಬಾವಿ- ನೆನಕೆ, ಸಿರಾಜ್ ಬಿಸರಳ್ಳಿ- ಚುಟುಕುಗಳು ಕವನಗಳ ವಾಚನ ಮಾಡಿದರು.
ತುಂತುರು ಮಳೆಹನಿಗಳ ಕಣ್ಣಾಮುಚ್ಚಾಲೆಯಲ್ಲಿಯೇ ನಡೆದ ಕವಿಗೋಷ್ಠಿಯ ನಂತರ ಕವಿತೆ,ಕಾವ್ಯದ ಬಗ್ಗೆ ಉತ್ತಮವಾದ ಚರ್ಚೆ ನಡೆಯಿತು. ಹಿರಿಯ ಕವಿ ಎಸ್.ಎಂ.ಕಂಬಾಳಿಮಠ -ಕಾವ್ಯಕ್ಕೆ ಯಾವತ್ತೂ ಸಾಮಾಜಿಕ ಬದ್ದತೆ ಇರಬೇಕು, ಭಾವ ತೀವ್ರತೆಯೊಂದಿಗೆ ಕಾವ್ಯ ಕಟ್ಟಿಕೊಡುವ ಶೈಲಿ ರೂಡಿಸಿಕೊಳ್ಳಬೇಕು. ಇದು ಜನರನ್ನು ತಲುಪುತ್ತದೆ ಎಂದು ಹೇಳಿದರು. ಕವಿಸಮಯ ನಿರಂತರ ಬರವಣಿಗೆಗೆ ಕಾರಣವಾಗಿ ಉತ್ತಮ ಕಾವ್ಯ ರೂಪುಗೊಳ್ಳಲು ಸಹಕಾರಿಯಾಗುತ್ತಿದೆ ಬೆಳವಣಿಗೆಗೆ ಪೂರಕವಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಕಾರ್‍ಯಕ್ರಮದಲ್ಲಿ ಹನುಮಂತಪ್ಪ ಅಂಗಡಿ, ಶಿವಾನಂದ ಹೊದ್ಲೂರ್, ಜಿ.ಎಸ್.ಬಾರಕೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎನ್.ಜಡೆಯಪ್ಪ -ಸ್ವಾಗತಿಸಿದರೆ, ನಟರಾಜ್ ಸವಡಿ ವಂದಿಸಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
Please follow and like us:
error