ಪ್ರತ್ಯೇಕ ಪರಿವರ್ತಕ ಅಳವಡಿಕೆಗೆ ಜಿ.ಪಂ. ಅಧ್ಯಕ್ಷರ ಸೂಚನೆ

 ಗ್ರಾಮೀಣ ಕುಡಿಯುವ ನೀರು ಘಟಕಗಳಿಗೆ 
  ಜಿಲ್ಲೆಯಲ್ಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಗಳ ಘಟಕಗಳಿಗೆ ಪ್ರತ್ಯೇಕವಾಗಿ ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್‌ಫಾರ್ಮರ್‍ಸ್) ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿ.ಪಂ. ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನವಸತಿ ಪ್ರದೇಶಗಳಿಗೂ ಹಾಗೂ ನೀರು ಸರಬರಾಜು ಘಟಕಗಳಿಗೂ ಒಂದೇ ವಿದ್ಯುತ್ ಪರಿವರ್ತಕಗಳನ್ನು ಬಳಸಲಾಗುತ್ತಿರುವುದನ್ನು ಹಲವೆಡೆ ಗಮನಿಸಲಾಗಿದೆ.  ಇದರಿಂದಾಗಿ ವಿದ್ಯುತ್ ಪರಿವರ್ತಕಗಳಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ ಪರಿವರ್ತಕಗಳು ಬೇಗನೆ ಹಾಳಾಗುತ್ತಿವೆ.  ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗುತ್ತಿದೆ.  ಜಿಲ್ಲೆಯ ಎಲ್ಲ ಗ್ರಾಮೀಣ ಕುಡಿಯುವ ನೀರಿನ ಘಟಕಗಳಿಗೆ ಪ್ರತ್ಯೇಕವಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವುದು ಅಗತ್ಯವಾಗಿದ್ದು, ಇಂತಹ ಘಟಕಗಳನ್ನು ಗುರುತಿಸಿ, ಪ್ರತ್ಯೇಕ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಬೇಕಾಗುವ ಅಂದಾಜು ವೆಚ್ಚದ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸೂಚನೆ ನೀಡಿದರು.
  ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳು ೨೦೧೩-೧೪ ನೇ ಸಾಲಿನ ಕ್ರಿಯಾ ಯೋಜನೆಯನ್ನು ರೂಪಿಸುವಾಗ ಗ್ರಾಮೀಣ ಪ್ರದೇಶಗಳ ರಸ್ತೆ, ಚರಂಡಿಗಳನ್ನು ನಿರ್ಮಿಸುವುದು ಸೇರಿದಂತೆ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂದು ಅನುಷ್ಠಾನಾಧಿಕಾರಿಗಳಿಗೆ ತಿಳಿಸಿದರು.
  ಸಹಕಾರ ಇಲಾಖೆಯು ಜಿಲ್ಲೆಯಲ್ಲಿ ಸಹಕಾರ ಸಂಘಗಳ ರಚನೆಯಲ್ಲಿ ಉತ್ತಮ ಸಾಧನೆ ತೋರಿಲ್ಲ. ಗ್ರಾಮೀಣ ಪ್ರದೇಶಗಳ ಜನರು ಸಹಕಾರ ಸಂಘಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದು,  ಪ್ರತಿ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಸಹಕಾರ ಸಂಘಗಳನ್ನು ರಚಿಸಲು, ಅಗತ್ಯ ಸಮೀಕ್ಷೆ ನಡೆಸಿ, ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು  ಸಹಕಾರ ಸಂಘಗಳ ಉಪನಿಬಂಧಕ ಮುನಿಯಪ್ಪ ಅವರಿಗೆ ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸೂಚನೆ ನೀಡಿದರು.
  ಖಾಯಂ ಪಡಿತರ ಚೀಟಿಯನ್ನು ಶೀಘ್ರ ಪಡೆದುಕೊಂಡು ಹೋಗುವಂತೆ ಹಲವಾರು ಬಾರಿ ಸೂಚನೆ ನೀಡಲಾಗಿದ.  ನಗರ/ಪಟ್ಟಣ ಪ್ರದೇಶದವರು ಮಾರ್ಚ್ ೩೧ ರ ಒಳಗಾಗಿ, ಗ್ರಾಮೀಣ ಪ್ರದೇಶದವರು ಏಪ್ರಿಲ್-೩೦ ರ ಒಳಗಾಗಿ ಖಾಯಂ ಪಡಿತರ ಚೀಟಿ ಪಡೆಯಬೇಕು. ತಪ್ಪಿದಲ್ಲಿ ಅಂತಹವರಿಗೆ ಇನ್ನು ಮುಂದೆ ಯಾವುದೇ ಪಡಿತರ ಸಾಮಗ್ರಿ ವಿತರಣೆ ಮಾಡಲಾಗುವುದಿಲ್ಲ. ಕೆಲವು ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಡಿತರ ಚೀಟಿ ವಿತರಣೆಗೆ ಸಹಕರಿಸುತ್ತಿಲ್ಲ.  ಕರ ವಸೂಲಾತಿಗೂ, ಪಡಿತರ ಚೀಟಿ ವಿತರಣೆಗೂ ಸಂಬಂಧ ಕಲ್ಪಿಸಿ, ವಿತರಣೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು, ಕರ ವಸೂಲಾತಿಗೂ, ಪಡಿತರ ಚೀಟಿಗೂ ಸಂಬಂಧ ಕಲ್ಪಿಸಿ, ಖಾಯಂ ಪಡಿತರ ಚೀಟಿ ವಿತರಣೆಗೆ ಅಡ್ಡಿಯುಂಟು ಮಾಡುವ ಪಂಚಾಯತಿ ಅಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.  ಇಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ, ಕೂಡಲೆ ಜಿ.ಪಂ. ಕಚೇರಿಗೆ ವರದಿ ಸಲ್ಲಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಮಿಸಮಿತಿ ಅಧ್ಯಕ್ಷ ಟಿ. ಜನಾರ್ಧನ ಹುಲಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error