You are here
Home > Koppal News > ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ- ಸಚಿವ ಎ. ನಾರಾಯಣಸ್ವಾಮಿ

ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ- ಸಚಿವ ಎ. ನಾರಾಯಣಸ್ವಾಮಿ

ಕೊಪ್ಪಳ ಅ. : ಜಿಲ್ಲೆಯಲ್ಲಿ ಶೌಚಾಲಯ ರಹಿತ ಪರಿಶಿಷ್ಟ ಜಾತಿ ಮತ್ತು ಪ.ವರ್ಗದ ಕುಟುಂಬಗಳ ವಿವರ, ಶೌಚಾಲಯ ಕಟ್ಟಿಸಲು ಸ್ಥಳಾವಕಾಶದ ಲಭ್ಯತೆ ಕುರಿತಾದ ಸಮೀಕ್ಷೆ ನಡೆಸಿ, ೧೫ ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸಮಾಜಕಲ್ಯಾಣ ಹಾಗೂ ಬಂದೀಖಾನೆ ಸಚಿವ ಎ. ನಾರಾಯಣಸ್ವಾಮಿ ಅವರು ಜಿಲ್ಲೆಯ ನಾಲ್ಕೂ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವ ಹಲವು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕಳೆದ ತಿಂಗಳು  ನಡೆದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಟುಂಬಗಳು ಅನುಭವಿಸುತ್ತಿರುವ ತೊಂದರೆ, ಸ್ವಚ್ಛತೆಯ ಕೊರತೆ, ಅವ್ಯವಸ್ಥೆಯ ಬಗ್ಗೆ ಖುದ್ದು ಕಂಡಿದ್ದೇನೆ. ಈ ಭಾಗದಲ್ಲಿನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ನಿಜಕ್ಕೂ ನೋವು ತಂದಿದೆ.  ಸಮಾಜದ ಪರಿವರ್ತನೆಗೆ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ.  ಗ್ರಾಮೀಣ ಬದುಕಿನ ನೈಜ ಚಿತ್ರಣ ಗಮನಿಸಿದಾಗ ಪರಿಸ್ಥಿತಿಯ ಅರಿವಾಗುತ್ತದೆ.  ಪ್ರಜ್ಞಾವಂತ ಸಮಾಜ, ಅಂದರೆ ಅಧಿಕಾರಿಗಳಿಗೆ ಕಾಣುತ್ತಿಲ್ಲವೆ, ಇದು ನಾಚಿಕೆಗೇಡಿನ ಸಂಗತಿ ಎಂದು ನೋವಿನಿಂದ ಹೇಳಬಯಸುತ್ತೇನೆ ಎಂದರು.
  ಕೊಪ್ಪಳ, ರಾಯಚೂರು, ಗುಲಬರ್ಗಾ, ಬಿಜಾಪುರ, ಬಳ್ಳಾರಿ, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಸ್ವಚ್ಛತೆಯ ಕೊರತೆ ಹೆಚ್ಚಾಗಿ ಕಂಡುಬಂದಿದ್ದು, ಬಹಳಷ್ಟು ದಲಿತ ಕುಟುಂಬಗಳು ಈಗಲೂ ಶೌಚಾಲಯ ಹೊಂದಿಲ್ಲ.  ಈಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಎಷ್ಟು ಕುಟುಂಬಗಳಿಗೆ ವಯಕ್ತಿಕ ಶೌಚಾಲಯ ಕಟ್ಟಬೇಕಾಗಿದೆ.  ಅವುಗಳ ಪೈಕಿ ಶೌಚಾಲಯ ಕಟ್ಟಲು ಅಗತ್ಯ ಸ್ಥಳಾವಕಾಶ ಹೊಂದಿರುವ ಕುಟುಂಬಗಳೆಷ್ಟು, ಶೌಚಾಲಯ ಕಟ್ಟಲು ಸ್ಥಳಾವಕಾಶ ಲಭ್ಯವಿಲ್ಲದೇ ಇರುವ ಕುಟುಂಬಗಳ ಕುರಿತು ಸಮೀಕ್ಷೆ ಕೈಗೊಂಡು, ಸಮಗ್ರವಾದ ವರದಿಯನ್ನು ಹದಿನೈದು ದಿನಗಳ ಒಳಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಶೌಚಾಲಯದ ಯೂನಿಟ್ ಡಿಸೈನ್ ರೂಪಿಸಿ, ಪ್ರತಿಯೊಂದು ಶೌಚಾಲಯಕ್ಕೆ ತಗಲಬಹುದಾದ ಯೂನಿಟ್ ದರವನ್ನು ನಿಗದಿಪಡಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ೧೫ ದಿನಗಳ ಒಳಗಾಗಿ ಸಲ್ಲಿಸಬೇಕು.  ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆಯನ್ವಯ ಸೂಕ್ತ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದಲೇ ಅನುದಾನ ಒದಗಿಸಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ೧೨ ರಿಂದ ೧೫ ಸಾವಿರ ಶೌಚಾಲಯ ನಿರ್ಮಿಸಲು ಟೆಂಡರ್ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.
ಪರಿಶೀಲನಾ ತಂಡ : ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿ, ಪ.ವರ್ಗಗಳ ಕುಟುಂಬಗಳಿಗೆ ಈಗಾಗಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿರುವ ಶೌಚಾಲಯಗಳ ನಿಖರ ಸಂಖ್ಯೆ, ಶೌಚಾಲಯಗಳ ಗುಣಮಟ್ಟ, ಬಿಲ್ ಪಾವತಿ ಕುರಿತಂತೆ ಪರಿಶೀಲಿಸಲು ಬೆಂಗಳೂರಿನಿಂದ ಪ್ರತ್ಯೇಕ ತಂಡವನ್ನು ಜಿಲ್ಲೆಗೆ ಕಳುಹಿಸಿ ತನಿಖೆ ನಡೆಸಲಾಗುವುದು.  ಅಲ್ಲದೆ ಜಿಲ್ಲೆಯ ದಲಿತರ ಕೇರಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿರುವ ಬಗ್ಗೆಯೂ ತಂಡದಿಂದ ಪರಿಶೀಲನೆ ನಡೆಸಲಾಗುವುದು. ಸುಳ್ಳು ವರದಿ ನೀಡಿ, ಬಿಲ್ ಪಾವತಿ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ತೆರಿಗೆ ಸಂಗ್ರಹಿಸಲು ಸೂಚನೆ : ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೃಹತ್ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಂದ ನಿಯಮಾನುಸಾರ ತೆರಿಗೆ ಸಂಗ್ರಹಿಸಿ ಸ್ವಾವಲಂಬಿಗಳಾಗಬೇಕಾಗಿರುವ ಗ್ರಾಮ ಪಂಚಾಯತಿಗಳು ಈ ದಿಸೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಗಮನಕ್ಕೆ ಬಂದಿದೆ.  ಕೊಪ್ಪಳ ತಾಲೂಕಿನಲ್ಲಿ ಸ್ಟೀಲ್ ಕಾರ್ಖಾನೆಗಳು ಸೇರಿದಂತೆ ಹಲವು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿವೆ.  ಕುಷ್ಟಗಿ ತಾಲೂಕಿನಲ್ಲಿ ಗ್ರಾನೈಟ್ ಉದ್ಯಮಗಳಿವೆ.  ಗಂಗಾವತಿ ತಾಲೂಕಿನಲ್ಲಿ ಹಲವಾರು ರೈಸ್ ಮಿಲ್‌ಗಳಿವೆ.  ಇಂತಹ ಕೈಗಾರಿಕೆಗಳಿಂದ ಆಯಾ ಗ್ರಾಮ ಪಂಚಾಯತಿಗಳು ನಿಯಮಾನುಸಾರ ತೆರಿಗೆ ಸಂಗ್ರಹಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದಾಗಿದೆ.  ಇದರಿಂದ ಸಂಗ್ರಹವಾಗುವ ಮೊತ್ತದಿಂದ ಗ್ರಾಮಗಳ ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ.  ಇಡೀ ಜಿಲ್ಲೆಯಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಂಪೂರ್ಣ ವಿವರವನ್ನು ಪಡೆದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ಸಚಿವರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಜಿ.ಪಂ. ಸದಸ್ಯ ವಿನಯಕುಮಾರ್, ನಾಗನಗೌಡ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Top