ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು

– ಲಲಿತಾರಾಣಿ ಶ್ರೀರಂಗದೇವರಾಯಲು
  ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ಮಹಿಳೆಯರಲ್ಲಿ ಕರೆ ನೀಡಿದರು.
  ಕರ್ನಾಟಕ ರಾಜ್ಯ ಮಹಿಳಾ ಅಬಿವೃದ್ಧಿ ನಿಗಮದ ವತಿಯಿಂದ ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸ್ವ-ಸಹಾಯ ಗುಂಪುಗಳು, ಮಹಿಳಾ ಗುಂಪುಗಳು ಉತ್ಪಾದಿಸುವ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿರುತ್ತವೆ ಅಲ್ಲದೆ ಸ್ವದೇಶೀಯತೆಯನ್ನು ಬಿಂಬಿಸುತ್ತವೆ.  ಈ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕೈಗೊಳ್ಳಬೇಕಾಗಿದೆ ಆದರೂ, ಇಂತಹ ಜಾತ್ರೆ, ಉತ್ಸವಗಳಲ್ಲಿ ಸ್ವ-ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.  ಸಾರ್ವಜನಿಕರೂ ಸಹ ಈ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳಾ ಗುಂಪುಗಳಿಗೆ ಪ್ರೋತ್ಸಾಹ ನೀಡಬೇಕು.  ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿ ದೊರಕಿಸಲು ಸರ್ಕಾರದ ಮಟ್ಟದಲ್ಲಿ ಯತ್ನಿಸಲಾಗುವುದು.  ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯೋಗಿನಿ ಮುಂತಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು, ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ಮನವಿ ಮಾಡಿದರು.
  ಕೊಪ್ಪಳ ಭೂ-ನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ವಸ್ತುಪ್ರದರ್ಶನದಲ್ಲಿ ಇರಿಸಲಾಗಿರುವ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿದ್ದು, ಮುಂದೆಯೂ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವ-ಸಹಾಯ ಗುಂಪುಗಳಿಗೆ ಸಹಕಾರ ನೀಡಬೇಕು ಎಂದು ನುಡಿದರು.
  ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಬಿ.ಇ. ಹೇಮರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಸುಧಾ ಮಂಜುನಾಥ, ನಿಗಮದ ಯೋಜನಾ ಅನುಷ್ಠಾನಾಧಿಕಾರಿ ದಾದೇಸಾಹೇಬ ಹಿರೇಮನಿ ಮುಂತಾದವರು ಭಾಗವಹಿಸಿದ್ದರು.
Please follow and like us:
error