ಇರಕಲ್ಲಗಡ ಕ್ಷೇತ್ರ : ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

 ಜಿಲ್ಲಾ ಪಂಚಾಯತಿಯ ಇರಕಲ್ಲಗಡಾ ಕ್ಷೇತ್ರ ಉಪಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾ ಅಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ಸೂಚನೆ ನೀಡಿದ್ದಾರೆ.
  ನೀತಿ ಸಂಹಿತೆ ಪಾಲನೆ ಹಾಗೂ ಸೂಚನೆಗಳಿಗೆ ಸಂಬಂಧಿಸಿದಂತೆ ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ವಿವಿಧ ಪಕ್ಷಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಜಿಲ್ಲಾ ಪಂಚಾಯತಿಯ ಇರಕಲ್ಲಗಡಾ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಯಾವುದೇ ಹಣ, ಮದ್ಯ ಇನ್ನಿತರೆ ಸಾಮಗ್ರಿ ಹಂಚುವುದು, ಮತದಾರರಿಗೆ ಆಮಿಷ ತೋರುವುದು, ವಿವಿಧ ಅಕ್ರಮ ಮಾರ್ಗಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವಂತಹ ಚಟುವಟಿಕೆಯನ್ನು ಕೈಗೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿ, ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.  ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರು ಕ್ಷೇತ್ರದಲ್ಲಿ ಅಕ್ರಮ ಹಣ, ಮದ್ಯ ಇನ್ನಿತರ ಸಾಮಗ್ರಿಗಳ ಸಾಗಾಣಿಕೆ, ಹಂಚಿಕೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು.  ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ, ಕೊಪ್ಪಳ ಗ್ರಾಮಾಂತರ ಠಾಣೆ ಸಿಪಿಐ ವೆಂಕಟಪ್ಪ ನಾಯಕ್, ಮುನಿರಾಬಾದ್, ಕೊಪ್ಪಳ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಪೊಲೀಸ್ ಇಲಾಖೆಯ ಅಬಕಾರಿ ಜಾರಿ ದಳದ ನಿರೀಕ್ಷಕರು, ಅಬಕಾರಿ ಇಲಾಖೆಯ ಅಧಿಕಾರಿಗಳು, ವಿವಿಧ ಪಕ್ಷಗಳ ಚುನಾವಣಾ ಏಜೆಂಟರು ಭಾಗವಹಿಸಿದ್ದರು.
Please follow and like us:
error