ಜಿ.ಪಂ. & ತಾ.ಪಂ. ಚುನಾವಣೆ ಅಧಿಸೂಚನೆ ಜಾರಿ.

ಕೊಪ್ಪಳ ಫೆ. ೦೧ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೋಮವಾರದಂದು ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದಲೇ ಪ್ರಾರಂಭಗೊಂಡಿದೆ.
     ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಸದಸ್ಯರ ಪದಾವಧಿ ಮುಕ್ತಾಯಗೊಳ್ಳುವುದರಿಂದ, ತೆರವಾದ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಲು ಇದೀಗ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
     ಅಧಿಸೂಚನೆಯನ್ವಯ ನಾಮಪತ್ರ ಸಲ್ಲಿಕೆ ಸೋಮವಾರದಿಂದಲೇ ಪ್ರಾರಂಭಗೊಂಡಿದ್ದು, ಫೆ. ೦೮ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.  ನಾಮಪತ್ರಗಳ ಪರಿಶೀಲನೆ ಫೆ. ೦೯ ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಫೆ. ೧೧ ಕೊನೆಯ ದಿನಾಂಕವಾಗಿರುತ್ತದೆ. ಮತದಾನ ಅವಶ್ಯವಿದ್ದರೆ, ಫೆ. ೨೦ ರಂದು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮತದಾನ ನಡೆಸಲಾಗುವುದು.  ಚುನಾವಣೆ ಪ್ರಕ್ರಿಯೆ ಫೆ. ೨೪ ರೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಮತಕ್ಷೇತ್ರಗಳು : ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಕುಷ್ಟಗಿ ತಾಲೂಕಿನ ೦೭, ಕೊಪ್ಪಳ ತಾಲೂಕಿನ ೦೮, ಗಂಗಾವತಿ ತಾಲೂಕಿನ ೦೮ ಹಾಗೂ ಯಲಬುರ್ಗಾ ತಾಲೂಕಿನ ೦೬ ಸೇರಿದಂತೆ ಒಟ್ಟು ೨೯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿವೆ. ಅದೇ ರೀತಿ ತಾಲೂಕಾ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಕುಷ್ಟಗಿ ತಾಲೂಕಿನ ೨೫, ಕೊಪ್ಪಳ ತಾಲೂಕಿನ ೨೯, ಗಂಗಾವತಿ ತಾಲೂಕಿನ ೩೧ ಹಾಗೂ ಯಲಬುರ್ಗಾ ತಾಲೂಕಿನ ೨೪ ಸೇರಿದಂತೆ ಜಿಲ್ಲೆಯ ಒಟ್ಟು ೧೦೯ ತಾಲೂಕಾ ಪಂಚಾಯತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಜಿ.ಪಂ. ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಸ್ಥಳಗಳು :   
ಕುಷ್ಟಗಿ ತಾಲೂಕಿನಲ್ಲಿರುವ  ೦೧ ರಿಂದ ೦೭ ರವರೆಗಿನ ಒಟ್ಟು ೦೭ ಜಿಲ್ಲಾ ಪಂಚಾಯತ್ ಕ್ಷೇತ್ರಗಳಾದ ಹನುಮನಾಳ, ಹನುಮಸಾಗರ, ಚಳಗೇರಾ ಕೊರಡಕೇರಾ, ಹಿರೇಮನ್ನಾಪುರ, ಯರಗೇರಾ ಮತ್ತು ಮಣೇದಾಳ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕುಷ್ಟಗಿಯ ತಹಶೀಲ್ ಕಛೇರಿ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು. 
ಕೊಪ್ಪಳ ತಾಲೂಕಿನಲ್ಲಿರುವ ೦೮ ರಿಂದ ೧೫ ರವರೆಗಿನ ಒಟ್ಟು ೦೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳಾದ ಅಳವಂಡಿ, ಹಿರೇಸಿಂಧೋಗಿ, ಲೇಬಗೇರಿ, ಇರಕಲ್ಲಗಡಾ, ಬಂಡಿಹರ್ಲಾಪುರ, ಹಿಟ್ನಾಳ, ಗಿಣಿಗೇರಾ ಮತ್ತು ಗೊಂಡಬಾಳ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕೊಪ್ಪಳದ ತಹಶೀಲ್ ಕಛೇರಿಯ, ತಹಶೀಲ್ದಾರರ ಚೇಂಬರ್ ಕೊಠಡಿಯಲ್ಲಿ ಸ್ವೀಕರಿಸಲಾಗುವುದು.
ಗಂಗಾವತಿ ತಾಲೂಕಿನಲ್ಲಿರುವ ೧೬ ರಿಂದ ೨೩ ರವರೆಗಿನ ಒಟ್ಟು ೦೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳಾದ ಆನೇಗುಂದಿ, ಮರಳಿ, ಸಿದ್ದಾಪುರ, ಹೇರೂರು, ಹುಲಿಹೈದರ್, ನವಲಿ, ಯರಡೋಣ ಮತ್ತು ವೆಂಕಟಗಿರಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಗಂಗಾವತಿಯ ಮಿನಿವಿಧಾನಸೌಧದ ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು. ಯಲಬುರ್ಗಾ ತಾಲೂಕಿನಲ್ಲಿರುವ ೨೪ ರಿಂದ ೨೯ ರವರೆಗಿನ ಒಟ್ಟು ೦೬ ಜಿಲ್ಲಾ ಪಂಚಾಯತ್ ಕ್ಷೇತ್ರಗಳಾದ ಹಿರೇವಂಕಲಕುಂಟಾ, ಚಿಕ್ಕಮ್ಯಾಗೇರಿ, ಮಂಗಳೂರು, ತಳಕಲ್ಲ, ಇಟಗಿ ಮತ್ತು ಮುಧೋಳ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಯಲಬುರ್ಗಾದ ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು.

ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ನಾಮಪತ್ರ ಸ್ವೀಕೃತಿ ಸ್ಥಳಗಳು :  
ಕುಷ್ಟಗಿ ತಾಲೂಕಿನಲ್ಲಿರುವ ೦೧ ರಿಂದ ೧೩ ರವರೆಗಿನ ಒಟ್ಟು ೧೩ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ನಿಲೋಗಲ್ಲ, ತುಗ್ಗಲದೋಣಿ, ಹನುಮನಾಳ, ಮಾಲಗಿತ್ತಿ, ಹನುಮಸಾಗರ, ಕಬ್ಬರಗಿ, ಕಾಟಾಪುರ, ಹೂಲಗೇರಾ, ಕುಂಭಳಾವತಿ, ಬೆನಕನಾಳಯರಗೇರಾ, ಅಡವಿಭಾವಿ ಮತ್ತು ಚಳಗೇರ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕುಷ್ಟಗಿಯ ತಹಶೀಲ್ ಕಛೇರಿಯ ತಹಶೀಲ್ದಾರರ ಛೇಂಬರ್ ಕೊಠಡಿಯಲ್ಲಿ ಸ್ವೀಕರಿಸಲಾಗುವುದು ಹಾಗೂ ೧೪ ರಿಂದ ೨೫ ರವರೆಗಿನ ಒಟ್ಟು ೧೨ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಕ್ಯಾದಿಗುಪ್ಪ, ಬಿಜಕಲ್ಲ, ಕಂದಕೂರು, ತಳುವಗೇರ, ಕೊರಡಕೇರ, ಹಿರೇಮನ್ನಾಪುರ, ಮುದೇನೂರು, ದೋಟಿಹಾಳ, ಜುಮಲಾಪುರ, ಹುಲಿಯಾಪುರ, ಕಳಮಳ್ಳಿ ಮತ್ತು ಮೆಣೇದಾಳ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕುಷ್ಟಗಿ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು. ಕೊಪ್ಪಳ ತಾಲೂಕಿನಲ್ಲಿರುವ ೦೧ ರಿಂದ ೧೫ ರವರೆಗಿನ ಒಟ್ಟು ೧೫ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಕವಲೂರು, ಅಳವಂಡಿ, ಬೋಚನಹಳ್ಳಿ, ಮತ್ತೂರ, ಬೆಟಗೇರಿ, ಕಾತರಕಿ ಗುಡ್ಲಾನೂರ, ಬಿಸರಳ್ಳಿ, ಹಿರೇಸಿಂಧೋಗಿ ಹಲಗೇರಾ, ಚಿಲವಾಡಗಿ, ಕಿನ್ನಾಳ, ಲೇಬಗೇರಾ, ಇಡಕಲ್ಲಗಡಾ, ಚಿಕ್ಕಬೊಮ್ಮನಾಳ ಮತ್ತು ವಣಬಳ್ಳಾರಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕೊಪ್ಪಳ ತಹಶೀಲ್ದಾರರ ಕಛೇರಿಯ ನೆಲಮಹಡಿ ಕಟ್ಟಡದಲ್ಲಿ ಹಾಗೂ ೧೬ ರಿಂದ ೨೯ ರವರೆಗಿನ ಒಟ್ಟು ೧೪ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಬಂಡಿಹರ್ಲಾಪುರ, ಅಗಳಕೇರಾ, ಹುಲಗಿ, ಹಿಟ್ನಾಳ, ಹೊಸಳ್ಳಿ, ಮುನಿರಾಬಾದ್ ಯೋಜನಾ ಗ್ರಾಮ, ಗಿಣೀಗೇರಾ, ತಾವರಗೇರಾ, ಕೂಕನಪಳ್ಳಿ, ಬೂದಗುಂಪಾ, ಕರ್ಕಿಹಳ್ಳಿ, ಕುಣಿಕೇರಿ, ಮುದ್ದಾಬಳ್ಳಿ ಮತ್ತು ಬಹದ್ದೂರಬಂಡಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಕೊಪ್ಪಳ ತಾಲೂಕಾ ಪಂಚಾಯತ್ ಕಾರ್ಯಾಲಯದ ಸಭಾಂಗಣದ ಕಟ್ಟಡದಲ್ಲಿ ಸ್ವೀಕರಿಸಲಾಗುವುದು.
ಗಂಗಾವತಿ ತಾಲೂಕಿನಲ್ಲಿರುವ ೦೧ ರಿಂದ ೧೬ ರವರೆಗಿನ ಒಟ್ಟು ೧೬ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಆನೇಗುಂದಿ, ಸಂಗಾಪೂರ, ಬಸಾಪಟ್ಟಣ, ಚಿಕ್ಕಜಂತಕಲ್, ಜಂಗಮರಕಲ್ಗುಡಿ, ಶ್ರೀರಾಮನಗರ, ಹೊಸಕೇರಾ, ಮುಸ್ಟೂರ, ಈಳಿಗನೂರು, ಉಳೇನೂರು, ಸಿದ್ದಾಪುರ, ಗುಂಡೂರು, ಬೂದಗುಂಪಾ, ಯರಡೋಣಾ, ಚಳ್ಳೂರ, ವಡ್ಡರಹಟ್ಟಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಗಂಗಾವತಿ ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಾಗೂ ೧೭ ರಿಂದ ೩೧ ರವರೆಗಿನ ಒಟ್ಟು ೧೫ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಹೇರೂರು, ಹಣವಾಳ, ಕೆಸರಟ್ಟಿ, ವೆಂಕಟಗಿರಿ, ಹಿರೇಬೆಣಕಲ್, ಚಿಕ್ಕಮಾದಿನಾಳ, ಆಗೋಲಿ, ಸುಳೇಕಲ್, ಹಿರೇಖೇಡಾ, ಹುಲಿಹೈದರ, ಗೌರಿಪುರ, ನವಲಿ, ಬೇವಿನಾಳ, ಮೈಲಾಪುರ ಮತ್ತು ಜೀರ್‍ಹಾಳ ಕಲ್ಗುಡಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು.
ಯಲಬುರ್ಗಾ ತಾಲೂಕಿನಲ್ಲಿರುವ ೦೧ ರಿಂದ ೧೨ ರವರೆಗಿನ ಒಟ್ಟು ೧೨ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಗಾಣದಾಳ, ತಾಳಕೇರಿ, ಹಿರೇವಂಕಲಕುಂಟಾ, ಮಾಟಲದಿನ್ನಿ, ಹಿರೇಅರಳಿಹಳ್ಳಿ, ಗೆದಗೇರಿ, ಮುರಡಿ, ವಜ್ರಬಂಡಿ, ಬಂಡಿ, ಹಿರೇಮ್ಯಾಗೇರಿ, ಮುಧೋಳ ಮತ್ತು ಕರಮುಡಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಯಲಬುರ್ಗಾದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಾಗೂ ೧೩ ರಿಂದ ೨೪ ರವರೆಗಿನ ಒಟ್ಟು ೧೨ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಮಂಗಳೂರು, ಬೇವೂರು, ಕುದ್ರಿಮೋತಿ, ಹಿರೇಬೀಡನಾಳ, ಇಟಗಿ, ರಾಜೂರು, ಬಳಿಗೇರಿ, ಶಿರೂರು, ಯರೇಹಂಚಿನಾಳ, ತಳಕಲ್, ಬನ್ನಿಕೊಪ್ಪ, ಬೆಣಕಲ್ಲ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಯಲಬುರ್ಗಾ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು.

ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ
ಕೊಪ್ಪಳ ಫೆ. ೦೧ (ಕ.ವಾ): ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪತ್ರಿಕಾ ಮಾಧ್ಯಮ, ದೃಶ್ಯ, ಶ್ರವಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಮಾಧ್ಯಮ ಚುನಾವಣಾ ನಿಯಂತ್ರಣ ಸಮಿತಿ ರಚಿಸಿ  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
      ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೇಬಲ್ ನೆಟ್‌ವರ್ಕ್ ಮೂಲಕ ಅಥವಾ ಟಿ.ವಿ. ಚಾನೆಲ್ ಗಳ ಮೂಲಕ ಅಥವಾ ಪ್ರಚಾರ ನಡೆಸುವುದಕ್ಕೆ ಮುನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಕೇಬಲ್ ಆಪರೇಟರ್‌ಗಳು ಮತ್ತು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
     ಚುನಾವಣೆ ಸಂದರ್ಭದಲ್ಲಿ ಪತ್ರಿಕೆ, ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಪ್ರಚಾರ ನಿಯಂತ್ರಣಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೊಪ್ಪಳ ತಹಸಿಲ್ದಾರರು ಸದಸ್ಯರಾಗಿದ್ದು ಜಿಲ್ಲಾ ವಾರ್ತಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
     ಕೇಬಲ್ ಆಪರೇಟರ್‌ಗಳಿಗೂ ಸಹ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ತಾವು ಪ್ರಸಾರ ಮಾಡುವ ಯಾವುದೇ ಚುನಾವಣಾ ಪ್ರಚಾರದ ವಿಷಯಕ್ಕೆ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರಗೊಳಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೇ ಇರುವಂತಹ ಯಾವುದೇ ಪ್ರಚಾರದ ವಿಡಿಯೋ ಅಥವಾ ಧ್ವನಿಮುದ್ರಿಕೆ ಪ್ರಸಾರಗೊಂಡಲ್ಲಿ ಅಂತಹ ಕೇಬಲ್ ಆಪರೇಟರ್‌ಗಳ ಎಲ್ಲ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.  
     ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ/ವಯಕ್ತಿಕ ಚುನಾವಣಾ ಪ್ರಚಾರವನ್ನು ವಿವಿಧ ಮಾಧ್ಯಮಗಳ ಮೂಲಕ ಮಾಡಲಿದ್ದು,  ಪತ್ರಿಕೆ, ಟಿ.ವಿ. ಚಾನಲ್ ಅಥವಾ ಕೇಬಲ್ ನೆಟ್‌ವರ್ಕ್‌ಗಳಲ್ಲಿ ಪ್ರಚಾರ ನೀಡಬಯಸುವವರು ಕನಿಷ್ಟ ೩ ದಿನ ಮೊದಲು ಅರ್ಜಿ ಸಲ್ಲಿಸಬೇಕು.  ಅಂತಹ ಅರ್ಜಿಯು ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳನ್ನು ವಿದ್ಯುನ್ಮಾನ ರೂಪದಲ್ಲಿ (ಸಿ.ಡಿ) ಹಾಗೂ ಜೊತೆಗೆ ದೃಢೀಕೃತಗೊಂಡಿರುವ ಅದರ ಸಂಭಾಷಣೆಯ ಹಸ್ತಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.  ಇದಕ್ಕಾಗಿ ನಿಗದಿತ ನಮೂನೆಯನ್ನು ಚುನಾವಣಾ ಆಯೋಗ ನಿಗದಿಪಡಿಸಿದ್ದು, ಈ ಅರ್ಜಿ ನಮೂನೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದಲ್ಲಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ.   ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗಕ್ಕೆ ಸಲ್ಲಿಸಬೇಕು. ಅಂತಹ ಜಾಹೀರಾತನ್ನು ಪರಿಶೀಲಿಸಿ, ಪ್ರಚಾರ ವಿಷಯ ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಅರ್ಹತೆಯ ಪ್ರಮಾಣಪತ್ರ ನೀಡುವರು.
      ಚುನಾವಣಾ ಆಯೋಗವು ಪತ್ರಿಕೆ, ಶ್ರವಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಕುರಿತು ಹೊರಡಿಸಿರುವ ಆದೇಶವನ್ನು ಎಲ್ಲ ಕೇಬಲ್ ಆಪರೇಟರ್‌ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಚುನಾವಣೆ : ತಾ.ಪಂ. ಕಬ್ಬರಗಿ ಕ್ಷೇತ್ರಕ್ಕೆ ಒಂದು ನಾಮಪತ್ರ
ಕೊಪ್ಪಳ ಫೆ. ೦೧ (ಕರ್ನಾಟಕ ವಾರ್ತೆ) : ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡ ಮೊದಲ ದಿನವಾದ ಸೋಮವಾರದಂದು ಕುಷ್ಟಗಿ ತಾಲೂಕಾ ಪಂಚಾಯತಿ ಕಬ್ಬರಗಿ ಕ್ಷೇತ್ರದಿಂದ ಮಾದವ್ವ ಶಿವಪ್ಪ ಹುಣಸಿಹಾಳ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.  ಉಳಿದಂತೆ ಯಾವುದೇ ತಾಲೂಕಾ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಸೋಮವಾರದಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಚುನಾವಣೆ : ಶಸ್ತ್ರಗಳನ್ನು ಪೊಲೀಸ್ ವಶಕ್ಕೆ ಸಲ್ಲಿಸಲು ಸೂಚನೆ
ಕೊಪ್ಪಳ ಫೆ. ೦೧ (ಕರ್ನಾಟಕ ವಾರ್ತೆ) : ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆದು ಶಸ್ತ್ರಗಳನ್ನು ಹೊಂದಿರುವವರು ಕೂಡಲೆ ಸಂಬಂಧಿಸಿದ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಕಾನೂನು ಸುವ್ಯವಸ್ಥೆ ಮತ್ತು ಶಾಂತಿಪಾಲನೆಗಾಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.  ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳು, ನಗರ, ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಆದರೆ ಚುನಾವಣೆ ನಡೆಯದೇ ಇರುವ ಪ್ರದೇಶಗಳಲ್ಲಿ ಪರವಾನಿಗೆ ಪಡೆದ ಶಸ್ತ್ರಗಳನ್ನು, ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಅಂದರೆ ಫೆ. ೨೪ ರವರೆಗೂ, ಸಂಬಂಧಿಸಿದ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಬೇಕು.  ಈ ಆದೇಶವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಾಗೂ ಆರ್.ಬಿ.ಐ ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳ ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗೆ ಅಲ್ಲದೆ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ನಗರ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

Please follow and like us:
error