fbpx

ಕೊಪ್ಪಳ ಲೋಕಸಭೆ ಕ್ಷೇತ್ರ : ಶೇ. ೬೪ ಮತದಾನ

ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಗುರುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ. ೬೪ ರಷ್ಟು ಮತದಾನವಾಗಿದ್ದು, ಹೆಚ್ಚಿನ ವಿವರಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಿಂದ ನಿರೀಕ್ಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

  ಬೇಸಿಗೆಯ ಕಾಲ ಇರುವುದರಿಂದ, ಮತದಾರರು ತಮ್ಮ ಮತ ಚಲಾವಣೆಗಾಗಿ ಇಂದು ಬೆಳಿಗ್ಗೆ ೭ ಗಂಟೆಯ ಹೊತ್ತಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕ್ಷೇತ್ರಾದ್ಯಂತ ಸಾಮಾನ್ಯವಾಗಿತ್ತು.  ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ, ಮತಗಟ್ಟೆ ಸ್ಥಾಪನೆ ಹಾಗೂ ವಾಹನದ ಸೌಲಭ್ಯಕ್ಕಾಗಿ ಮತದಾನದ ಬಹಿಷ್ಕಾರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಸ್ಪಂದಿಸಿದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಕೂಡಲೆ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು, ನಂತರ ವಾಹನದ ವ್ಯವಸ್ಥೆಗೊಳಿಸಿದ್ದರಿಂದ, ಪರಿಸ್ಥಿತಿ ತಿಳಿಗೊಂಡು, ಮತದಾರರು, ಮತದಾನಕ್ಕೆ ಮುಂದಾದ ಘಟನೆ ಜರುಗಿತು.  ಕೊಪ್ಪಳ ನಗರದ ಗಣೇಶ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೊಡ್ಡಿ, ಮತದಾನ ಮಾಡಲು ನಿರಾಕರಿಸಿದ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೆ, ಎಚ್ಚೆತ್ತ ಅಧಿಕಾರಿಗಳು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ, ಮತದಾನ ಪ್ರಕ್ರಿಯೆ ಸಹಜವಾಗಿ ಪ್ರಾರಂಭಗೊಂಡಿತು.  ಉಳಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.
  ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭವಾದ ಮತದಾನ ೯ ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ. ೬ ರಷ್ಟು ಮಾತ್ರ ಮತದಾನವಾಗಿತ್ತು.  ನಂತರ ಮತದಾನದಲ್ಲಿ ಚೇತರಿಕೆ ಕಂಡುಬಂದು, ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಶೇ. ೧೭ ರಷ್ಟು ಮತದಾನವಾಯಿತು.  ಮಧ್ಯಾಹ್ನ ೧ ಗಂಟೆಯವರೆಗೆ ಶೇ. ೩೫ ರಷ್ಟು ಮತದಾನ ದಾಖಲಾಯಿತು.  ಮಧ್ಯಾಹ್ನ ೩ ಗಂಟೆಯ ವೇಳೆಗೆ ಕ್ಷೇತ್ರದಲ್ಲಿ ದಾಖಲಾದ ಮತದಾನದ ಪ್ರಮಾಣ ಶೇ. ೪೧.  ಸಂಜೆಯ ವೇಳೆಗೆ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಯತ್ತ ತೆರಳಿದ್ದರಿಂದ, ಸಂಜೆ ಮತಗಟ್ಟೆಗಳ ಬಳಿ ಮತದಾರರ ಸರದಿ ಸಾಲು ಉದ್ದವಾಗಿದ್ದು ಕಂಡುಬಂದಿತು.  ಸಂಜೆ ೫ ಗಂಟೆಯವರೆಗೆ ಕ್ಷೇತ್ರದಲ್ಲಿ ಒಟ್ಟು ಶೇ. ೫೭ ರಷ್ಟು ಮತದಾನವಾಗಿತ್ತು. ಮತದಾನಕ್ಕೆ ಸಂಜೆ ೬ ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿತ್ತು.  ಅಂತಿಮವಾಗಿ ಶೇ. ೬೪ ರಷ್ಟು ಮತದಾನವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.  ಕೊಪ್ಪಳ ಲೋಕಸಭಾ ಕ್ಷೇತ್ರ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಗಂಗಾವತಿ.  ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
Please follow and like us:
error

Leave a Reply

error: Content is protected !!