೨೮ ಫೆಬ್ರವರಿ ೨೦೧೨ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಂದ್- ಎಸ್ ಎಫ್ ಐ

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಶಿಕ್ಷಣ ಕ್ಷೇತ್ರ ದಿವಾಳಿಯ ಅಂಚಿನಲ್ಲಿದೆ. ಒಂದೆಡೆ ಈ ಎರಡೂ ಸರ್ಕಾರಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿವೆ. ಇನ್ನೊಂದೆಡೆ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಿಸಿ ಹಣವುಳ್ಳವರಿಗೆ ಮಾತ್ರ ಶಿಕ್ಷಣ ಎಂಬ ನೀತಿಗಳನ್ನು ಜಾರಿಗೊಳಿಸಲಾಗುತ್ತಿವೆ. 
ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಖಾಸಗಿ – ವಿದೇಶಿ ವಿಶ್ವವಿದ್ಯಾಲಯ ಗಳನ್ನು ಸ್ಥಾಪಿಸಲಾಗುತ್ತಿದೆ. ವಿದೇಶಿ ವಿ.ವಿ ಗಳನ್ನು ಪ್ರಾರಂಭಿಸಿ ದೇಶದ ಸ್ವಾತಂತ್ರ್ಯ, ಸಾರ್ವಭೌಮತೆ ಹಾಗೂ ಬೌದ್ಧಿಕ ಸ್ವಾವಾಲಂಬನೆಯನ್ನು ಒತ್ತೆ ಇಡಲು ತುದಿಗಾಲಲ್ಲಿ ನಿಂತಿದೆ. ೬  ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಲಾಗಿದ್ದು, ದೇಶಾದ್ಯಂತ ಅದನ್ನು ಜಾರಿಗೊಳಿಸಲು ಅಗತ್ಯ ಹಣಕಾಸನ್ನು ಒದಗಿಸುತ್ತಿಲ್ಲ. ವೃತ್ತಿಶಿಕ್ಷಣದ ಗಂಭೀರ ಬಿಕ್ಕಟ್ಟಿನ ಪರಿಹಾರಕ್ಕೆ ಮುಂದಾಗುವ ಬದಲು ಸರ್ಕಾರಿ-ಖಾಸಗೀ ಸಹಭಾಗಿತ್ವದಲ್ಲಿ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಮುಂದಿಡುತ್ತಾ ಶಿಕ್ಷಣ ನೀಡುವ ತನ್ನ ಮೂಲ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದೆ. 
ರಾಜ್ಯದ ಶೈಕ್ಷಣಿಕ ಕ್ಷೇತ್ರ ಸಮಸ್ಯೆಗಳ ಗೂಡಾಗಿದೆ. ೩೮ ಸಾವಿರ ಶಿಕ್ಷಕರ ಹುದ್ಧೆಗಳು ಮತ್ತು ಶೇ ೨೭ ರಷ್ಟು ಕಾಲೇಜು ಹಾಗೂ ವಿ.ವಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿವೆ. ಶೇ ೬೮ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ, ೧.೨೦ ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಕ-ಉಪನ್ಯಾಸಕರು ಕೆಲಸದ ಹೊರೆಯಿಂದ ನರಳುತ್ತಿದ್ದಾರೆ. ಬಹುತೇಕ ಖಾಸಗೀ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರವಾಗಿ ಡೊನೇಷನ್ ವಸೂಲಿಯಲ್ಲಿ ತೊಡಗಿವೆ. ಖಾಸಗೀ ಶಿಕ್ಷಣ ಸಂಸ್ಥೆಗಳೇ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಎಸ್ಸಿ/ಎಸ್ಟಿ, ಓಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಹಾಯಧನ ಸಮರ್ಪಕವಾಗಿ ಬಿಡುಗಡೆಯಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. 
ರಾಜ್ಯ ಬಿ.ಜೆ.ಪಿ ಸರ್ಕಾರ ೫ ಮತ್ತು ೮ನೇ ತರಗತಿಯ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಜಾತಿ ಪದ್ದತಿಯನ್ನು ಪುಷ್ಠಿಗೊಳಿಸುವ, ವೈದಿಕ ವ್ಯವಸ್ಥೆಯನ್ನು ವೈಭವೀಕರಿಸುವ, ಧರ್ಮಾಂಧತೆ, ದ್ವೇಷವನ್ನು ಹುಟ್ಟಿಸುವ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುತ್ತಿದೆ. ಶಾಲಾ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಲೆಕ್ಕಿಸದೇ, ಹೊರೆಯಾಗಿರುವ, ಸುಳ್ಳು ಇತಿಹಾಸವಿರುವ ಪಠ್ಯಗಳನ್ನು ರಚಿಸಲಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯಗಳ ಬದಲಾಗಿ ಸಂಘಪರಿವಾರದ ಅಭಿಪ್ರಾಯಗಳನ್ನು ತುಂಬುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಲಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕ, ಉದ್ಯೋಗಾಧಾರಿತ ಶಿಕ್ಷಣ ನೀಡಲು ಮುಂದಾಗುತ್ತಿಲ್ಲ. ಶಾಲಾ-ಕಾಲೇಜು-ವಿ.ವಿ-ಹಾಸ್ಟೆಲ್‌ಗಳಿಗೆ ಮೂಲ ಸೌಲಭ್ಯ, ಉಚಿತ ಬಸ್ ಪಾಸ್ ನೀಡಿ, ಶಿಕ್ಷಕ-ಉಪನ್ಯಾಸಕರನ್ನು ನೇಮಿಸಿ ಅವರಿಗೆ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುತ್ತಿರುವ ಸರ್ಕಾರ ಬದಲಾಗಿ ಭಗವದ್ಗೀತೆ ಅಭಿಯಾನಕ್ಕೆ ೪೫ ಕೋಟಿ, ಆರ್,ಎಸ್.ಎಸ್ ನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಪುಸ್ತಕಗಳ ಖರೀದಿಗೆ ೭೫ ಕೋಟಿ, ಗಂಗಾ ಜಲ, ಲಾಡು ವಿತರಣೆಗೆ ನೂರಾರು ಕೋಟಿ ಹಣ ನೀಡಿದೆ. ಅಲ್ಲದೇ ಮತಬ್ಯಾಂಕ್ ಮಾಡಿಕೊಳ್ಳಲು ಮಠಗಳಿಗೆ ೩೯೬ ಕೋಟಿ ಜನತೆಯ ತೆರಿಗೆ ಹಣ ನೀಡಲಾಗಿದೆ. ಹೀಗೆ ಅನಗತ್ಯವಾಗಿ ಮಠಮಾನ್ಯಗಳಿಗೆ ನೂರಾರು ಕೋಟಿ ಹಣ ನೀಡುತ್ತಿರುವುದಲ್ಲದೇ ಭೂಹಗರಣ, ಗಣಿಹಗರಣದ ಹೆಸರಿನಲ್ಲಿ ಜನತೆಯ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.  
ರಾಜ್ಯದಲ್ಲಿ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಸಿಗುತ್ತಿಲ್ಲ. ಹಾಸ್ಟೆಲ್‌ಗಳಲ್ಲಿ  ಕನಿಷ್ಠ ಮೂಲ ಸೌಕರ‍್ಯ, ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಜೈಲಿನಲ್ಲಿರುವ ಖೈದಿಗಳ ಊಟಕ್ಕೆ ಪ್ರತಿದಿನ ೮೫ ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೇವಲ ೨೮ ರೂಪಾಯಿ
ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೇವಲ ೨೮ ರೂಪಾಯಿ ಮಾತ್ರ  ಖರ್ಚು ಮಾಡುತ್ತಿರುವುದು ಈ ಸರ್ಕಾರ ದಲಿತ-ಹಿಂದುಳಿದ-ಅಲ್ಪಸಂಖ್ಯಾತರ ವಿರೋಧಿ ಎಂಬುದು ಸಾಬೀತಾಗುತ್ತಿದೆ.
ವೈದ್ಯಕೀಯ, ಇಂಜಿನಿಯರಿಂಗ್, ಡಿಪ್ಲೊಮ, ಐ.ಟಿ.ಐ ಇನ್ನಿತರ ವಿದ್ಯಾರ್ಥಿಗಳ ಸಮಸ್ಯೆಗಳು ಗಂಭೀರವಾಗಿವೆ. ಅಲ್ಲದೇ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಠಾಚಾರ, ಸಂಘ ಪರಿವಾರದ ಹಸ್ತಕ್ಷೇಪ ಹೆಚ್ಚುತ್ತಿದೆ.
 ಪಕ್ಕದ ಕೇರಳ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕೆ ೨೮% ಹಣ ಮೀಸಲಿಟ್ಟಿರುವಾಗ ನಮ್ಮ ರಾಜ್ಯ ಸರ್ಕಾರ ಕೇವಲ ಶೇ ೧೪ ರಷ್ಟು ಮಾತ್ರ ಮೀಸಲಿಟ್ಟಿರುವುದು ಬಿ.ಜೆ.ಪಿ ಸರ್ಕಾರದ ಶಿಕ್ಷಣ ಪರ ಕಾಳಜಿ ಎಷ್ಟಿದೆಯೆಂಬು ತಿಳಿಯುತ್ತದೆ.
ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ ವಿರೋಧಿಸಿ ಅಖಿಲ ಭಾರತ ಮುಷ್ಕರ ನಡೆಸುತ್ತಿವೆ. ಈ ಸಂದರ್ಭದಲ್ಲಿ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಎಸ್‌ಎಫ್‌ಐ ೨೮ ಫೆಬ್ರವರಿ ೨೦೧೨ ರಂದು ರಾಜ್ಯಾದ್ಯಂತ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯ ಬಂದ್‌ಗೆ ಕರೆ ನೀಡಿದ್ದು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ, ಶಾಲಾ-ಕಾಲೇಜು-ವಿ.ವಿಗಳನ್ನು ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸಿ ದೇಶ ಕಟ್ಟುವ ಈ ಚಾರಿತ್ರಿಕ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಸ್ ಎಫ್ ಐ ಜಿಲ್ಲಾಧ್ಯಕ್ಷ  ಗುರುರಾಜ್ ದೇಸಾಯಿ, ಸೇರಿದಂತೆ ಎಸ್ಎಫ್ಐ ಸಂಘಟನೆಯ  ಬಾಳಪ್ಪ ಹುಲಿಹೈದರ್, ಸುಬಾನ್ ಸೈಯ್ಯದ್, ಮಾರುತಿ ಮ್ಯಾಗಳಮನಿ,  ಯಮನೂರ್ ಹೊಸಪೇಟೆ, ಹನಮಂತ ಕಲ್ಲಭಾವಿ ವಿನಂತಿಸಿಕೊಂಡಿದ್ದಾರೆ
Please follow and like us:
error