ಹಿಂದುಳಿದ ವರ್ಗಗಳ ಆಯೋಗ ಡಿ.೦೪ ರಂದು ಬಹಿರಂಗ ವಿಚಾರಣೆ.

ಕೊಪ್ಪಳ, ಡಿ. ೦೩ (ಕ ವಾ) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಜಾತಿ ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಮತ್ತು ಕಾಗುಣಿತ ದೋಷ ತಿದ್ದುಪಡಿಗೆ ಸಂಬಂಧಿಸಿದಂತೆ  ಡಿ.೦೪ ರಂದು ಬೆಳಿಗ್ಗೆ ೧೧೦-೩೦ ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬಹಿರಂಗ ವಿಚಾರಣೆ ಏರ್ಪಡಿಸಿದ್ದು, ಮನವಿಗಳನ್ನು ಆಹ್ವಾನಿಸಲಾಗಿದೆ. 
     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಬಹಿರಂಗ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸುವರು.  ಬಹಿರಂಗ ವಿಚಾರಣೆಯಲ್ಲಿ ನಾಗರೀಕರ ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸುವುದು ಮತ್ತು ಯಾವುದೇ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಯಲ್ಲಿ ಹೆಚ್ಚಾಗಿ ಸೇರಿಸಲಾಗಿದೆ ಎಂದು ಅಥವಾ ಸೇರಿಸಲಾಗಿಲ್ಲವೆಂದು ಬಂದ ದೂರುಗಳ ವಿಚಾರಣೆ ನಡೆಸಲಾಗುವುದು.  ಅಲ್ಲದೆ ಹಿಂದುಳಿದ  ವರ್ಗಗಳಿಗಾಗಿ ಇರುವ ಅನೇಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಲಾಗುವುದು. ಆಯೋಗದ ಪ್ರಕಾರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ, ಜಾತಿ, ಉಪಜಾತಿ, ಪಂಗಡ, ಉಪ ಪಂಗಡ, ಬುಡಕಟ್ಟು ಹಾಗೂ ಸಮೂಹಗಳ ಪರವಾಗಿ ಆಯೋಗಕ್ಕೆ ಮನವಿಗಳನ್ನು ಸಲ್ಲಿಸಬಹುದಾಗಿದೆ. ಆಯೊಗದ ವೆಬ್‌ಸೈಟ್ ವಿಳಾಸ : www.karnataka.gov.in/kscbc 
ಗೆ ಕ್ಲಿಕ್ ಮಾಡಿ ಪ್ರಶ್ನಾವಳಿಯನ್ನು ಪಡೆದು ಮನವಿದಾರರು ತಮ್ಮ ಮನವಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಭರ್ತಿ ಮಾಡಿ, ಅಫಿಡವಿಟ್ ಮಾಡಿಸಬೇಕು.  ನಂತರ ಇವುಗಳ ಹತ್ತು ಪ್ರತಿಗಳನ್ನು ಸಿದ್ಧಪಡಿಸಿ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.  ಸಲ್ಲಿಕೆಯಾದ ಮನವಿಗಳಿಗೆ ಸಂಬಂಧಿಸಿದಂತೆ ಬಹಿರಂಗ ವಿಚಾರಣೆಯ ದಿವಸ ಮನವಿದಾರರು ಖುದ್ದಾಗಿ ಅಥವಾ ನ್ಯಾಯವಾದಿಗಳ ಮೂಲಕ ತಮ್ಮ ಅಹವಾಲನ್ನು ಮಂಡಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
Please follow and like us:
error