You are here
Home > Koppal News > ರಾಮ್‌ಲೀಲಾ ಮೈದಾನದೊಳಗೆ ರಾವಣರು ಪ್ರವೇಶಿಸದಿರಲಿ

ರಾಮ್‌ಲೀಲಾ ಮೈದಾನದೊಳಗೆ ರಾವಣರು ಪ್ರವೇಶಿಸದಿರಲಿ


ಇಲ್ಲಿ ಯಾರೂ ಗೆಲ್ಲಲಿಲ್ಲ, ಸೋಲಲೂ ಇಲ್ಲ. ಸರಕಾರ ತನ್ನ ತಪ್ಪನ್ನು ಕೊನೆಯ ಕ್ಷಣದಲ್ಲಿ ತಿದ್ದಿಕೊಂಡು ಉಪವಾಸ ಸತ್ಯಾಗ್ರಹ ನಡೆಸಲು ಅಣ್ಣಾ ಹಝಾರೆಯವರಿಗೆ ಅನುಮತಿ ನೀಡಿದೆ. ಹಝಾರೆಯವರ ಪ್ರಕರಣವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ, ಅವರನ್ನು ಬಂಧಿಸಿ, ಅವರ ಉಪವಾಸ ಸತ್ಯಾಗ್ರಹದ ಬೆಂಕಿಗೆ ಸರಕಾರ ತುಪ್ಪ ಸುರಿದಿರುವುದು ಸುಳ್ಳಲ್ಲ. ಹಝಾರೆಯವರ ಹೋರಾಟಕ್ಕೆ ಇನ್ನಷ್ಟು ದೊಡ್ಡ ವೇದಿಕೆಯನ್ನು ಸರಕಾರವೇ ಕಲ್ಪಿಸಿಕೊಟ್ಟಿತು. ಆದರೆ, ಹಝಾರೆಯವರನ್ನು ಬಂಧಿಸದೆ ಸರಕಾರದ ಬಳಿ ಬೇರೆ ಮಾರ್ಗವೂ ಇದ್ದಿರಲಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವಾಗ, ಕೆಲವು ಮಾರ್ಗದರ್ಶನಗಳನ್ನು ಯಾರಾದರೂ ಪಾಲಿಸಲೇ ಬೇಕಾಗುತ್ತದೆ. ಶರತ್ತುಗಳಿಗೆ ಬದ್ಧರಾಗಿರಬೇಕಾಗುತ್ತದೆ. ಯಾವಾಗ ಹಝಾರೆ ಬಳಗ ಇದನ್ನು ತಿರಸ್ಕರಿಸಿತೋ ಅವರನ್ನು ಬಂಧಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು.
ಹಝಾರೆಯವರಿಗೆ ಸತ್ಯಾಗ್ರಹ ನಡೆಸಲು ಅನುಮತಿ ಸಿಕ್ಕಿತು ಎನ್ನುವುದನ್ನು ಹಝಾರೆಯವರ ಗೆಲುವು ಎಂದು ಭಾವಿಸಲಾಗದು. ನಿರಶನ, ಪ್ರಜಾಸತ್ತಾತ್ಮಕ ಪ್ರತಿಭಟನೆ ಈ ದೇಶದ ಜನರ ಹಕ್ಕು. ಆ ಹಕ್ಕು ಹಝಾರೆಯವರಿಗೂ ದೊರಕಿದೆ. ಇದರರ್ಥ ಜನಲೋಕಪಾಲ ಅನುಷ್ಠಾನಗೊಂಡಿತು ಎಂದು ಅಲ್ಲವೇ ಅಲ್ಲ. ಅವರು ಆಮರಣಂತ ಉಪವಾಸ ಘೋಷಿಸಿದರೂ ಜನಲೋಕಪಾಲ ಜಾರಿಯಾಗುವುದಿಲ್ಲ. ಅದು ಜಾರಿಯಾಗುವುದು ಸರಕಾರದ ಕೈಯಲ್ಲಿಲ್ಲ. ಬದಲಿಗೆ ಸಂಸತ್ತಿನ ಕೈಯಲ್ಲಿದೆ. ಇಂದು ಆಡಳಿತ ಪಕ್ಷದಲ್ಲಿರುವಷ್ಟೇ ಭ್ರಷ್ಟರು ವಿರೋಧ ಪಕ್ಷದಲ್ಲೂ ಇದ್ದಾರೆ.
ವಿರೋಧ ಪಕ್ಷದಲ್ಲಿದ್ದವರಿಗೆ ಹಝಾರೆಯವರ ಪ್ರತಿಭಟನೆಯಷ್ಟೇ ಬೇಕು. ಆದರೆ ಜನಲೋಕಪಾಲ ಬೇಕಾಗಿಲ್ಲ. ಅದು ಪೂರ್ಣ ರೂಪದಲ್ಲಿ ಜಾರಿಗೆ ಬರುವುದು ವಿರೋಧ ಪಕ್ಷಗಳಿಗೂ ಇಷ್ಟವಿಲ್ಲ. ಆದುದರಿಂದ ಹಝಾರೆ ಎನ್ನುವ ಎಮ್ಮೆಯಿಂದ ಎಷ್ಟು ಹಾಲು ಕರೆಯಲು ಸಾಧ್ಯವೋ ಅಷ್ಟನ್ನು ಕರೆದು ಅದನ್ನು ಕಟುಕನ ಕೈಗೆ ಒಪ್ಪಿಸುವ ಯೋಜನೆಯನ್ನು ಹಾಕಿಕೊಂಡಿವೆ ವಿರೋಧ ಪಕ್ಷಗಳು. ಆದುದರಿಂದ ಅಣ್ಣಾ ಬಳಗ ಯಾವ ಕಾರಣಕ್ಕೂ ಭಾವೋದ್ವೇಗಕ್ಕೆ ಒಳಗಾಗದೆ, ಭಾವನೆಗಳಿಗೆ ಬಲಿಯಾಗದೆ ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ. ಇಲ್ಲವಾದರೆ ಜನಲೋಕಪಾಲದ ಅನುಷ್ಠಾನ ಬದಿಗಿರಲಿ, ಹಝಾರೆಯವರಂತಹ ಹಿರಿಯ ಜೀವಕ್ಕೆ ಧಕ್ಕೆ ಮಾಡುವಂತಹ ದ್ರೋಹಿಗಳು ಇಲ್ಲಿದ್ದಾರೆ. ಅದು ಈ ದೇಶದ ಮೇಲೆ ಮಾಡುವ ಪರಿಣಾಮ ಸಣ್ಣದಲ್ಲ.
ಹಝಾರೆಯವರಿಗೆ ಇಷ್ಟವಿರಲಿ, ಇಲ್ಲದೇ ಇರಲಿ ರಾಮ್‌ಲೀಲಾ ಮೈದಾನದಲ್ಲಿ ಮುಂದಿನ 14 ದಿನಗಳ ಕಾಲ ಜನರಂತೂ ಸೇರುತ್ತಾರೆ. ಸದ್ಯಕ್ಕೆ ನಮ್ಮ ಜನರಿಗೆ ಒಬ್ಬ ಗಾಂಧಿ ಬೇಕೇ ಬೇಕಾಗಿದ್ದಾನೆ. ಹಝಾರೆ ಗಾಂಧಿ ಹೌದೋ ಅಲ್ಲವೋ, ಆದರೆ ಅವರನ್ನು ಗಾಂಧಿಯನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಒಂದು ಸಮೂಹ ಎದ್ದು ನಿಂತಿದೆ. ತಮ್ಮ ಆಸೆಯನ್ನು ತೀರಿಸಿಕೊಳ್ಳಲು ಯಾವ ಬೆಲೆ ತೆತ್ತಾದರೂ ಹಝಾರೆಯವರನ್ನು ಗಾಂಧಿಯನ್ನಾಗಿಸಲಿದ್ದಾರೆ. ಆದರೆ ಅವರ ಆಸೆಗಾಗಿ ಹಝಾರೆಯವರ ಆರೋಗ್ಯಕ್ಕೆ ಹಾನಿಯಾಗಬಾರದು.
ವಿರೋಧ ಪಕ್ಷಗಳು, ಆರೆಸ್ಸೆಸ್‌ನಂತಹ ಸಂಘಟನೆಗಳು, ರಾಮ್‌ದೇವ್‌ರಂತಹ ಕಳ್ಳ ಬಾಬಾಗಳಿಂದ ಅಣ್ಣಾರಂತಹ ಹಿರಿಯ ಜೀವಕ್ಕೆ ತೊಂದರೆಯಾಗಬಾರದು. ಹಾಗೆ ತೊಂದರೆಯಾದರೆ ಅದರ ಫಲವನ್ನು ಅನುಭವಿಸಬೇಕಾದುದು ಈ ದೇಶ. ಇಂದು ಆಡಳಿತ ಪಕ್ಷವನ್ನು ಉರುಳಿಸಲು ಎಂತಹ ಹೀನ ಕೃತ್ಯಕ್ಕೂ ಇಳಿಯಲು ಸಿದ್ಧವಿರುವವರು ಮುಂದಿನ ಧರಣಿಯನ್ನು ದುರ್ಬಳಕೆ ಮಾಡಿಕೊಂಡರೆ ಅದರಲ್ಲಿ ಅಚ್ಚರಿಯೇನಿಲ್ಲ.
ಇದೇ ಸಂದರ್ಭದಲ್ಲಿ ಇನ್ನೊಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಪಟ ಬಾಬಾ ರಾಮ್‌ದೇವ್ ಈ ಹಿಂದೆ ‘‘ಶೀಘ್ರದಲ್ಲೇ ರಾಮ್‌ಲೀಲಾವನ್ನು ರಾವಣ ಲೀಲಾ ಮಾಡುತ್ತೇನೆ’’ ಎಂಬ ಎಚ್ಚರಿಕೆ ನೀಡಿದ್ದರು. ಶಸ್ತ್ರಾಸ್ತ್ರ ತರಬೇತಿಯನ್ನು ಕಾರ್ಯಕರ್ತರಿಗೆ ನೀಡಿ ಅವರನ್ನು ಪೊಲೀಸರ ವಿರುದ್ಧ ಬಳಸುತ್ತೇನೆ ಎಂದೂ ಈ ರಾಮ್‌ದೇವ್ ಹೇಳಿಕೆ ನೀಡಿದ್ದರು. ಇದೀಗ ಹಝಾರೆಯವರ ಪ್ರತಿಭಟನೆಯಲ್ಲಿ ರಾಮ್‌ದೇವ್ ಮತ್ತೆ ತನ್ನ ಮೂಗನ್ನು ತೂರಿಸಿದ್ದಾರೆ. ಅವರ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಒಳಗೊಳಗೆ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ರಾಮ್‌ಲೀಲಾದಲ್ಲಿ ತನಗಾದ ಅವಮಾನವನ್ನು ಹಝಾರೆಯವರ ಪ್ರತಿಭಟನೆಯ ಸಂದರ್ಭದಲ್ಲಿ ರಾಮ್‌ದೇವ್ ತೀರಿಸದಿರಲಾರರು ಎನ್ನಲಾಗುವುದಿಲ್ಲ. ಇದೇ ಸಂದರ್ಭದಲ್ಲಿ ಆರೆಸ್ಸೆಸ್‌ನ ಕಾರ್ಯಕರ್ತರೂ ಇದರೊಳಗೆ ನುಸುಳಿಕೊಂಡಿದ್ದಾರೆ. ದೇಶದ ಉಗ್ರ ಚಟುವಟಿಕೆಗಳಲ್ಲಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆರೆಸ್ಸೆಸ್‌ನ ಪಾತ್ರವೇನು ಎನ್ನುವುದು ಎಲ್ಲರಿಗೂ ಗೊತ್ತಿರುವುದು. ಪ್ರಜಾಸತ್ತೆಯ ಮೇಲೆ ಮತ್ತು ಸಂವಿಧಾನದ ಮೇಲೆ ಎಳ್ಳಷ್ಟು ನಂಬಿಕೆಯಿಲ್ಲದ ಈ ಗುಂಪು ಹಝಾರೆಯವರ ಪ್ರತಿಭಟನೆಯನ್ನು ತನ್ನ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ಎಲ್ಲ ಸಾಧ್ಯತೆಯಿದೆ. 20 ಸಾವಿರಕ್ಕೂ ಅಧಿಕ ಜನ ಸೇರಿದಲ್ಲಿ ಗಲಭೆ, ದೊಂಬಿ ಎಬ್ಬಿಸುವುದು ಇವರಿಗೆ ಕಷ್ಟಸಾಧ್ಯವೇನಲ್ಲ. ಇದನ್ನೆಲ್ಲ ತಡೆಯುವ ಶಕ್ತಿ ಹಝಾರೆ ಬಳಗಕ್ಕಿದೆಯೇ? ರಾಮ್‌ಲೀಲಾ ಮೈದಾನದೊಳಗೆ ಮಾರುವೇಶದ ರಾವಣರ ಪ್ರವೇಶವನ್ನು ತಡೆಯುವಷ್ಟು ಸಾಮರ್ಥ್ಯ ಇವರಿಗಿದೆಯೇ?
ಒಂದು ಸದುದ್ದೇಶದಿಂದ ಹಝಾರೆ ನೇತೃತ್ವದ ಪ್ರತಿಭಟನೆ ಆರಂಭವಾಗಿದೆ. ಅದರಲ್ಲಿ ಎಷ್ಟು ನ್ಯಾಯವಿದೆ ಎನ್ನುವುದು ನಂತರದ ಪ್ರಶ್ನೆ. ಆದರೆ ದೇಶಾದ್ಯಂತ ಭ್ರಷ್ಟಾಚಾರದ ಕುರಿತಂತೆ ಒಂದು ಜಾಗೃತಿ ಹುಟ್ಟಿಕೊಂಡಿರುವುದು ಸುಳ್ಳಲ್ಲ. ಆದರೆ ಇದರ ಅಂತ್ಯ ಯಾವ ಕಾರಣಕ್ಕೂ ದುರಂತವಾಗಬಾರದು. ಅಥವಾ ಒಂದು ಸರಕಾರವನ್ನು ಬೀಳಿಸುವ ವಿರೋಧಪಕ್ಷದ ಹುನ್ನಾರವಷ್ಟೇ ಈಡೇರಿ ಪ್ರತಿಭಟನೆ ಮುಗಿದು ಹೋಗಬಾರದು. ಜನಲೋಕಪಾಲ ಸಂಪೂರ್ಣವಾಗಿ ಜಾರಿಗೆ ಬರದಿದ್ದರೂ, ಜನರು ದಂಗೆ ಎದ್ದರೆ ಅದರ ಪರಿಣಾಮವೇನಾಗಬಹುದು ಎನ್ನುವ ಎಚ್ಚರಿಕೆ ಈ ಹೋರಾಟದ ಮೂಲಕ ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಸಿಗುವಂತಾಗಬೇಕು
–ವಾರ್ತಾಭಾರತಿ ಸಂಪಾದಕೀಯ

Leave a Reply

Top