ಎರಡು ’ದಾಸ’ನ ಗಜಲ್‌ಗಳು

೦೧

ಜೋಳಿಗೆ ಕಂಕುಳಲಿಟ್ಟು ಜಗವ ನೀ ಸುತ್ತೆಂದು ಗುರು ಮಾಡಿದನೆನ್ನ ಫಕೀರನ
ಬೋಧನ ಬಂಗಿಯ ಹೊಡೆಯುತ ಗುಂಗಲಿ ನೀನಿರುಎನುತ ಗುರು ಮಾಡಿದನೆನ್ನ ಫಕೀರನ

ಪಂಚ ತತ್ವದ ವಿಷಯ ತಿಳಿದು ಮೂಲ ಮಂತ್ರವ ಕಿವಿಯೊಳು ಊದುತ
ಹಸ್ತಕ ಮಸ್ತಕ ಮಾಡಿ ಆರು ಮೂರು ಅಳಿಯೆಂದು ತಿಳಿಸಿ ಗುರು ಮಾಡಿದನೆನ್ನ ಫಕೀರನ

ಕುದುರಿ ಏರಿ ಕುಣಿಯುತ ಸಿದ್ಧಪರ್ವತದೊಳು ತಪ್ಪಲದ ಹುಚ್ಚ ಹಿಡಿಸುತ
ಬೆಳಕಿನೊಳು ಬೆಳಕ ಗಾಳಿಯೊಳು ಗಾಳಿ ಹುಡುಕೆಂದು ಗುರು ಮಾಡಿದನೆನ್ನ ಫಕೀರನ

ಸಂಸಾರ ನದಿಯ ಸೆಳವನು ತಪ್ಪಿಸಿ ತಿನುವ ಆಸೆಯ ಹಾದಿ ಬಿಡಿಸುತ
ಊದಿಸೇದುವ ವಾದ ಬೂದಿಯತನಕ ನಾದಹಿಡಿಯೆಂದು ಗುರು ಮಾಡಿದನೆನ್ನ ಫಕೀರನ

ಗಡಿಬಿಡಿ ಗಬ್ಬೂರ ಸಂತೆಯಲಿ ಮಿಂಡಾನ ಕೈಹಿಡಿದು ಗಂಡಾನ ಮರೆಸುತ
ಬಸುರಿಲ್ಲದ ಬಯಕೆಯ ನಿರಾಕಾರ ಕೂಸಿನ ಹಡೆಯೆಂದು ಗುರು ಮಾಡಿದನೆನ್ನ ಫಕೀರನ

ಸಾಲು ಮಂಟಪ ಹಿಡಿದು ಮೇಲು ಮಂಟಪ ಸೇರುವ ಅವಸರ ಮಾಡಿಸುತ
ಲೋಕನಾಥ ನೀನಾಗಲು ’ದಾಸ’ನ ಏಕನಾಥವ ನುಡಿಸೆಂದು ಗುರು ಮಾಡಿದನೆನ್ನ ಫಕೀರನ

೦೨
ತಿನ್ನಲು ಬಾರದವುಗಳು ನಿನ್ನ ಮುಂದೆ ಎಷ್ಟಿದ್ದರೇನು ಹಸಿದವರ ಅನ್ನ ಕಸಿದಿದ್ದಕ್ಕೆ ಸಮ
ಹೊಟ್ಟೆಯೇ ಇಲ್ಲದವರ ಹಸಿವು ಸಾವಿರ ಇದ್ದರೇನು ನಿನ್ನ ಮುಂದಿಟ್ಟ ಎಡೆ ಹಳಸಿದ್ದಕ್ಕೆ ಸಮ

ಪೂಜೆಗಾಗಿ ಎಡೆಗಿಟ್ಟ ಫಲಕಾಯಿ ಅಣಕಿಸುತಿವೆ ಹಸಿದವರ ಮುಟ್ಟಲಾರೆ ಎಂದು
ನೊಣಗಳು ತಿನ್ನುವ ಪ್ರಸಾದ ಎಷ್ಟಿದ್ದರೇನು ನನ್ನವರ ಅನ್ನ ಮುಗಿಲು ಹರಿದದ್ದಕ್ಕೆ ಸಮ

ಕೋಣೆಯೊಳು ಕುಳಿತು ಭೋಗದ ಉಸಿರು ಸೇವಿಸುವ ಲೋಬಾನ ನಿನಗೇಕೆ ಎಂದು
ಧೂಪದ ಗಾಳಿ ಎಷ್ಟು ಮಧುರವಿದ್ದರೇನು ಉಸಿರಿಲ್ಲದವರ ಉಸಿರು ಕದ್ದಿದ್ದಕ್ಕೆ ಸಮ

ಹೇಗೆ ಹೇಳಲಿ ಅಲಂಕರಿಸಿರುವ ಹೂಹಾರ ತೋರಣಗಳು ನಿನ್ನ ಸಾವ ಬಂಧಿಸಿವೆ ಎಂದು
ಎಡಕಿನ ಕಾಸಿನ ಸರ ಹೊಳೆಯುತ್ತಿದ್ದರೇನು ನನ್ನವರ ಹರಿಷಿಣದ ಬೊಟ್ಟು ಕದ್ದಿದ್ದಕ್ಕೆ ಸಮ

ಸೊರಗಿದ ಕೈಗಳು ನೇಯ್ದ ಪೀತಾಂಬರವು ಮುಖಕೆ ಕಳೆ ತರಲು ನಗುವುದೇಕೆಂದು
ಮೈಯ ಮುಚ್ಚುವ ಬಟ್ಟೆ ಏನಿದ್ದರೇನು ಬಯಲೊಳಗೆ ಬತ್ತಲಿದ್ದವರ ಮಾನ ಕಳೆದಿದ್ದಕ್ಕೆ ಸಮ

ಉಬ್ಬಿ ಹೋಗಬೇಡ ಜಗದ ಸೌಂದರ್ಯ ನಿನ್ನ ಕಾಲ ಬಳಿಬಂದು ಬಿದ್ದಿದೆ ಎಂದು
ಕೆಸರು ತುಳಿಯದ ಕಾಲು ಹೇಗಿದ್ದರೇನು ದುಡಿವವರ ಬೆವರು ಕದ್ದಿದ್ದಕ್ಕೆ ಸಮ

ನಗದಿರು ನೀ ಎಣ್ಣೆ ಬತ್ತಿಯ ದೀಪಗಳ ಬೆಳಕು ನಿನ್ನಂಗಳವ ಬೆಳಗುತ್ತಿವೆ ಎಂದು
ಲಕ್ಷ್ಯ ದೀಪೋತ್ಸವಗಳು ಎಷ್ಟಿದ್ದರೇನು ಕತ್ತಲಲ್ಲಿದ್ದವರ ಕಣ್ಣ ಬೆಳಕು ಕದ್ದಿದ್ದಕ್ಕೆ ಸಮ

ಗರ್ವ ಪಡದಿರು ನೀ ಕಲ್ಲುದೇವರಾಗಿ ಜಗದ ಜಗುಲಿಯಲಿ ಕುಳಿತ ಜಾಣೆ ನಾನೆಂದು
ನೆಲ ಕಸಿದ ಜಗುಲಿ ಎಷ್ಟಿದ್ದರೇನು ನನ್ನೂರ ’ದಾ’ನ ಚಾಪೆ ಕದ್ದಿದ್ದಕ್ಕೆ ಸಮ

ರಮೇಶ ಗಬ್ಬೂರು

Leave a Reply