ಕನ್ನಡಕ್ಕಾಗಿ ಕೈ ಎತ್ತಿದವರು ಏಟು ತಿಂದರು

– ಸನತ್‌ಕುಮಾರ ಬೆಳಗಲಿ
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದರು. ಅವರು ಹಾಗೆ ಪದ್ಯದ ಮೂಲಕ ಹೇಳಿ ನಾಲ್ಕು ದಶಕಗಳಾಗಿವೆ. ನಂತರದ ವರ್ಷಗಳಲ್ಲಿ ಹೀಗೆ ಕೈ ಎತ್ತಿ ಕಲ್ಪವೃಕ್ಷವನ್ನಾಗಿ ಮಾಡಿಕೊಂಡವರನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ಹೀಗೆ ಕೈ ಎತ್ತಿದವರು ಕನ್ನಡದ ಹೆಸರಿನಲ್ಲಿ ಸಂಘಗಳನ್ನು ಕಟ್ಟಿಕೊಂಡು ದುಬಾರಿ ಕಿಮ್ಮತ್ತಿನ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಇವರ ಕನ್ನಡದ ಕಾಳಜಿ ನವೆಂಬರ್ ತಿಂಗಳಲ್ಲಿ ಪ್ರತ್ಯಕ್ಷವಾಗುತ್ತದೆ. ಉಳಿದಂತೆ ಕನ್ನಡ ನೆಲದ ಯಾವ ಸಂಕಟಗಳಿಗೂ ಈ ‘ಓರಾಟಗಾರರು’ ಸ್ಪಂದಿಸುವುದಿಲ್ಲ.ಸರಕಾರ ಕನ್ನಡ ಶಾಲೆಗಳಿಗೆ ಬೀಗ ಹಾಕಲು ಹೊರಟಾಗಲೂ ಪ್ರಭುತ್ವವನ್ನು ಎದುರು ಹಾಕಿಕೊಂಡು ಹೋರಾಡಲು ಇವರು ಸಿದ್ದವಿಲ್ಲ.ಕಳೆದ ವಾರ ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಊರಿಗೆ ಬಂದವರಿಗೆಲ್ಲ ಸಾಹಿತ್ಯ ಪರಿಷತ್ತು ಮನೆ ಅತಿಥ್ಯದ ಅವಕಾಶ ಕಲ್ಪಿಸಿತ್ತು. ನನಗೆ ಅದರ ಅಗತ್ಯವಿರಲಿಲ್ಲ.ನಾನು ಒಬ್ಬರ ಮನೆಯಲ್ಲಿ ಆತಿಥ್ಯ ಪಡೆದಿದ್ದೆ. ಅವರು ನನ್ನ ಹಳೆ ಸ್ನೇಹಿತರು. ನಾಲ್ಕು ದಶಕಗಳಿಂದ ಎಡಪಂಥೀಯ ಚಳವಳಿ ಜೊತೆ ಗುರುತಿಸಿಕೊಂಡಿರುವ ಕಾರ್ಮಿಕ ನಾಯಕ ಮೆಹರ್‌ಪಾಷ ನಾನು ಬರುವುದು ಗೊತ್ತಾಗಿ ಕುಟುಂಬ ಸಮೇತ ಹೋಗಿದ್ದ ನನಗೆ ತಮ್ಮ ಮನೆಯಲ್ಲಿ ಆತಿಥ್ಯ ನೀಡಿದ್ದರು.
ಗಂಗಾವತಿಯಲ್ಲಿ ನನಗೆ ಆತ್ಮೀಯರಾದ ಇನ್ನೊಬ್ಬ ರೆಂದರೆ ಸಿಪಿಐ(ಎಂ.ಎಲ್) ಲಿಬರೇಷನ್ ನಾಯಕ ಭಾರದ್ವಾಜ್. ಅವರದೂ ಕೂಡ ಹೋರಾಟದಗಾಥೆ.ಅದನ್ನು ಇನ್ನೊಮ್ಮೆ ಬರೆಯುತ್ತೇನೆ.ಈಗ ಹೇಳಲು ಹೊರಟಿರುವುದು ಅದನ್ನಲ್ಲ. ಗಂಗಾವತಿಯ ಎಪಿಎಂಸಿ ಬಯಲಿನಲ್ಲಿ ನಡೆದ ಕಸಾಪ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈ ಎತ್ತಿ ಕೈ ಮುರಿದುಕೊಂಡವರ ಕಥೆ. 9ನೆ ತಾರೀಕು ನಡೆದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಸರಕಾರದ ದುರುಳ ನೀತಿಯನ್ನು ಪ್ರತಿಭಟಿಸಿ ಘೋಷಣೆ ಕೂಗಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ಪೊಲೀಸರು ಲಾಠಿಯಿಂದ ಥಳಿಸಿದರು. ಬೂಟುಗಾಲಿನಿಂದ ನೆಲಕ್ಕೆ ಉರುಳಿಸಿ ಒದ್ದರು. ಈ ದೌರ್ಜನ್ಯವನ್ನು ವೇದಿಕೆ ಮೇಲಿದ್ದ ಯಾವ ಕನ್ನಡ ಸಾಹಿತಿಯೂ ಖಂಡಿಸಲಿಲ್ಲ. ಬದಲಾಗಿ ಮುಖ್ಯಮಂತ್ರಿ ಸದಾನಂದ ಗೌಡರು ಕನ್ನಡದ ಪರವಾಗಿ ದನಿಯೆತ್ತಿದವರನ್ನು ‘ಕಿಡಿಗೇಡಿಗಳು’ ಎಂದು ಲೇವಡಿ ಮಾಡಿದರು. 
ಪೊಲೀಸರ ಅಪ್ರಚೋದಿತ ಲಾಠಿ ಪ್ರಹಾರ ದಿಂದ ತೀವ್ರ ಗಾಯಗೊಂಡ ಎಸ್‌ಎಫ್‌ಐನ ಹದಿನೈದು ಕಾರ್ಯಕರ್ತರು ಆಸ್ಪತ್ರೆ ಸೇರಿದರು.ರಾಜ್ಯ ಎಸ್‌ಎಫ್‌ಐ ಕಾರ್ಯಕರ್ತ ಅನಂತ ನಾಯ್ಕ,ಹಾವೇರಿಯ ಬಸವರಾಜ ಪೂಜಾರ್,ಮಾರುತಿ ಅಂಬಿಗೇರ್, ರೇಣುಕಾ ತಹಾರ್,ದೇಸಾಯಿ ಮೊದಲಾದವರು ತೀವ್ರ ಗಾಯಗೊಂಡವರು.ಸಾರಸ್ವತ ಲೋಕದಿಂದ ಪ್ರತಿಭಟನೆ ಬರಲಿಲ್ಲ. ಇದು ಕನ್ನಡಕ್ಕಾಗಿ ಕೈ ಎತ್ತಿ ಏಟು ತಿಂದು ಆಸ್ಪತ್ರೆ ಸೇರಿದವರ ಕತೆ. ಉಳಿದಂತೆ ಚಂದಾ ವಸೂಲಿ ಕನ್ನಡ ಹೋರಾಟಗಾರರು ಏನೂ ನಡೆದಿಲ್ಲ ಎಂಬಂತೆ ತೆಪ್ಪಗಿದ್ದರು. ಚುನಾಯಿತ ಪ್ರತಿನಿಧಿಗಳೂ ಮೂಕ ಪ್ರೇಕ್ಷಕರಾಗಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲೆ ಕನ್ನಡಕ್ಕಾಗಿ ದನಿಯೆತ್ತಿದವರನ್ನು ಈ ರೀತಿ ಪೈಶಾಚಿಕವಾಗಿ ಥಳಿಸಿದ್ದನ್ನು ಕಂಡು ದಿಗ್ಭ್ರಮೆಗೊಂಡೆ ಮುಂಬರುವ ದಿನಗಳಲ್ಲಿ ಕನ್ನಡಕ್ಕೆ ಒದಗಬಹುದಾದ ಗಂಡಾಂತರ ಊಹಿಸಿ ಎದೆ ನಡುಗಿ ಹೋಯಿತು. 3 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಹಳದಿ-ಕೆಂಪು ಶಾಲು ಹಾಕಿಕೊಂಡು ಓಡಾಡುವ ಓರಾಟಗಾರರಿಂದ ಪ್ರತಿರೋಧ ಬರಬಹುದೆಂದು ನಿರೀಕ್ಷಿಸಿದ್ದೆ. ಆದರೆ ವೇದಿಕೆಯ ಅಂಗಳದಲ್ಲಿ ಘೋಷಣೆ ಕೇಳಿ ಬಂದದ್ದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಿಂದ. ಹತ್ತಿಪ್ಪತ್ತು ವಿದ್ಯಾರ್ಥಿಗಳನ್ನು ಥಳಿಸಲು ನೂರಾರು ಪೊಲೀಸರು ಮುಗಿಬಿದ್ದರು.
ಕಳೆದ ನವೆಂಬರ್ 1ರಂದು ರಾಜ್ಯೋತ್ಸವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲೂ ಮುಖ್ಯಮಂತ್ರಿಗಳ ಎದುರಿಗೇ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತರುಕನ್ನಡ ಶಾಲೆ ಮುಚ್ಚುವುದರ ವಿರುದ್ಧ ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದರು. ಆಗಲೂಕನ್ನಡದ ಹೆಸರಿನಲ್ಲಿ ಕೈಯನ್ನು ಕಲ್ಪವೃಕ್ಷ ಮಾಡಿಕೊಂಡವರು ನಾಪತ್ತೆಯಾಗಿದ್ದರು. ಅವರ ಹೋರಾಟವೇನಿದ್ದರೂ ದೂರದ ಮುಂಬೈನಲ್ಲಿರುವ ಬಾಳ್‌ಠಾಕ್ರೆ ವಿರುದ್ಧ, ಅದೂ ಟಿವಿ ಚಾನೆಲ್‌ಗಳ ಕ್ಯಾಮೆರಾ ಬರುವವರೆಗೆ ಮಾತ್ರ.
ಆದರೆ ಗಂಗಾವತಿಯಲ್ಲಿ ಘಟನೆ ನಡೆದ ಮೂರನೆ ದಿನ ಗಂಗಾವತಿಯ ಪ್ರಗತಿಪರ ಗೆಳೆಯರು ಸುಮ್ಮನಿರಲಿಲ್ಲ. ಕವಿ ಪೀರ್ ಭಾಷಾ ಹಾಗೂ ಭಾರದ್ವಾಜ್ ನೇತೃತ್ವದಲ್ಲಿ ನಡು ರಸ್ತೆಯಲ್ಲಿ ಪ್ರತಿಭಟನೆಗಿಳಿದ ನೂರಾರು ವಿದ್ಯಾರ್ಥಿಗಳು, ಉಸ್ತುವಾರಿ ಸಚಿವ ಸಿದ್ದು ಸವದಿ, ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಅವರ ವಾಹನವನ್ನು ತಡೆದು ಕೆಳಗಿಸಿದರು. ಬೀದಿಯಲ್ಲೇ ಮಂತ್ರಿಯನ್ನು ನೆಲದ ಮೇಲೆ ಕೂರಿಸಿ ವಿದ್ಯಾರ್ಥಿಗಳ ಮೇಲೆ ಹಾಕಿದ ಖಟ್ಲೆಗಳನ್ನು ವಾಪಸು ತೆಗೆದುಕೊಳ್ಳುವ ಭರವಸೆ ಪಡೆದರು. ಇದು ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದ ಪ್ರತಿರೋಧ.
ಸಮ್ಮೇಳನದ ಕೊನೆಯ ದಿನ ಹಿಂದಿನ ಸಮ್ಮೇಳನಗಳಂತೆ ಬಂಡಿಗಟ್ಟಲೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಯಾವ ನಿರ್ಣಯಗಳೂ ಜಾರಿಗೆ ಬರುವುದಿಲ್ಲ ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದರಿಗೂ ಗೊತ್ತು. ಆದರೂ ಪರಿಷತ್ತು 1992ರಿಂದ ಇಂಥದೊಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಈ ಹಿಂದಿನ ಸಮ್ಮೇಳನಗಳಲ್ಲಿ ಒಟ್ಟು 600ಕ್ಕೂ ಹೆಚ್ಚು ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ. ಅವೆಲ್ಲ ವಿಧಾನಸೌಧದ ಸಂಬಂಧಿಸಿದ ಸಚಿವ ಖಾತೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿವೆ. ಒಂದೇ ಒಂದು ನಿರ್ಣಯವನ್ನು ಸರಕಾರ ಒಪ್ಪಿ ಜಾರಿಗೆ ತಂದಿಲ್ಲ.
ಹಿಂದಿನ ಸಮ್ಮೇಳನಗಳ ನಿರ್ಣಯಗಳ ಗತಿ ಏನಾಯಿತೆಂದು ಕೇಳುವವರಿಲ್ಲ. ತಮ್ಮ ಅಧಿಕಾರವಧಿಯಲ್ಲಿ ಎರಡು ಸಮ್ಮೇಳನಗಳನ್ನು ಮಾಡಿದ ದೊಡ್ಡಸ್ಥಿಕೆಯ ಸಂಭ್ರಮದಲ್ಲಿ ನಲ್ಲೂರರು ಬೀಗುತ್ತಿದ್ದಾರೆ. ಅವರಿಗೆ ಅಧಿಕಾರದಲ್ಲಿ ಇರುವವರನ್ನು ಎದುರು ಹಾಕಿಕೊಳ್ಳುವ ತಾಕತ್ತಿಲ್ಲ. ಅಂತಲೆ ಪ್ರಭುತ್ವವನ್ನು ಇಕ್ಕಟ್ಟಿಗೆ ಸಿಲುಕಿಸುವ ಒಂದೇ ಒಂದು ಗೋಷ್ಠಿಯನ್ನು ಅವರು ಏರ್ಪಾಡು ಮಾಡಿರಲಿಲ್ಲ. ಪ್ರಗತಿಪರ ಲೇಖಕರನ್ನು, ಕವಿಗಳನ್ನು ದೂರವಿಟ್ಟಿದ್ದರು. ಇದನ್ನು ಸಾಹಿತ್ಯ ಸಮ್ಮೇಳನ ಎಂದೆನ್ನುವುದಕ್ಕಿಂತ ಸನ್ಮಾನ ಸಮ್ಮೇಳನ ಎಂದು ಕರೆದರೆ ಸೂಕ್ತವಾಗುತ್ತಿತ್ತು. ಸಮ್ಮೇಳನ ಎರಡೂ ದಿನ ಶಾಸಕರಿಗೆ, ರಾಜಕಾರಣಿಗಳಿಗೆ, ಖೇಣಿಯಂಥ ದಂಧೆಕೋರರಿಗೆ ಸನ್ಮಾನ ಸಮಾರಂಭಗಳೆ ನಡೆದವು.
ಗಂಗಾವತಿ ಸಮ್ಮೇಳನದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರೇನೋ ಸೇರಿದ್ದರು. ವಸತಿ, ಊಟ ಸಾರಿಗೆ ಹೀಗೆ ಯಾವ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಈ ಸಮ್ಮೇಳನದ ಹೊಣೆ ಹೊತ್ತ ಸ್ಥಳೀಯ ಅಕ್ಕಿ ಗಿರಣಿಗಳ ಮಾಲಕರೇ ಇದರ ಹೊಣೆ ಹೊರಬೇಕೆ. ಈ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇದನ್ನು ತಮ್ಮ ಪಕ್ಷದ ಸಮ್ಮೇಳನವೆಂದು ಭಾವಿಸಿದ್ದರೇನೋ? ಉಳಿದ ಪಕ್ಷಗಳ ಮುಖಂಡರನ್ನು ಕಡೆಗಣಿಸಲಾಗಿತ್ತು. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಕೇಸರಿ ಟೀ ಶರ್ಟು ಹಾಕಿಸಿ ಮೆರವಣಿಗೆ ಮಾಡಲಾಯಿತು.ಪುಸ್ತಕ ಪ್ರದರ್ಶನದ ಮಳಿಗೆಗಳಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ಉತ್ತರ ಕರ್ನಾಟಕದ ಅನೇಕ ಯುವಕರು ಭೈರಪ್ಪ, ಪ್ರತಾಪಸಿಂಹ ಪುಸ್ತಕಗಳಿಗಾಗಿ ಹುಡುಕುತ್ತಿದ್ದರು. ಇದು ಆ ಪ್ರದೇಶ ನಿಧಾನವಾಗಿ ಕೋಮುವಾದೀಕರಣಗೊಳ್ಳುತ್ತಿರುವ ಮುನ್ಸೂಚನೆಯಾಗಿದೆ.ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳು ಇನ್ನಾದರೂ ಎಚ್ಚೆತ್ತು ಉತ್ತರ ಕರ್ನಾಟಕದ ಅಪಾಯಕಾರಿ ವಿದ್ಯಮಾನ ಗಳ ಬಗ್ಗೆ ಗಮನಹರಿಸಬೇಕಾಗಿದೆ.
Please follow and like us:
error