ಮೇ. ೦೨, ೦೩ ರಂದು ಕನಕಗಿರಿ ಉತ್ಸವಕ್ಕೆ ಸಿದ್ಧತೆ- ಡಿ.ಸಿ. ಸತ್ಯಮೂರ್ತಿ

ಕೊಪ್ಪಳ ಏ. : ಕನಕಗಿರಿ ಉತ್ಸವವನ್ನು ಮೇ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ.
ಕನಕಗಿರಿ ಉತ್ಸವ ಆಚರಣೆ ಕುರಿತಂತೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕನಕಗಿರಿ ಉತ್ಸವ ಆಚರಿಸುವ ಸಲುವಾಗಿ ಸರ್ಕಾರ ಒಟ್ಟು ೫೦ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ ೨೫ ಲಕ್ಷ ರೂ.ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಲಾವಿದರ ಸಂಭಾವನೆ ಮತ್ತಿತರ ವೆಚ್ಚಗಳಿಗಾಗಿ ಹಾಗೂ ೨೫ ಲಕ್ಷ ರೂ.ಗಳನ್ನು ವೇದಿಕೆ ನಿರ್ಮಾಣ ಹಾಗೂ ಸ್ಥಳೀಯ ವೆಚ್ಚ ಭರಿಸಲು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಕನಕಗಿರಿ ಉತ್ಸವಕ್ಕೆ ೦೧ ಕೋಟಿ ೨೫ ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈ ವರ್ಷ ಉತ್ಸವಕ್ಕೆ ಬಿಡುಗಡೆ ಮಾಡಿರುವ ಹಣದಲ್ಲಿ ಉತ್ಸವವನ್ನು ಕೈಗೊಳ್ಳಬೇಕಾಗಿದ್ದು, ಅದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉತ್ಸವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ವಿವರಗಳನ್ನು ಸಭೆಯಲ್ಲಿ ಹಾಜರಿದ್ದ ಅಧಿಕಾರಿ ಮತ್ತು ಗಣ್ಯರು ಗಮನಿಸಿ, ತಿಳಿಸುವಂತಾಗಬೇಕು. ಹೆಚ್ಚುವರಿ ವೆಚ್ಚವನ್ನು ಸ್ಥಳೀಯವಾಗಿ ಭರಿಸಬೇಕಾಗುವುದು. ಆ ಕುರಿತು, ಚುನಾಯಿತ ಪ್ರತಿನಿಧಿಗಳು ಗಮನಹರಿಸಬೇಕಾಗುವುದು. ಉತ್ಸವ ಆಚರಣೆ ಕುರಿತು ಈಗಾಗಲೆ ಪೂರ್ವಭಾವಿ ಸಭೆಯೊಂದನ್ನು ನಡೆಸಲಾಗಿದ್ದು, ೧೮ ಉಪ ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಯ ಅಧ್ಯಕ್ಷರುಗಳು ತಮಗೆ ವಹಿಸಿರುವ ಕೆಲಸಗಳನ್ನು ಕೈಗೊಳ್ಳಲು ಬೇಕಾಗುವ ಅನುದಾನ ವಿವರ, ಇತರೆ ಮಾಹಿತಿಯನ್ನು ಒದಗಿಸಲು ಸಮಿತಿ ಸಭೆ ಕರೆದು ಕೂಡಲೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಅವರು ಮಾತನಾಡಿ, ಕನಕಗಿರಿ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು, ತಮ್ಮ ಅರ್ಜಿಗಳನ್ನು ಏ. ೨೦ ರ ಒಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಕಳುಹಿಸಿಕೊಡಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆನೆಗೊಂದಿ ಉತ್ಸವದಲ್ಲಿ ಅವಕಾಶ ಪಡೆದ ಕಲಾವಿದರಿಗೆ ಕನಕಗಿರಿ ಉತ್ಸವ ಸಂದರ್ಭದಲ್ಲಿ ಅವಕಾಶ ನೀಡಲಾಗುವುದಿಲ್ಲ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರನ್ನು ಉತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ, ಜಿ.ಪಂ. ಸದಸ್ಯರುಗಳಾದ ಗಂಗಣ್ಣ ಸಮಗಂಡಿ, ಅಮರೇಶ್ ಕುಳಗಿ, ತಾ.ಪಂ. ಅಧ್ಯಕ್ಷ ಹೊನ್ನೂರಸಾಬ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ, ಸಹಾಯಕ ಆಯುಕ್ತ ಶರಣಬಸಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗಣ್ಯರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

Please follow and like us:
error