You are here
Home > Koppal News > ಮಧುಕರ್ ಶೆಟ್ಟಿಯವರಿಗೊಂದು ಬಹಿರಂಗ ಪತ್ರ

ಮಧುಕರ್ ಶೆಟ್ಟಿಯವರಿಗೊಂದು ಬಹಿರಂಗ ಪತ್ರ

-ಶಿವಸುಂದರ
ಪ್ರಿಯ ಮಧುಕರ್ ಶೆಟ್ಟಿಯವರೇ,
ಮೊನ್ನೆ ಭಾನುವಾರ ಕನ್ನಡ ಪತ್ರಿಕೆಯೊಂದರಲ್ಲಿ ನಿಮ್ಮ ಸಂದರ್ಶನ ಓದಿದೆ.ಲೋಕಾಯುಕ್ತ ಸಂಸ್ಥೆಯಲ್ಲೂ ಭ್ರಷ್ಟಾಚಾರಿಗಳು ಇದ್ದಾರೆಂಬ,ಲೋಕಾಯುಕ್ತ ಪ್ರಚಾರಪ್ರಿಯವೆಂಬ,ಮತ್ತು ಪ್ರಾಮಾಣಿಕತೆಯನ್ನು ಒಂದು ಸಂಸ್ಥೆಗೆ ಗುತ್ತಿಗೆ ವಹಿಸಲಾಗದೆಂಬ ನಿಮ್ಮ ಹೇಳಿಕೆಗಳು ಆಶ್ಚರ್ಯವನ್ನೂ ಹುಟ್ಟಿಸಲಿಲ್ಲ. ತಪ್ಪೂ ಎನಿಸ ಲಿಲ್ಲ. ಆದರೆ ನಿಮ್ಮ ಸಂದರ್ಶನದ ಸಂದರ್ಭ, ಅದು ಪ್ರಕಟವಾದ ಪತ್ರಿಕೆ ಮತ್ತು ಅದು ಬಳಕೆಯಾಗುತ್ತಿರುವ ಬಗೆ ಮಾತ್ರ ನನ್ನಲ್ಲಿ ಆಶ್ಚರ್ಯವನ್ನೂ, ವಿಷಾದವನ್ನು , ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ನಿಮ್ಮ ಬಗ್ಗೆ, ನಿಮ್ಮ ಪ್ರಾಮಾಣಿಕತೆ, ನಿಷ್ಠುರತೆ, ನೈತಿಕತೆಗಳ ಬಗ್ಗೆ ನಿಮ್ಮ ಕಾಲೇಜು ದಿನಗಳ ಸ್ನೇಹಿತರಿಂದ ಕೇಳಿ ತಿಳಿದಿದ್ದೆ. ನಿಮ್ಮಂಥಾ ಸೂಕ್ಷ್ಮ ಮನಸ್ಸಿನವರು ಎಲ್ಲ ಬಿಟ್ಟು ಪೊಲೀಸ್ ಇಲಾಖೆಯನ್ನು ಏಕೆ ಸೇರಿದರು ಎಂತಲೂ ಅವರನ್ನು ಪ್ರಶ್ನಿಸಿದ್ದೆ. ಅಂಥವರು ಒಂದೋ ಪೊಲೀಸ್ ಇಲಾಖೆಯಲ್ಲಿ ಬಹಳ ದಿನ ಉಳಿಯಲಾರರು ಅಥವಾ ತಮ್ಮತನ ವನ್ನು ಉಳಿಸಿಕೊಂಡು ಉಳಿಯಲಾರರು ಎಂದೂ ಕೂಡಾ ಅನಿಸಿತ್ತು.
ಇಲ್ಲವಾದರೆ ತೀವ್ರ ನೈತಿಕ ಗೊಂದಲದಲ್ಲಿ ವ್ಯಕ್ತಿಗತ ಪರಿಶುದ್ಧತೆಯ ನೆಲೆಯಲ್ಲಿ ಉಳಿದುಕೊಂಡರೂ (?) ಸಾಮಾಜಿಕವಾಗಿ ಸಿನಿಕರಾಗಿಬಿಡಬಹುದೆಂದೂ ಅನಿಸಿತ್ತು.ನೀವು ವೀರಪ್ಪನ್ ‘ಬೇಟೆ’ಯ ಸರಕಾರಿ ಶಿಕಾರಿಯಲ್ಲಿ ಸೇರಿಕೊಂಡ ಗುರಿಕಾರರಲ್ಲಿ ಒಬ್ಬರು ಎಂದು ಗೊತ್ತಾದಾಗ ಅಂದಿನ ಹೈದ ರಾಬಾದ್ ವಿಶ್ವವಿದ್ಯಾಲಯದಂತಹ ರ್ಯಾಡಿ ಕಲ್ ಸನ್ನಿವೇಶದಲ್ಲಿ ರಾಜಕೀಯ ಮತ್ತು ಸಮಾಜಶಾಸ್ತ್ರವನ್ನು ಕಲಿತ ನಿಮ್ಮಂಥವರೂ ಸಹ ವೀರಪ್ಪನ್ ಸಮಸ್ಯೆಯನ್ನು ಪ್ರಭುತ್ವದ ರೀತಿ ಸರಳವಾಗಿ ಮತ್ತು ಆಷಾಢಭೂತಿತನ ದಿಂದ ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹುಟ್ಟಿತ್ತು. ಅಲ್ಲಿದ್ದ ಶಂಕರ್ ಬಿದರಿಯಂಥ ಬಹಳಷ್ಟು ಜನ ‘ವೀರಾಧಿ ವೀರರು’ ವೀರಪ್ಪನ್‌ಗಿಂತ ಜಾಸ್ತಿ ಕಾಡಿನ ಮಹಿಳೆಯರ ಮೇಲೆ ಬಡಪಾಯಿ ಆದಿವಾಸಿಗಳ ಮೇಲೆ ತಮ್ಮ ಶೌರ್ಯವನ್ನು ಪ್ರದರ್ಶಿಸುತ್ತಿದ್ದಾಗ ಇಂಥವಕ್ಕೆ ಮಧುಕರ್ ಶೆಟ್ಟಿಯವರು ಹೇಗೆ ಸ್ಪಂದಿಸುತ್ತಿರಬಹುದು ಎಂದು ವಿಷಾದ ಭರಿತ ಕುತೂಹಲ ಹುಟ್ಟುತ್ತಿತ್ತು. 
ವೀರಪ್ಪನ್ ಬೇಟೆಯ ಹೆಸರಲ್ಲಿ ನಡೆಯುತ್ತಿರುವ ಪರಮ ಭ್ರಷ್ಟಾಚಾರವನ್ನೂ ಸಹ ಹೇಗೆ ಸಹಿಸಿಕೊಳ್ಳುತ್ತಿರಬಹುದು ಮತ್ತು ಹಲವಾರು ಅಧಿಕಾರಿಗಳು ಈ ಬೇಟೆಗಾರ ಪಡೆಯನ್ನು ಬಿಟ್ಟು ಬರುತ್ತಿರುವಾಗ ಮಧುಕರ್ ಶೆಟ್ಟಿಯ ವರಂಥವರು ಹೇಗೆ ಅಲ್ಲೇ ಇರಲು ಸಾಧ್ಯ ವಾಗುತ್ತಿದೆ? ಯಾವ ತಾತ್ವಿಕ ಮತ್ತು ನೈತಿಕ ಪಾತಳಿಯಲ್ಲಿ ನಿಂತು ಅವರು ತಮ್ಮ ಪಾಲು ದಾರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರಬಹುದೂ ಅಂತಲೂ ಪ್ರಶ್ನೆ ಹುಟ್ಟುತ್ತಿತ್ತು. ಅಂತಿಮವಾಗಿ ವೀರಪ್ಪನ್ ಹತ್ಯೆಯೇ ಆದಮೇಲೆ ಇಡೀ ಪ್ರಕರಣವನ್ನು ಒಬ್ಬ ಪೊಲೀಸ್ ಆಗಿ ಅಲ್ಲದೆ ಒಬ್ಬ ಸೂಕ್ಷ್ಮ ಮನಸ್ಸಿನವನಾಗಿ ರಾಜಕೀಯ- ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಗೆ ಅರ್ಥೈಸಿ ಕೊಳ್ಳುತ್ತಿರಬಹುದು ಎಂಬ ಕುತೂಹಲವಿತ್ತು. ವೀರಪ್ಪನ್ ಬೇಟೆಯಲ್ಲಿ ಶಿಕಾರಿಯಾಗಿರುವುದು ಕೇವಲ ವೀರಪ್ಪನ್ ಅಲ್ಲ ಅನಿಸುತ್ತಿತ್ತು.
ನಂತರ ನಿಮ್ಮ ಬಗ್ಗೆ ಅತಿ ಹೆಚ್ಚು ಕೇಳಿ ಬಂದದ್ದು ತಾವು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದಾಗ. ಈಗಲೂ ತಮ್ಮ ಬಗ್ಗೆ ಚಿಕ್ಕಮಗಳೂರಿನ ಆದಿವಾಸಿಗಳ ಹಾಡಿಗಳಲ್ಲಿ ದಂತಕಥೆಗಳಿವೆ. ಕೆಲವರ ಬಳಿ ಈಗಲೂ ಅಪರಾತ್ರಿಯಲ್ಲೂ ಬೇಕಾದರೂ ನನ್ನನ್ನು ಸಂಪರ್ಕಿಸಿ ಎಂದು ನೀವು ಕೊಟ್ಟ ಮೊಬೈಲ್ ನಂಬರ್ ಇದೆ. ಅಲ್ಲಿನ ಶ್ರೀಮಂತ ಕಾಫಿ ಪ್ಲಾಂಟರುಗಳು ಈಗಲೂ ನಿಮ್ಮನ್ನು ಸಿಟ್ಟಿನಿಂದ ನೆನಪು ಮಾಡಿಕೊಳ್ಳುತ್ತಾರೆ. ನಕ್ಸಲರ ಬಗ್ಗೆ ನಿಮ್ಮ ನಿಲುವು ಏನೇ ಇದ್ದರೂ ಇದ್ದ ಅಧಿ ಕಾರವನ್ನು ಇದ್ದ ಸಮಯದಲ್ಲಿ ಆದಿವಾಸಿಗಳ ಹಿತವನ್ನು ಕಾಯುವುದಕ್ಕೆ ಬಳಸಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆಂದು ಅಲ್ಲಿ ನಿಮಗೆ ಹೆಸರು ಇದೆ.
ನಕ್ಸಲ್ ಹೋರಾಟದ ಬಗ್ಗೆ ನಿಮಗೆ ಸಿಟ್ಟಿತ್ತು. ಸಾಮಾನ್ಯ ಆದಿವಾಸಿ ಗಳನ್ನು ತಪ್ಪುದಾರಿ ಹಿಡಿಸುತ್ತಾರೆಂದು. ಏನೇ ಬದಲಾವಣೆಯಾದರೂ ಪ್ರಜಾಸತ್ತೆಯಿಂದಲೇ ಆಗಬೇಕು ಮತ್ತು ಕಾಯಬೇಕು ಎಂಬುದೂ ತಮ್ಮ ವಾದವಾಗಿತ್ತು. ಆದರೂ ನೀವು ಚಿಕ್ಕಮಗ ಳೂರಿನಲ್ಲಿ ಮಾತ್ರ ಸುಳ್ಳು ಎನ್‌ಕೌಂಟರ್ ನಡೆಯಲು ಬಿಡಲಿಲ್ಲ. ಪ್ರಾಯಶಃ ಕೇವಲ ಕಾನೂನು ನಿಷ್ಠತೆ ಜನರಿಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ನಿಮಗೆ ಅರ್ಥವಾಗಿತ್ತೇ? ಪ್ರಜಾತಂತ್ರದ ಸೌಂದರ್ಯ (beauty of democracy)ದ ಅನುಭವಕ್ಕಿಂತಲೂ ಅದರ ಕ್ರೌರ್ಯದ ಅನು ಭವವೇ ಸಾಮಾನ್ಯ ಜನರಿಗೆ ಹೆಚ್ಚು ಎಂಬುದು ನಿಮ್ಮ ಗಮನಕ್ಕೆ ಬಂದಿತ್ತೇ? ಪ್ರಾಯಶಃ ಆದ್ದರಿಂದಲೇ ನಿಮ್ಮ ಭಾವಸೂಕ್ಷ್ಮ ತೆಗೆ ಬಹುಮಾನವೆಂಬಂತೆ ನೀವು ಇಂಟೆಲಿ ಜೆನ್ಸ್ ಇಲಾಖೆಗೂ ಅಲ್ಲಿಂದ ರಾಜ್ಯಪಾಲರ ಬೆಂಗಾವಲಿಗೂ ವರ್ಗಾವಣೆಯಾದಿರಿ.
ನೀವು ಇಂಟೆಲಿಜೆನ್ಸ್ ಮುಖ್ಯಸ್ಥರಾಗಿದ್ದಾಗಲೇ ಕರ್ನಾ ಟಕದ ನಕ್ಸಲ್ ಹೋರಾಟದ ನಾಯಕ, ಅಸಾಧಾರಣ ಮೇಧಾವಿ ಸಾಕೇತ್ ರಾಜನ್ ಅವರನ್ನು ಪೊಲೀಸರು ಕಗ್ಗೊಲೆ ಮಾಡಿದರು. ಅದೊಂದು ಸುಳ್ಳು ಎನ್‌ಕೌಂಟರ್ ಎಂದು ಸತ್ಯವಂತರಾದ ನಿಮಗೆ ಗೊತ್ತೇ ಇದೆ. ಸಾಕೇತ್ ರಾಜನ್‌ರ ಬದ್ಧತೆ ಮತ್ತು ಬೌದ್ಧಿಕತೆಯ ಬಗ್ಗೆ ನಿಮ್ಮಂತ ಹಲವು ಅಧಿಕಾರಿ ಗಳಿಗೆ ಮೆಚ್ಚುಗೆ ಇತ್ತು. ಆದರೂ ‘‘ಜನಪರ ವಾಗಿ ಚಿಂತಿಸುವ ಗ್ರಾಮ್ಸ್ಕಿಯ ಮೆದುಳು ಚಿಂತಿಸುವುದನ್ನು ನಿಲ್ಲಿಸಬೇಕು’’ ಎಂದು ಷಡ್ಯಂತ್ರ ಮಾಡಿದ ಫ್ಯಾಸಿಸ್ಟ್ ಮುಸಲೋನಿ ಸರಕಾರಕ್ಕಿಂತ ಕ್ರೂರ ವಾಗಿ ಕರ್ನಾಟಕ ಸರಕಾರ ಒಂದು ಜನಪರ ಮೇಧಾವಿಯ ಮೆದುಳನ್ನು ಅಕ್ಷರಶಃ ನುಚ್ಚು ನೂರು ಮಾಡಿತು.
ಗ್ರಾಮ್ಸ್ಕಿಯ ಬಗ್ಗೆ ಅಪಾರ ಗೌರವ ಮತ್ತು ಆದರವನ್ನು ಇಟ್ಟುಕೊಂಡಿರುವ ‘ಸೂಕ್ಷ್ಮ ಮತ್ತು ಚಿಂತನಶೀಲ’ ವ್ಯಕ್ತಿತ್ವದ ತಾವು ಈ ಕೊಲೆಗೆ ಕೇವಲ ಅಸಹಾಯಕ ವಿಷಾದವನ್ನಷ್ಟೇ ವ್ಯಕ್ತಪಡಿಸಿದ್ದು ಸಹಜವೇ ಆಗಿತ್ತಾದರೂ ಅದು ನಿಮ್ಮತನದ ಉಳಿವಿನ ಬಗ್ಗೆ ತೀವ್ರ ಜಿಜ್ಞಾಸೆಯನ್ನೇಕೆ ಹುಟ್ಟುಹಾಕಲಿಲ್ಲ ಎಂಬ ಪ್ರಶ್ನೆ ನಿಮ್ಮ ಸಂದರ್ಶನ ಓದಿದ ನಂತರ ನನ್ನಲ್ಲಿ ಹುಟ್ಟುಹಾಕಿದೆ. ಇರಲಿ, ಅನಂತರ ನೀವು ಲೋಕಾಯುಕ್ತಕ್ಕೆ ಬರುವ ತನಕ ನಿಮ್ಮದು ಅಜ್ಞಾತವಾಸವೇ.ಹಲ್ಲಿಲ್ಲದ ಹಾವಾಗಿ, ಪ್ರಚಾರ ಲೋಲುಪ ವಾಗಿದ್ದ ಲೋಕಾಯುಕ್ತ ಅಲ್ಪಸ್ವಲ್ಪ ಜನರಿಗೆ ಉಪಯುಕ್ತವಾದ ಕೆಲಸ ಮಾಡಿದ್ದು ಗಣಿ ಹಗರಣವನ್ನು ಬಯಲಿಗೆ ತಂದ ಮೇಲೆಯೇ. ಅಧಿಕಾರಸ್ಥ ರಾಜಕಾರಣಿಗಳನ್ನು ಅದರಲ್ಲೂ ಮುಖ್ಯಮಂತ್ರಿಯನ್ನೂ ಸಹ ಕಟಕಟೆಯ ಹಿಂದೆ ನಿಲ್ಲಿಸಲು ಸಾಧ್ಯ ಎಂದು ನೀವು ಮತ್ತು ನಿಮ್ಮಂಥ ಕೆಲವು ನಿಸ್ಪೃಹ ಅಧಿಕಾರಿಗಳು ಮಾಡಿ ತೋರಿಸಿದ್ದರಿಂದ ನೀವುಗಳು ಹೀರೋಗಳಿಗಾಗಿ ಕಾಯು ತ್ತಿದ್ದ ನತದೃಷ್ಟ ಸಮಾಜದ ಹೀರೋಗಳಾಗಿ ಬಿಟ್ಟಿರಿ.
ಅದೇನೇ ಇರಲಿ ನಮ್ಮ ಸಂದರ್ಭವೇ ಹಾಗಿತ್ತು. ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ ವನ್ನೂ ಬಟಾಬಯಲಲ್ಲಿ ನಡೆಸುತ್ತಲೂ ಮತ್ತು ಅದನ್ನು ಗತ್ತಿನಿಂದಲೇ ದಕ್ಕಿಸಿ ಕೊಳ್ಳುತ್ತಿರುವ, ಪ್ರಜಾತಂತ್ರ ಕೊಟ್ಟ ಅವಕಾಶಗಳನ್ನೇ ತಮ್ಮ ಸತತ ಸುಲಿಗೆಗೆ ರಹದಾರಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸರಕಾರ, ಭ್ರಷ್ಟಾಚಾರದ ಮಟ್ಟಿಗೆ ಅದರ ಪ್ರತಿರೂಪವೇ ಆಗಿರುವ ವಿರೋಧ ಪಕ್ಷಗಳು. ಮತ್ತೊಂದೆಡೆ ಪರ್ಯಾಯದ ಕನಸನ್ನು ಬಿತ್ತಲಾಗದಷ್ಟು ದುರ್ಬಲವಾಗಿರುವ ಮತ್ತು ಪರೋಕ್ಷ ವಾಗಿ ಈ ತಾತ್ವಿಕ ಮತ್ತು ಭೌತಿಕ ಭ್ರಷ್ಟಾ ಚಾರದ ಫಲಾನುಭವಿಗಳೂ ಆಗಿಬಿಟ್ಟಿರುವ ಚಳವಳಿಗಳು. ಹೀಗಾಗಿ ಸತತ ವಿಶ್ವಾಸ ದ್ರೋಹಗಳು ಜನಮಾನಸದಲ್ಲಿ ಹತಾಶೆಯನ್ನೂ ಮತ್ತು ಆತ್ಮಘಾತುಕ ರಾಜಕೀಯ ಸಿನಿಕತನ ವನ್ನು ಬಿತ್ತುತ್ತಿದೆ.
ಕರ್ನಾಟಕದ ಜನತೆ ಇಂತಹ ಸೂಕ್ಷ್ಮಮತ್ತುಅಪಾಯಕಾರಿ ಸಾಮಾಜಿಕ ಮಾನಸಿಕತೆಯಲ್ಲಿರುವಾಗಲೇ ಯಡಿಯೂರಪ್ಪನವರೂ ಸಹ ಜೈಲಿಗೆ ಹೋಗುವಂತಾಗಿದ್ದೂ, ಕುಮಾರಸ್ವಾಮಿಯ ಮೇಲೂ ಕೇಸು ಫೈಲಾಗಿದ್ದೂ, ಕೇಂದ್ರದಲ್ಲಿ ದೊಡ್ಡ ದೊಡ್ಡವರೂ ಜೈಲು ಪಾಲಾ ದದ್ದೂ ಒಂದು ಬಗೆಯ ಭರವಸೆಯ ಚೇತರಿಕೆ ಯನ್ನು ಹುಟ್ಟುಹಾಕಿತು. ಕರ್ನಾಟಕದ ಜನತೆ ಸ್ವಲ್ಪಮಟ್ಟಿಗಾದರೂ ನಿರಾಳ ಅನುಭವಿಸಲು ನೀವೂ ಕಾರಣರೇ.ದುರದೃಷ್ಟವೆಂದರೆ ಒಂದು ನಿಷ್ಕ್ರಿಯ ಪ್ರಜಾಸತ್ತೆಯಲ್ಲಿ ನಡೆಯುವ ಇಂಥಾ ಪವಾಡಗಳೂ ಸಹ ಜನರಿಗೆ ಆತ್ಮವಿಶ್ವಾಸ ಹುಟ್ಟಿಸುವ ಬದಲು ಹೊಸ ದೇವರುಗಳನ್ನು ಸೃಷ್ಟಿಸಿ ಭಕ್ತ ಪರಂಪರೆಯನ್ನೂ ಮುಂದುವರಿಸುತ್ತದೆ. ಇಲ್ಲೂ ಹೀಗೆ ಆಯಿತು.ಸಂತೋಷ್ ಹೆಗ್ಡೆ ಇಲ್ಲಿ, ಅಣ್ಣಾಹಝಾರೆ ಅಲ್ಲಿ ಹೊಸ ದೇವರುಗಳಾದರು.
ಈಗ ಕರ್ನಾಟಕ ಎದುರಿಸುತ್ತಿರುವ ಸ್ಥಿತಿ ನೋಡಿ. ಒಂದೆಡೆ ಅಣ್ಣಾ ಹಝಾರೆ, ಸಂತೋಷ್ ಹೆಗ್ಡೆಗಳು ಹುಟ್ಟಿಹಾಕಿರುವ ಸಡಿಲ ಬುನಾದಿಯ ಭರವಸೆಗಳು. ಮತ್ತೊಂದೆಡೆ ಜನರ ಸಿನಿಕತನವನ್ನು ತಮ್ಮ ರಾಜಕೀಯ ಮರುಹುಟ್ಟಿಗೆ ಮತ್ತು ತಮ್ಮ ಭ್ರಷ್ಟಾಚಾರದ ಸಮರ್ಥನೆಗೆ ಬಳಸಿಕೊಳ್ಳಲು ಬಯಸುತ್ತಿರುವ ಯಡಿಯೂರಪ್ಪನವರಂಥಾ ರಾಜಕಾರಣಿಗಳು, ಭ್ರಷ್ಟ ಪತ್ರಿಕೋದ್ಯಮಿ ಕಂ ಪಾರ್ಟ್ ಟೈಮ್ ಕೋಮುವಾದಿ ರಾಜಕಾರಣಿಗಳು.ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರದ ಫಲಾನುಭವಿ ಪತ್ರಿಕೆಯಲ್ಲಿ ತಮ್ಮ ಸಂದರ್ಶನ ಪ್ರಕಟವಾಗಿದ್ದು ನನಗಂತೂ ಆಶ್ಚರ್ಯವನ್ನೇ ತಂದಿತು.
ಈಗ ತಮ್ಮ ಆ ಪತ್ರಿಕೆಯ ಸಂದರ್ಶನವನ್ನು ಪರಮ ಭ್ರಷ್ಟಾಚಾರಿ ಯಡಿಯೂರಪ್ಪತಮ್ಮ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.ತಾವು ‘‘ಲೋಕಾಯುಕ್ತ ಸಂಸ್ಥೆಯಲ್ಲೂ ಭ್ರಷ್ಟಾಚಾರಿಗಳಿದ್ದಾರೆ’’ ಎಂದು ಹೇಳಿದ್ದನ್ನು ಯಡಿಯೂರಪ್ಪನವರು ತಮ್ಮ ಮೇಲೆ ಹೊರಿಸಿರುವ ಆರೋಪಗಳೆಲ್ಲಾ ಸುಳ್ಳು ಎಂಬ ವಾದಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ‘‘ಬೇರೆಯವರ ತಪ್ಪಿನಲ್ಲಿ ನಾವು ಪ್ರಚಾರ ಪಡೆದುಕೊಳ್ಳುವುದು ಎಷ್ಟು ಸರಿ’’ ಎಂಬ ತಮ್ಮ ನೈತಿಕ ಗೊಂದಲದ ಸ್ವಗತವನ್ನು ಅವರು ಸಂತೋಷ್ ಹೆಗ್ಡೆ ಕೇಂದ್ರದಲ್ಲಿ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡು ಅಪವಾದ ಹೊರಿಸಿದ್ದಾರೆ ಎಂಬ ವಾದಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದಾರೆ.
‘‘ಪ್ರಾಮಾಣಿಕತೆಯೆಂಬುದು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯಲ್ಲಿ ಇರಬೇಕಾದ ನೈತಿಕ ಮೌಲ್ಯ. ಅದರ ಗುತ್ತಿಗೆಯನ್ನು ಯಾವುದಾದರೂ ಒಂದು ಸಂಸ್ಥೆಗೆ ಹೇಗೆ ವಹಿಸಲು ಸಾಧ್ಯ?’’ ಎಂಬ ನಿಮ್ಮ ತಾತ್ವಿಕ ಪ್ರಶ್ನೆಯನ್ನು ಈಗ ಎಲ್ಲ ಪಕ್ಷಗಳ ಭ್ರಷ್ಟರು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಬೇಕೆಂಬ ಕುತಂತ್ರಕ್ಕೆ ಸಮರ್ಥನೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೀವು ನಿರೀಕ್ಷಿಸದೇ ಇದ್ದಿರಬಹುದು. ನಿಮ್ಮ ಪ್ರಶ್ನೆಗಳಲ್ಲಿ ಸತ್ವವೇ ಇರಬಹುದು. ಆದರೆ ಈ ಸಂದರ್ಶನ ಕೊಡಬೇಕಾದರೆ ಅದೂ ಈ ಸಂದರ್ಭದಲ್ಲಿ ಈ ಪತ್ರಿಕೆಗೆ ಕೊಡಬೇಕಾದರೆ ಇವನ್ನೆಲ್ಲಾ ಯಾಕೆ ನೀವು ಯೋಚಿಸಲಿಲ್ಲ ಎಂಬ ಬಗ್ಗೆ ನನಗೇ ಪ್ರಶ್ನೆಗಳಿವೆ..
ಈ ಪ್ರಶ್ನೆಗಳನ್ನು ಎತ್ತಬಾರದು ಎಂಬುದು ನನ್ನ ವಾದವಲ್ಲ.. ಆದರೂ ನೈತಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದ ಭ್ರಷ್ಟಾಚಾರಿಗಳು ಈಗ ಸ್ವಲ್ಪವಾದರೂ ಸಾರ್ವಜನಿಕ ಕ್ಷೇತ್ರದಲ್ಲಿ ತಲೆ ಎತ್ತಿ ತಿರುಗಲು ವಿತಂಡವಾದವನ್ನು ಹೂಡಲು ತಮ್ಮ ತರ್ಕ ಮತ್ತು ಸಂದರ್ಶನ ಬಳಕೆಯಾಗುತ್ತಿರುವುದಂತೂ ಸತ್ಯ. ಅದಕೆ ನೀವು ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಹೊಣೆಗಾರರು ಎಂಬುದರಲ್ಲಿ ಎರಡು ಮಾತಿಲ್ಲ.ನೀವು ಎತ್ತಿರುವ ಪ್ರಶ್ನೆಗಳ ಬಗ್ಗೆಯೂ ನನಗೆ ತಕರಾರಿದೆ. ಲೋಕಾಯುಕ್ತದಲ್ಲಿ ಭ್ರಷ್ಟರಿದ್ದಾರೆ ಖಂಡಿತಾ. ಸಂತೋಷ್ ಹೆಗ್ಡೆ ಪ್ರಚಾರ ಪ್ರಿಯರು ನಿಜ. ಪ್ರಾಮಾಣಿಕತೆ ವ್ಯಕ್ತಿನಿಷ್ಟ ನೈತಿಕ ಪ್ರಶ್ನೆ ನಿಜ. ಎಲ್ಲವೂ ಸತ್ಯ. ಆದರೆ ಅರ್ಧ ಸತ್ಯ. ಭ್ರಷ್ಟತೆಯ ನಿರ್ದಿಷ್ಟ ಪ್ರಕರಣದ ಸುತ್ತ ನ್ಯಾಯ ಪ್ರಕ್ರಿಯೆ ಪ್ರಾರಂಭವಾಗಿರುವಾಗ ನೀವು ಸಾರ್ವತ್ರಿಕ ಸಾಧ್ಯತೆಗಳನ್ನು ಅದರ ಎದುರಾಗಿ ನಿಲ್ಲಿಸಿ ನಿರ್ದಿಷ್ಟ ಪ್ರಕರಣದ ಆರೋಪಿಗಳಿಗೆ ನೈತಿಕ ಶಕ್ತಿ ತಂದುಕೊಟ್ಟಿದ್ದೀರಿ. ನಿಜ.
ಈ ಕೇಸುಗಳು ಗಟ್ಟಿಯಾದ ಸಾಕ್ಷಿ ಪುರಾವೆಗಳನ್ನು ಒದಗಿಸುವ ಹಿಂದೆ, ಪ್ರಭಾವಿಗಳ ಮೇಲೆ ಕೇಸು ಫೈಲಾಗುವ ಹಿಂದೆ ಖಂಡಿತಾ ಆಳುವ ಪಕ್ಷಗಳ ನಡುವಿನ ಜಿದ್ದಾಜಿದ್ದಿ ಕಾರಣವೇ ಹೊರತು ಜನಪರ ಕಾಳಜಿಗಳಲ್ಲ. ‘ಎಲ್ಲೋ ಒಂದು ಕಡೆ’ ಒಂದು ಪಕ್ಷ ಮತ್ತೊಂದು ಪಕ್ಷವನ್ನು ಸದೆ ಬಡಿಯಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಲೋಕಾಯುಕ್ತ ನಡೆಸಿದ ಪ್ರಾಮಾಣಿಕ ಕ್ರಮಗಳು ಬಳಕೆಯಾಗುತ್ತಿರಬಹುದು. ನೀವೇ ಹೇಳಿದಂತೆ ಲೋಕಾಯುಕ್ತದಲ್ಲಿಯೂ ಭ್ರಷ್ಟ ಅಧಿಕಾರಿಗಳು ದುಡ್ಡಿಗೋ, ವಶೀಲಿಗೋ, ಜಾತಿಗೋ ಒಬ್ಬರ ಪರವಾದ ಅಥವಾ ಇನ್ನೊಬ್ಬರ ವಿರೋಧವಾದ ಕೆಲಸ ಮಾಡುತ್ತಿರಬಹುದು. ಆದರೂ ಆಳುವ ವರ್ಗಗಳ ನಡುವಿನ ಸಂಘರ್ಷ ಈ ಪ್ರಜಾತಂತ್ರದ ಮಿತಿಗಳನ್ನು ಮುನ್ನೆಲೆಗೆ ತರುತ್ತಿರುವುದು ನಿಜ. ಇದರಲ್ಲಿ ತಮ್ಮ ಪಾಲೂ ಇದೆ.
ಈಗ ಬೇಕಿರುವುದು ಆ ಮಿತಿಗಳನ್ನು ಮೀರುವ ದಾರಿಯ ಹುಡುಕಾಟ. ಅದು ಸಕ್ರಿಯ ಮತ್ತು ಸಾರಾಂಶದಲ್ಲಿ ಜನರನ್ನು ಸಬಲೀಕರಿಸುವ ಸಾರಭೂತ ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ. ಹಳೆಯದರ ನಾಶ ಹೊಸದರ ನಿರ್ಮಾಣಕ್ಕೆ ಮುಂದಾಗದಿದ್ದರೆ ಅದು ವಿನಾಶಕಾರಿ ಪರಿಣಾಮವನ್ನು ಮಾತ್ರ ಹೊಂದಿರುತ್ತದೆ. ನಿಜ ಇದು ಹೀಗೆ ಮುಂದುವರಿದರೆ ಈ ಸಮಾಜ ಮತ್ತೊಂದು ದೊಡ್ದ ಭ್ರಮನಿರಸನಕ್ಕೆ ಮತ್ತು ಆತ್ಮಘಾತುಕ ಸಿನಿಕತನಕ್ಕೆ ಈಡಾಗುತ್ತದೆ. ಹಾಗಾಗದಿರಬೇಕೆಂದರೆ ಜನ ಹೊಸ ದೇವರುಗಳನ್ನಲ್ಲದೆ ತಮ್ಮ ಸಕ್ರಿಯ ರಾಜಕೀಯ ಕ್ರಿಯಾಶೀಲತೆಯಲ್ಲಿ ನಂಬಿಕೆಯನ್ನಿಟ್ಟುಕೊಳ್ಳುವಂತೆ ಮಾಡುವುದು ಅತ್ಯಗತ್ಯ. ಅದಕ್ಕೆ ಬೇಕಾಗಿರುವುದು ಪೊಳ್ಳನ್ನು ಬಹಿರಂಗಗೊಳಿಸುವ ಕ್ರಿಯೆಯ ಜೊತೆಗೆ ಜನತಂತ್ರವನ್ನು ಗಟ್ಟಿಗೊಳಿಸುವ ಜನರ ಕ್ರಿಯಾಶೀಲತೆಯನ್ನು ಗಟ್ಟಿಗೊಳಿಸುವ ರಾಜಕೀಯ ಪ್ರಕ್ರಿಯೆ. ಅದು ವ್ಯಕ್ತಿನಿಷ್ಠ ನೆಲೆಯ ಪ್ರಾಮಾಣಿಕತೆ ಮತ್ತು ನಿಷ್ಠೂರತೆಯ ಜೊತೆಜೊತೆಗೆ ಸಾಮಾಜಿಕ ಮತ್ತು ಸಾಂಸ್ಥಿಕ ಕ್ರಿಯಾಶೀಲತೆಯಿಂದ ಮಾತ್ರ ಸಾಧ್ಯ.
ಆದರೆ ನಿಮ್ಮದು ಮೊದಲಿಂದಲೂ ಪರಮ ವ್ಯಕ್ತಿನಿಷ್ಠ ಚಿಂತನೆ. ಹೀಗಾಗಿಯೇ ಪ್ರಜಾತಂತ್ರದ ಮತ್ತು ಲೋಕಾಯುಕ್ತದ ಸಾಂಸ್ಥಿಕ ವೈಫಲ್ಯಗಳು ನಿಮ್ಮಲ್ಲಿಯೂ ಭ್ರಮನಿರಸನ ಹುಟ್ಟಿಸುತ್ತದೆಯೇ ವಿನಃ ಅದರ ನಡುವಿನಿಂದಲೇ ಜನತಂತ್ರವನ್ನು ಪುನಶ್ಚೇತನಗೊಳಿಸಬಲ್ಲ ಸಾಧ್ಯತೆಗಳು ಗೋಚರಿಸುವುದಿಲ್ಲ. ಹೀಗಾಗಿ ನಿಮ್ಮ ನೈತಿಕ ಗೊಂದಲದ ತಾರ್ಕಿಕ ಅಂತ್ಯ ಸಿನಿಕತನವೇ ಆಗಿಬಿಡುವ ಅಪಾಯವಿದೆ. ಸಿನಿಕತನದ ಪ್ರಧಾನ ಫಲಾನುಭವಿಗಳು ಈ ವ್ಯವಸ್ಥೆಯ ರಖವಾಲಾಗಳೇ! ಹೀಗಾಗಿ ಪ್ರಶ್ನೆ ಕೇಳುವ ಸ್ವಾತಂತ್ರ್ಯವನ್ನು ಬಯಸುವವರು ಉತ್ತರವನ್ನು ಹುಡುಕುವ ಪ್ರಕ್ರಿಯೆಯಲ್ಲಿ ಒಂದಾಗಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಮರೆಯಲಾದೀತೇ? ನೀವು ಪ್ರಜಾತಾಂತ್ರಿಕ ಸಂಸ್ಥೆಗಳ ಬಗ್ಗೆ ಎತ್ತುತ್ತಿರುವ ಪ್ರಶ್ನೆ ಪ್ರಜಾತಂತ್ರದ ಕ್ಷಿತಿಜವನ್ನು ಇನ್ನಷ್ಟು ವಿಸ್ತರಿಸಲು ಸಹಾಯವಾಗದೆ ಈವರೆಗೆ ಆದ ಗಳಿಕೆಯನ್ನೂ ಕಸಿದುಕೊಳ್ಳಲು ಭ್ರಷ್ಟರಿಗೆ ಸಹಾಯ ಮಾಡುವಂತಾದರೆ ನೀವು ಇನ್ನಷ್ಟು ನೈತಿಕ ಗ್ಲಾನಿಗೆ ಗುರಿಯಾಗುತ್ತೀರಿ..ಅಲ್ಲವೇ?
ಸಂದರ್ಭ ನಿಮ್ಮಿಂದ ಸ್ಪಷ್ಟೀಕರಣ ಕೇಳುತ್ತಿದೆ…ಇಲ್ಲದಿದ್ದರೆ ಏನೋ ಮಾಡಲು ಹೋಗಿ ಏನೋ ಮಾಡಿದಂತೆ ಆಗುತ್ತದೆ. ನೀವು ಎತ್ತಿರುವ ಪ್ರಶ್ನೆಗಳು ವ್ಯವಸ್ಥೆಯ ಹುಳುಕನ್ನು ನಿರ್ಮೂಲನೆ ಮಾಡಲು ಜನತಂತ್ರವನ್ನು ಗಟ್ಟಿಗೊಳಿಸಲು ಬೇಕಾದ ಪ್ರಕ್ರಿಯೆಗೆ ಚಾಲನೆ ನೀಡಬೇಕೇ ವಿನಃ ಸಮಾಜದಲ್ಲಿ ಸಿನಿಕತೆಗೆ ಮತ್ತು ಭ್ರಷ್ಟರ ಪುನರುಜ್ಜೀವನಕ್ಕೆ ಇಂಬುಗೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆಯಲ್ಲವೇ? ಯಾರೋ ಒಬ್ಬ ಆರೋಪಿ ಅಧಿಕಾರಿ ನಿಮ್ಮ ದಾಳಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಲೋಕಾಯುಕ್ತವನ್ನೇ ಬಿಡಬೇಕಾದ ತೀರ್ಮಾನ ತೆಗೆದುಕೊಂಡವರು ನೀವು. ಏನಿಲ್ಲದಿದ್ದರೂ, ಈಗ ನಿಮ್ಮ ಸಂದರ್ಶನದ ಪರಿಣಾಮ ಭ್ರಷ್ಟರ ಪುನರುಜ್ಜೀವನಕ್ಕೆ ದಾರಿ ಮಾಡಿಕೊಡ್ಡುತ್ತಿರುವುದನ್ನು ಅದಕ್ಕಿಂತಲೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ ಎಂಬ ನಿರೀಕ್ಷೆಯನ್ನಂತೂ ನನ್ನಲ್ಲಿ ಹುಟ್ಟುಹಾಕಿದೆ…

Leave a Reply

Top