ಜಿಲ್ಲೆಯಲ್ಲಿ ಹೋಬಳಿಗೊಂದು ಹಾಸ್ಟೆಲ್ ತೆರೆಯಲು ಕ್ರಮ- ಶಿವರಾಜ್ ತಂಗಡಗಿ

 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹಾಗೂ ಪ.ಜಾತಿ, ಪ.ವರ್ಗ ಸೇರಿದಂತೆ ಎಲ್ಲ ವರ್ಗಗಳ ಬಡಕುಟುಂಬದ ಮಕ್ಕಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಪ್ರತಿ ಹೋಬಳಿಗೆ ಒಂದು ಹಾಸ್ಟೆಲ್ ತೆರೆಯಲು ಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳ ಸಹಕಾರವನ್ನು ಪಡೆದು ಯೋಜನೆಯನ್ನು ಸಾಕಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ತಾಲೂಕಿನ ಟಣಕನಕಲ್ ಗ್ರಾಮದ ಬಳಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ    ೩. ೮೭ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಆದರ್ಶ ವಿದ್ಯಾಲಯದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ.  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಕಷ್ಟದಾಯಕವಾಗಿದ್ದನ್ನು ಮನಗಂಡಿರುವ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯದ ೭೪ ತಾಲೂಕು ಕೇಂದ್ರಗಳಲ್ಲಿ ಆದರ್ಶ ವಿದ್ಯಾಲಯಗಳನ್ನು ಪ್ರಾರಂಭಿಸಿ, ಅದರಲ್ಲಿ ೬ ರಿಂದ ಪಿಯುಸಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ.  ಆದರ್ಶ ವಿದ್ಯಾಲಯ ಸದ್ಯ ಕೊಪ್ಪಳದ ಬನ್ನಿಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ತಾತ್ಕಾಲಿಕವಾಗಿ ೬ ರಿಂದ ೯ ನೇ ತರಗತಿಯವರೆಗೆ ನಡೆಯುತ್ತಿದ್ದು, ಇದೀಗ ನಗರಕ್ಕೆ ಹತ್ತಿರದ ಟಣಕನಕಲ್ ಗ್ರಾಮದ ಬಳಿ ಆದರ್ಶ ವಿದ್ಯಾಲಯಕ್ಕಾಗಿ ಸುಮಾರು ೫ ಎಕರೆ ಜಮೀನು ನೀಡಿ, ೩. ೮೭ ಕೋಟಿ ರೂ. ವೆಚ್ಚದಲ್ಲಿ ೩ ಅಂತಸ್ತಿನಲ್ಲಿ ೩೭ ಕೋಣೆಗಳುಳ್ಳ ಭವ್ಯ ಶಾಲಾ ಕಟ್ಟಡ ನಿರ್ಮಿಸಲಾಗುವುದು.  ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದ್ರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಇಂತಹ ಶಾಲೆಗಳ ನಿರ್ಮಾಣದಿಂದ, ಶಿಕ್ಷಣ ಕ್ಷೇತ್ರ ಅಭಿವೃದ್ಧಿಯನ್ನು ಹೊಂದಲಿದೆ.  ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ೩೭೧ (ಜೆ) ತಿದ್ದುಪಡಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.  ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು.  ಶಿಕ್ಷಣದ ಪ್ರಗತಿಗೆ ಸರ್ಕಾರ ಒದಗಿಸಿರುವ ಅಕ್ಷರದಾಸೋಹ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮುಂತಾದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಚಿವ ಶಿವರಾಜ್ ಎಸ್ ತಂಗಡಗಿ ಮನವಿ ಮಾಡಿಕೊಂಡರು.
  ಸಮಾರಂಭದಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಆದರ್ಶ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸುಮಾರು ೮೦ ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯುತ್ತಿದೆ.  ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪ್ರತಿ ದಿನದ ಹಾಜರಾತಿಗೆ ೨ ರೂ. ನಂತೆ ಪ್ರೋತ್ಸಾಹಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಯಾಗುವ ಯೋಜನೆಯನ್ನು ಜಾರಿಗೊಳಿಸಿದೆ.  ಟಣಕನಕಲ್ ಗ್ರಾಮದ ಅಭಿವೃದ್ಧಿಗೆ ಈಗಾಗಲೆ ಅಗತ್ಯ ಅನುದಾನವನ್ನು ಒದಗಿಸಲಾಗಿದ್ದು, ಶೀಘ್ರದಲ್ಲೇ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  ಜಿಲ್ಲೆಯ ಸಣ್ಣ ನೀರಾವರಿ ಯೋಜನೆಗಳಿಗೆ ಒಟ್ಟು ೧೮ ಕೋಟಿ ರೂ.ಗಳ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಒದಗಿಸಿದ್ದಾರೆ.  ಮುಂದಿನ ವರ್ಷದಲ್ಲಿ ಕ್ಷೇತ್ರದ ವಿವಿಧ ಏತ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ತಾ.ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್, ಜಿ.ಪಂ. ಸದಸ್ಯರುಗಳಾದ ವನಿತಾಗಡಾದ್, ಈರಪ್ಪ ಕುಡಗುಂಟಿ, ನಾಗನಗೌಡ ಪಾಟೀಲ್, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ವಾಲ್ಮೀಕಿ, ತಾ.ಪಂ. ಸದಸ್ಯ ರಮೇಶ್ ಚೌಡಕಿ, ಅಮರೇಶ್ ಉಪಲಾಪುರ, ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ ಚುಕ್ಕನಕಲ್, ನಗರಸಭೆ ಸದಸ್ಯ ಮುತ್ತು ಕುಷ್ಟಗಿ, ಎಪಿಎಂಸಿ ಅಧ್ಯಕ್ಷರು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಸ್ವಾಗತಿಸಿ, ವಂದಿಸಿದರು.  

Leave a Reply