ಯುವಜನರಿಗೆ ಆದರ್ಶಪ್ರಾಯ ಸ್ವಾಮಿ ವಿವೇಕಾನಂದರು- ಶಿವರಾಮಗೌಡ

ಕೊಪ್ಪಳ ಜ. ೧೧   ಭಾರತ ದೇಶದ ಸಂಸ್ಕೃತಿ ಮತ್ತು ಹಿರಿಮೆಯನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಸಂಸದ ಶಿವರಾಮಗೌಡ ಅವರು ಹೇಳಿದರು.
  ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಯುವ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸ್ವಾಮಿ ವಿವೇಕಾನಂದರ ಹೆಸರೇ, ಇಂದಿನ ಯುವಕರಲ್ಲಿ ಸ್ಪೂರ್ತಿ ನೀಡುವುದು, ನಿತ್ಯ ಜೀವನಕ್ಕೆ ಬೇಕಾದ ತತ್ವ ಆದರ್ಶಗಳನ್ನು ಯುವ ಜನತೆ ಪಠ್ಯ ಪುಸ್ತಕಗಳಿಂದ ಪಡೆಯಲು ಸಾಧ್ಯವಿಲ್ಲ.  ಸ್ವಾಮಿ ವಿವೇಕಾನಂದರ ತತ್ವಗಳನ್ನೊಳಗೊಂಡ ಪುಸ್ತಕಗಳನ್ನು ಅವಲೋಕಿಸಿದಾಗ ಮಾತ್ರ, ಆದರ್ಶ ಮನೋಭಾವನೆ ಮೈಗೂಡಿಸಿಕೊಳ್ಳಲು ಸಾಧ್ಯ.  ದೇಶದ ಭವಿಷ್ಯದ ಶಕ್ತಿಯೆನಿಸಿಕೊಳ್ಳುವ ಇಂದಿನ ಯುವ ಪೀಳಿಗೆ ಸಾಗಿ ಬರುತ್ತಿರುವ ದಾರಿಯ ಬಗ್ಗೆ ವಿಮರ್ಶಕರು, ಬುದ್ದಿಜೀವಿಗಳು ಚಿಂತನೆ ನಡೆಸುವ ಅಗತ್ಯವಿದೆ.  ನವದೆಹಲಿಯಲ್ಲಿ ಇತ್ತೀಚೆಗೆ ನಡೆದಂತಹ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ.  ಆದರೆ ಸಮಾಧಾನಕರ ಸಂಗತಿಯೆಂದರೆ, ಇಂತಹ ಪ್ರಕರಣದ ಬಗ್ಗೆ ಖಂಡಿಸಲು ಇಡೀ ದೇಶದ ಯುವಜನತೆ ಒಂದಾಗಿದ್ದು.  ದೇಶದ ಸುಮಾರು ಶೇ. ೭೦ ರಷ್ಟಿರುವ ಯುವ ಜನತೆ ದೇಶದ ಬುನಾದಿಯನ್ನು ಭದ್ರಗೊಳಿಸುವ ಹೊಣೆ ಹೊಂದಿದೆ.  ಇಂತಹ ಯುವ ಶಕ್ತಿಯನ್ನು ಸತ್ಕಾರ್ಯಗಳಿಗೆ ಬಳಸಿಕೊಳ್ಳಬೇಕಾಗಿದೆ.  ಕೃಷಿ ಅವಲಂಬಿತ ಯುವ ರೈತರಿಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.  ಆರ್ಥಿಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಿದಾಗ ಮಾತ್ರ ವಿವೇಕಾನಂದರ ತತ್ವಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ಸಂಸದ ಶಿವರಾಮಗೌಡ ಅವರು ಅಭಿಪ್ರಾಯಪಟ್ಟರು. 
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದವರು.  ಯುವಕರಲ್ಲಿ ನವೋತ್ಸಾಹವನ್ನು ಕರೆಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು.   ಆದರೆ ಆ ಮಹಾನ್ ವ್ಯಕ್ತಿ ಕಂಡಂತಹ ಕನಸಿನ ಮಾದರಿಯಲ್ಲಿ ನಮ್ಮ ದೇಶ ಮುನ್ನಡೆಯುತ್ತಿಲ್ಲ.  ಯುವ ಪೀಳಿಗೆಯ ಬಗ್ಗೆ ಅವರು ಕಂಡ ಕನಸನ್ನು, ಇಂದಿನ ಯುವಜನತೆ ಸಾಕಾರಗೊಳಿಸದಿರುವ ಬಗ್ಗೆ ವಿಷಾದವೂ ಇದೆ ಎಂದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ತ್ಯಾಗ ಮತ್ತು ಸೇವೆ, ಇವರೆಡೂ ಸ್ವಾಮಿ ವಿವೇಕಾನಂದರ ಪ್ರಮುಖ ಆದರ್ಶ ತತ್ವಗಳಾಗಿದ್ದವು.  ಇವೆರಡು ಪ್ರಮುಖ ತತ್ವಗಳನ್ನು ಅಳವಡಿಸಿಕೊಂಡಲ್ಲಿ, ಆ ವ್ಯಕ್ತಿ ದೇಶಕ್ಕೆ ಆದರ್ಶಪ್ರಾಯರಾಗಲು ಸಾಧ್ಯವಿದೆ.  ಇದು ಯುವ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸಲು ಸ್ಪೂರ್ತಿ ನೀಡಲಿದೆ ಎಂದರು.
  ಕಾರ್ಯಕ್ರಮದ ಅಂಗವಾಗಿ ಕೊಪ್ಪಳಸ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಮೀಜಿ ಅವರು ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಪ್ರಭಾರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ. ಮಹಾಂತೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಎನ್.ಎಸ್. ಪಾಟೀಲ್ ಸ್ವಾಗತಿಸಿದರು, ಮಂಜುನಾಥ, ಶರಣಪ್ಪ ಹಂದ್ರಾಳ ಪ್ರಾರ್ಥಿಸಿದರು, ಬಸವರಾಜ್ ವಂದಿಸಿದರು.  ಇದೇ ಸಂದರ್ಭದಲ್ಲಿ ಕೊಪ್ಪಳದ ಬಂಜಾರ ಯುವಕ ಸಂಘ ಹಾಗೂ ವಂದೇ ಮಾತರಂ ಯುವ ಸಂಘಗಳಿಗೆ ಅತ್ಯುತ್ತಮ ಸಂಘಗಳೆಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Please follow and like us:
error