ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಹೈಟೆಕ್ ಸೌಲಭ್ಯ

  ಈಶಾನ್ಯ ಸಾರಿಗೆ ಸಂಸ್ಥೆಯು ಇತ್ತೀಚಿಗೆ ಸಾರ್ವಜನಿಕ ಪ್ರಯಾಣಿಕರಿಗೆ ಹಲವಾರು ರೀತಿಯ ಸಾರಿಗೆ ಸೌಲಭ್ಯಗಳನ್ನು ನೀಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದ್ದು,   ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಉತೃಷ್ಟ ಮಟ್ಟದ ಮತ್ತು ಶೀಘ್ರದಲ್ಲಿಯೇ ತಲುಪುವಂತೆ ಕೆಲವೊಂದು ಹೈ-ಟೆಕ್ ಸೌಲಭ್ಯಗಳನ್ನು ಪ್ರಾರಂಭಿಸಿದೆ.
ಮೊಬೈಲ್ ದೂರವಾಣಿ ಮೂಲಕ ಸಂಸ್ಥೆಯ ವಾಹನಗಳಲ್ಲಿ ಮುಂಗಡ ಆಸನ ಕಾಯ್ದಿರಿಸಿಕೊಳ್ಳುವಿಕೆ ವಿಧಾನವನ್ನು ಅಳವಡಿಸಲಾಗಿದ್ದು, ಈ ವಿಧಾನದಲ್ಲಿ ಅಂತರ್ಜಾಲ ಸಂಪರ್ಕ ಹೊಂದಿದ ಮೊಬೈಲ್ ಮತ್ತು ಇ-ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಯಾವುದೇ ಸಾರ್ವಜನಿಕ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಕೆ.ಎಸ್.ಆರ್.ಟಿ.ಸಿ. ಎಂದು ಟೈಪ್ ಮಾಡಿ ೫೬೫೬೭ ಗೆ ಎಸ್.ಎಂ.ಎಸ್. ಮಾಡಿ, ನಂತರ ಯಾವ ವಿಧಾನ ಅನುಸರಿಸಬೇಕೆಂಬ ಬಗ್ಗೆ ನಿಗದಿತ ಮಾದರಿಯಲ್ಲಿ ಸಲಹೆ ನೀಡಲಾಗುತ್ತದೆ ಕೊನೆಯ ಹಂತದಲ್ಲಿ ಪಿಎನ್‌ಆರ್ ನಂ. ಎಸ್.ಎಂ.ಎಸ್. ನಲ್ಲಿ ಪಡೆದುಕೊಂಡು ನಿಗದಿತ ಬಸ್‌ನಲ್ಲಿ ಮುಂಗಡ ಆಸನವನ್ನು ಕಾಯ್ದಿರಿಸಿಕೊಳ್ಳಬಹುದು. ಪ್ರಯಾಣಿಸುವಾಗ ತಮ್ಮ ಮೊಬೈಲ್‌ಗೆ ಬಂದಿರುವ ಈ ಎಸ್.ಎಂ.ಎಸ್. ಕಿರು ಸಂದೇಶವನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದಾಗಿದೆ.
ಅಂತರ್ಜಾಲ ಮೂಲಕ ಸಂಸ್ಥೆಯ ವಾಹನಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯ ಜಾರಿಗೊಳಿಸಲಾಗಿದ್ದು, ಈ ವಿಧಾನದಲ್ಲಿ ಅಂತರ್ಜಾಲ ಮತ್ತು ಇ-ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಯಾವುದೇ ಸಾರ್ವಜನಿಕ ಪ್ರಯಾಣಿಕರು ತಮ್ಮ ಅಂತರ್ಜಾಲದಲ್ಲಿ www.ksrtc.in  ಎಂದು ಟೈಪ್ ಮಾಡಿ ಅಂತರ್ಜಾಲದ ಸಂಪರ್ಕ ಹೊಂದಿ, ಇ-ಟಿಕೆಟ್‌ನ ಬುಕಿಂಗ್‌ನಲ್ಲಿ ನೊಂದಣಿ ಮಾಡಿಕೊಂಡು ನಂತರ ಯಾವ ವಿಧಾನ ಅನುಸರಿಸಬೇಕೆಂಬ ಬಗ್ಗೆ ನಿಗದಿತ ಮಾದರಿಯಲ್ಲಿ ಮಾಹಿತಿಯನ್ನು ಸೇರಿಸುತ್ತಾ ಹೋಗಬೇಕು. ಕೊನೆಯ ಹಂತದಲ್ಲಿ ಪಿಎನ್‌ಆರ್ ನಂ. ಪಡೆದುಕೊಂಡು ಇ-ಟಿಕೆಟ್‌ನ ಮುದ್ರಿತ ಪ್ರತಿಯನ್ನು ಪಡೆದುಕೊಂಡು ನಿಗದಿತ ಬಸ್‌ನಲ್ಲಿ ಮುಂಗಡ ಆಸನವನ್ನು ಕಾಯ್ದಿರಿಸಿಕೊಂಡು ಪ್ರಯಾಣಿಸಬಹುದಾಗಿದೆ.
ಇ-ಟೆಂಡರ್ ಪ್ರೊಕ್ಯೂರಮೆಂಟ್ ಮೂಲಕ ಸಂಸ್ಥೆಯ ವಿವಿಧ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಕರಾರಿನಲ್ಲಿ ಪಡೆಯುವ ನಿಟ್ಟಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಈ ವಿಧಾನದಲ್ಲಿ ಸಂಸ್ಥೆಯ ಬಸ್ ನಿಲ್ದಾಣ ಮತ್ತು ಇತರೆ ನಿಗದಿತ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಪರವಾನಿಗೆ ಮೇಲೆ ಪಡೆಯಲು ಇ-ಟೆಂಡರ್ ವೇದಿಕೆ ಮೂಲಕ ಟೆಂಡರ್/ಹರಾಜ್ ಕರೆಯಲಾಗುತ್ತದೆ. ಈ ವಿಧಾನದಲ್ಲಿ ಭಾಗವಹಿಸಲು ಆಸಕ್ತರು ಡಿ.ಎಸ್.ಸಿ.(Digital Signature Certificate)  ಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಇದನ್ನು ಪಡೆಯಲು ಸಹಾಯವಾಣಿ ಸಂ: ೦೮೦-೨೫೫೦೧೨೧೦ ಅಥವಾ www.eproc.karnataka.gov.in ಗೆ ಸಂಪರ್ಕಿಸಿ ಪಡೆಯಬಹುದಾಗಿದೆ.  ಸಾರಿಗೆ ಸಂಸ್ಥೆಯಲ್ಲಿ ಹಲವಾರು ವಿಶಿಷ್ಟ ಸೌಲಭ್ಯ ಅಳವಡಿಸುವಿಕೆ ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಂಸ್ಥೆ ಮುಂದಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error