ದಾರಿ ಬಿಡಿ : ಬರುತ್ತಿದ್ದಾರೆ ಮೂರು ಬಿಟ್ಟವರು…

  “ಇದೊಂದು ಕಾಂಟ್ರಾವರ್ಸಿಯಲ್ ಮಟಿರಿಯಲ್ ಇರೋ ಕಾಮಿಡಿ ಸ್ಟೋರಿ. ಚಿತ್ರದುದ್ದಕ್ಕೂ ದೊಡ್ಡ ದೊಡ್ಡ ವಿಷಯಗಳನ್ನು ಹಾಸ್ಯದ ಮೂಲಕ ವಿವರಿಸುವ ಹೊಸ ಪ್ರಯತ್ನ ನಮ್ಮದು. ನಿತ್ಯವೂ ಪತ್ರಿಕೆ, ನ್ಯೂಸ್ ಚಾನೆಲ್‌ನಲ್ಲಿ ಬರುವ ಸೆನ್ಷೇಷನಲ್ ಸುದ್ದಿಗಳ ಹಿಂದೆ ಬಿದ್ದು ಸಿದ್ದಪಡಿಸಿದ ಕಥೆ. ಈ ಸಿನಿಮಾದಲ್ಲಿ ಕಥೆನೇ ನಿಜವಾದ ಹೀರೋ. ಕಳೆದ ತಿಂಗಳು ಶೀರ್ಷಿಕೆ ನೋಂದಾಯಿಸಿದ್ದೇವೆ. ೩ ಬಿಟ್ಟವರು, ಊರಿಗೆ ದೊಡ್ಡವರು ಸಿನಿಮಾದ ಹೆಸರು” ಎಂದು ಬೆವರುತ್ತಿದ್ದ ಮುಖವನ್ನು ಕರ್ಚಿಫಿನಿಂದ ಒರೆಸಿಕೊಳ್ಳುತ್ತಾ ಚಿತ್ರದ ನಾಯಕ, ನಿರ್ದೇಶಕ, ಸಂಭಾಷಣಾಕಾರ ಬಸವರಾಜ ಕೊಪ್ಪಳ ಹೇಳಿದರು,
            ಕೊಪ್ಪಳ ಮೀಡಿಯ ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲೇ ಯೋಗೀಶ್ ಮಾಸ್ಟರ್ ಅವರಿಂದ ಸಂಕ್ಷಿಪ್ತ ಪ್ರೋಮೋ ಬಿಡುಗಡೆ ಮಾಡಿಸುವ ಮೂಲಕ ಶೂಟಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಬಸವರಾಜ ಅವರು, ಮುಹೂರ್ತದ ಬಗ್ಗೆ ನನಗೆ ನಂಬಿಕೆ ಇಲ್ಲ, ನನ್ನ ಸಿನಿಮಾ ಕಥೆಯೂ ಕೂಡಾ ಇಂಥ ನಂಬಿಕೆಗಳ ಸುತ್ತವೇ ಇರುವುದರಿಂದ ಸಿನಿಮಾ ಚಾಲನೆಯ ಸಿದ್ಧ ಸೂತ್ರ ಮುರಿದು ಶೂಟಿಂಗ್ ಶುರು ಮಾಡುತ್ತೇವೆ ಎಂದರು.
         ಸಿನಿಮಾ ರಂಗಕ್ಕೆ ಬಂದು ಹತ್ತು ವರ್ಷಗಳಾಗುತ್ತಾ ಬಂತು. ಅಲ್ಲೊಂದು, ಇಲ್ಲೊಂದು ಸಣ್ಣ ಪುಟ್ಟ ಪಾತ್ರ ಮಾಡಿದ್ದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಸಾಧನೆಯನ್ನು ನಾನಿನ್ನೂ ಮಾಡಿಲ್ಲ. ಅವಕಾಶ ಕೊಡಿ ಎಂದು ಯಾರ ಬಳಿಯೂ ಹೋಗಲಾರೆ. ಹಾಗಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ  ನಾನೇ ಕಥೆ ಬರೆದೆ. ಕಥೆಯ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು. 
         ಇದು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಗರನ್ನು ಚಿಂತನೆಗೆ ಹಚ್ಚುವ ಚಿತ್ರ. ಒಬ್ಬ ಸಾಮಾನ್ಯ ಸ್ವಾಮಿ, ಟಿವಿಯಲ್ಲಿ ಬರುವ ಜ್ಯೋತಿಷಿಗಳ ಬಣ್ಣ ಎಂಥದ್ದು?, ಜನರ ಮೌಢ್ಯಗಳು ಎಂಥವು?. ಜಾಗತೀಕರಣದ ಪ್ರಭಾವ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವಗಳು, ವ್ಯಾಪಾರಿ ಕೇಂದ್ರಗಳಾಗುತ್ತಿರುವ ‘ಮಠ’ಗಳು,  ಸುದ್ದಿ ವಿಷಯದಲ್ಲಿ ಮಾಧ್ಯಮಗಳ ‘ಲೆಕ್ಕಾಚಾರ’ಗಳು, ಕೊನೆಗೆ ಜನರಲ್ಲಿ ಜಾಗೃತಿ ಮೂಡಿಸುವ ಬಗೆ ಹೀಗೆ ಹಲವು ಅಂಶಗಳು ನಮ್ಮ ಸಿನಿಮಾದಲ್ಲಿವೆ. ಒಟ್ಟಾರೆ ನಮ್ಮ ಸಿನಿಮಾವು  ಜ್ಯೋತಿಷಿಗಳ, ಮಠಾಧೀಶರ, ರಾಜಕಾರಣಿಗಳ ಸುತ್ತ ಸುತ್ತುತ್ತದೆ ಎಂದು ಕಣ್ಣರಳಿಸಿದರು.
            ಕಥೆ ಹೆಣೆಯಲು ೬-೭ ತಿಂಗಳು ಶ್ರಮಿಸಿದ್ದೇನೆ. ಸಮಗ್ರ ವಚನ ಸಾಹಿತ್ಯ, ನಿಡುಮಾಮಿಡಿ ಶ್ರೀಗಳ ಲೇಖನಗಳು, ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಪುಸ್ತಕಗಳು, ಗೆಲಿಲಿಯೋ, ಐನ್‌ಸ್ಟೀನ್, ಸಾಕ್ರಟಿಸ್ ಹೀಗೆ ೨೩ ತತ್ವಜ್ಞಾನಿಗಳ, ದಾರ್ಶನಿಕರ, ವೈಚಾರಿಕ ಲೇಖಕರ ಬರಹಗಳನ್ನು ಅಧ್ಯಯನ ಮಾಡಿ ವಿಭಿನ್ನ ಶೈಲಿಯಲ್ಲಿ ಕಥೆ ಹೆಣೆಯಲಾಗಿದ್ದು, ಉತ್ತರ ಕರ್ನಾಟಕದ ಕಲಾವಿದರೇ ನಟಿಸಿದ್ದಾರೆ. ಲೋಕೇಷನ್‌ಗಳು ಸಹ ಉತ್ತರ ಕರ್ನಾಟಕದ ಹಲವು ಸ್ಥಳಗಳೇ. ಚಿತ್ರದಲ್ಲೊಂದು ಐಟಂಸಾಂಗ್ ಸಹ ಇದ್ದು ದೆಹಲಿ ಮೂಲದ ಸೃಷ್ಟಿಯನ್ನು ಪರಿಚಯಿಸುತ್ತಿದ್ದೇವೆ. ಚಿತ್ರದ ೨ ಹಾಡುಗಳಿಗೆ ಮುನ್ನಾ ಸಂಗೀತ ಸಂಯೋಜಿಸಿದ್ದಾರೆ. 
            ಜಯಹೇ, ಪರಮಾತ್ಮ, ಚಿಂಗಾರಿ ಸಿನಿಮಾಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದು, ಇದೀಗ ಮೈನಾ ಚೇತನ್ ಅವರ ಒಡೆಯ ಸಿನಿಮಾದಲ್ಲೂ ಪೋಷಕ ಪಾತ್ರ ನಿರ್ವಹಿಸಿದ್ದೇನೆ. ನನ್ನದೇ ಆದ ಸಿನಿಮಾದ ಕೆಲಸ ಅರ್ಧದಷ್ಟು ಆಗಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ. ಈ ಸಿನಿಮಾವನ್ನು ನಮ್ಮ ಗುರುಗಳಾದ ಯೋಗರಾಜ್ ಭಟ್ ಅವರಿಗೆ ಅರ್ಪಿಸುತ್ತಿದ್ದೇನೆ. ದೊಡ್ಡ ಕಲಾವಿದರು ಚಿತ್ರದಲ್ಲಿಲ್ಲವಾದರೂ ಯಾವ ಹೈ ಬಜೆಟ್ ಸಿನಿಮಾಕ್ಕೂ ನಮ್ಮ ಸಿನಿಮಾ ಕಡಿಮೆ ಏನಿಲ್ಲ ಎಂದರು.
         ಸುದ್ದಿಗೋಷ್ಠಿಯಲ್ಲಿ ಸೃಷ್ಟಿ, ಯೋಗೀಶ್ ಮಾಸ್ಟರ್ ಇದ್ದರು. 
Please follow and like us:
error