fbpx

ಅನಿಷ್ಠ ಪದ್ಧತಿಗಳ ವಿರುದ್ಧ ಪ್ರತಿ ವರ್ಷ ಜಾಗೃತಿ ಕಾರ್ಯಕ್ರಮ- ಗವಿಸಿದ್ದೇಶ್ವರ ಸ್ವಾಮೀಜಿ.

ಕೊಪ್ಪಳ, ಜ.೨೩ (ಕ ವಾ) ಸಮಾಜದಲ್ಲಿ ಬೇರೂರಿರುವ ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಪ್ರತಿ ವರ್ಷ ಗವಿಮಠದ ವತಿಯಿಂದ ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಹೇಳಿದರು.
     ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ವತಿಯಿಂದ ಜಿಲ್ಲಾಡಳಿತ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ವಿವಿಧ ಇಲಾಖೆಗಳು ಹಾಗೂ ಹಲವು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶನಿವಾರದಂದು ಕೊಪ್ಪಳ ನಗರದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
     ಬಾಲ್ಯ ವಿವಾಹ ಪದ್ಧತಿಯಂತಹ ಅನಿಷ್ಠ ಪದ್ಧತಿ ವಿರುದ್ಧ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜಾಗೃತಿ ನಡಿಗೆ ಜರುಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.  ಈ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ದೊರೆತಿರುವುದು ಸಂತಸ ತಂದಿದೆ.  ಎಲ್ಲರಿಂದಲೂ ದೊರೆತ ಬೆಂಬಲದಿಂದ ತಾವು ಪ್ರೇರೇಪಿತರಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಗವಿಸಿದ್ದೇಶ್ವರ ಜಾತ್ರಾ ಸಂದರ್ಭದಲ್ಲಿ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಬೃಹತ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.  ದೇಶದಲ್ಲಿನ ಎಲ್ಲ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಲು ಕೊಪ್ಪಳ ಜಿಲ್ಲೆಯೇ ವೇದಿಕೆಯಾಗಲಿ.  ಬಾಲ್ಯ ವಿವಾಹವು ಸಮಾಜದಲ್ಲಿ ಬೇರೂರಿರುವ ಅತ್ಯಂತ ಕೆಟ್ಟ ಪದ್ಧತಿಯಾಗಿದ್ದು, ಈಗಾಗಲೆ ಇದನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನು ರೂಪಿಸಲಾಗಿದೆ.  ಬಾಲ್ಯ ವಿವಾಹದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅವರ ಬೆಳವಣಿಗೆ ಹಾಗೂ ಮನಸ್ಸಿನ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಈ ಅನಿಷ್ಠ ಪದ್ದತಿಯ ನಿರ್ಮೂಲನೆಗಾಗಿಯೇ ಇಂದು ಜಾಗೃತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಇದಕ್ಕೆ ದೊರೆತಿರುವ ಬೆಂಬಲ ಹಾಗೂ ಸ್ಪಂದನೆಯನ್ನು ಗಮನಿಸಿದ್ದು, ಇನ್ನು ಮುಂದೆ ಪ್ರತಿ ವರ್ಷ ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.  ಬಾಲ್ಯ ವಿವಾಹವನ್ನು ವಿರೋಧಿಸಿ, ಇಂದು ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಕೊಪ್ಪಳ ಜಿಲ್ಲೆಯ ರುಕ್ಮಿಣಿ ರಾಥೋಡ್ ವಿದ್ಯಾರ್ಥಿನಿಯನ್ನು ಮಾದರಿಯಾಗಿಟ್ಟುಕೊಂಡು, ಬಾಲ್ಯ ವಿವಾಹವನ್ನು ಎಲ್ಲರೂ ವಿರೋಧಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು.  ಅಷ್ಟೇ ಅಲ್ಲ ತಂದೆ, ತಾಯಿಯರಿಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು.  ಇಂದಿನ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಏನೆಲ್ಲಾ ಸಾಧಿಸಲು ಸಾಧ್ಯವಿದೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
     ನಗರದ ಬನ್ನಿಕಟ್ಟೆ ಬಳಿಯ ಗೌರಿಶಂಕರ ದೇವಸ್ಥಾನದ ಬಳಿಯಿಂದ ಬೆಳಿಗ್ಗೆ ಪ್ರಾರಂಭವಾದ ಜಾಗೃತಿ ನಡೆಗೆ ಗವಿಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಈಗಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪಿಡುಗುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಇದೆ.  ಆ ಅರಿವನ್ನು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ತಂದೆ, ತಾಯಿಗಳಿಗೆ ತಲುಪಿಸುವ ಜವಾಬ್ದಾರಿ ಅವರ ಮೇಲಿದೆ ಎಂದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ, ಬಾಲ್ಯ ವಿವಾಹ ವಿರುದ್ಧ ಏರ್ಪಡಿಸಲಾಗಿರುವ ಜಾಗೃತಿ ನಡಿಗೆ ಪ್ರಶಂಸನೀಯವಾಗಿದ್ದು, ಈ ಜಾಗೃತಿ ಸಂದೇಶ ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯ ಮತ್ತು ದೇಶಾದ್ಯಂತ ತಲುಪುವಂತಾಗಬೇಕು.  ಇದಕ್ಕೆ ಕೊಪ್ಪಳವೇ ಸ್ಫೂರ್ತಿಯಾಗಲಿ ಎಂದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್ ಅವರು ಮತನಾಡಿ, ಎಲ್ಲ ವಿದ್ಯಾರ್ಥಿಗಳು ಬಾಲ್ಯ ವಿವಾಹವನ್ನು ವಿರೋಧಿಸುವುದು ಮಾತ್ರವಲ್ಲದೆ, ಇಂತಹ ಪ್ರಕರಣ ನಡೆಯುವ ಬಗ್ಗೆ ಮಾಹಿತಿ ಸಿಕ್ಕಲಿ, ಮಕ್ಕಳ ಸಹಾಯವಾಣಿ ೧೦೯೮ ಕ್ಕೆ ಉಚಿತ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ತಪ್ಪಿಸಲು ಸಹಕರಿಸಬೇಕು ಎಂದರು.
     ಬಾಲ್ಯ ವಿವಾಹ ನಿರ್ಮೂಲನೆಗಾಗಿ ಆಯೋಜಿಸಲಾಗಿದ್ದ ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ನಗರದ ಹಲವಾರು ಶಾಲಾ ಕಾಲೇಜುಗಳ ಸುಮಾರು ೭೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಬಾಲ್ಯ ವಿವಾಹಕ್ಕೆ ಧಿಕ್ಕಾರ, ಬಾಲ್ಯ ವಿವಾಹ ಬೇಡವೆ ಬೇಡ ಮುಂತಾದ ಘೋಷಣೆಗಳನ್ನು ಹಾಕುತ್ತಾ ವಿದ್ಯಾರ್ಥಿಗಳು ಜಾಥಾದಲ್ಲಿ ಸಾಗಿದರು.  ನಗರದ ಗೌರಿಶಂಕರ ದೇವಸ್ಥಾನದ ಬಳಿಯಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ, ರಾಷ್ಟ್ರೀಯ ಹೆದ್ದಾರಿ, ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ, ಗವಿಮಠ ರಸ್ತೆ ಮೂಲಕ ಗವಿಮಠ ಆವರಣವದವರೆಗೆ ಸಾಗಿ ಬಂದಿತು.  ಯುನಿಸೆಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜಾಥಾಕ್ಕೆ ಸಹಕಾರ ನೀಡಿದವು.
Please follow and like us:
error

Leave a Reply

error: Content is protected !!