ಶಾಂತಿ-ಸೌಹಾರ್ದಯುತ ಗೌರಿ ಗಣೇಶ ಹಬ್ಬ ಆಚರಣೆಗೆ ಡಿ.ಸಿ. ರಮಣದೀಪ್ ಚೌಧರಿ ಮನವಿ.

ಕೊಪ್ಪಳ: ಸೆ. ೪ (ಕ ವಾ) ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌಧರಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
      ಇದೇ ಸೆ. ೧೭ ರಿಂದ ಗೌರಿ-ಗಣೇಶ ಹಬ್ಬದ ಆಚರಣೆ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಕೆರೆ-ಕಟ್ಟೆಗಳಲ್ಲಿ ನೀರಿನ ಅಭಾವವಿದೆ.  ವಿದ್ಯುತ್ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗುತ್ತಿದೆ. ಆದಷ್ಟು ಸಣ್ಣ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು.  ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಸಾಯನಿಕಯುಕ್ತ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬದಲಿಗೆ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು,  ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಪದ್ಧತಿಯಲ್ಲಿ ಒಂದೇ ಸೂರಿನಡಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.  ಆದಷ್ಟು ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.   ನಿಯಮಗಳಂತೆ ಮದ್ಯಮಾರಾಟ ನಿಷೇಧ ಜಾರಿಗೊಳಿಸಲಾಗುವುದು. ಈ ವರ್ಷ ಕೊಪ್ಪಳ ನಗರದಲ್ಲಿ ಒಂಭತ್ತನೆ ದಿನಗಳವರೆಗೆ ಪ್ರತಿಷ್ಠಾಪಿಸಲು ಅವಕಾಶ ನೀಡುವಂತೆ ವಿವಿಧ ಗಣೇಶ ಮಂಡಳಿಗಳು ಮನವಿ ಸಲ್ಲಿಸಿವೆ.  ಆದರೆ ಪೊಲೀಸ್ ಬಂದೋಬಸ್ತ್‌ಗೆ ಸಿಬ್ಬಂದಿ ನಿಯೋಜನೆಯಲ್ಲಿ ತೊಂದರೆ ಹಾಗೂ ಇನ್ನಿತರ ಕಾರಣಗಳಿಂದ ಅನುಮತಿ ನೀಡಲು ಕಷ್ಟಸಾಧ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೊಪ್ಪಳ ನಗರದಲ್ಲಿ ಐದನೇ ದಿನಕ್ಕೆ ಗಣೇಶ ಮೂರ್ತಿಗಳನ್ನು ವಿಸರ್ಜನೆಗೊಳಿಸಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು.  ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌಧರಿ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ,  ಬಂದೋಬಸ್ತ್ ಕಾರ್ಯಕ್ಕೆ ಪೊಲೀಸರ ನಿಯೋಜನೆಯಲ್ಲಿ ತೊಂದರೆ ಉಂಟಾಗುವುದರಿಂದ ಗಂಗಾವತಿ ಹಾಗು ಕೊಪ್ಪಳ ನಗರಗಳಲ್ಲಿ ಒಂಭತ್ತನೇ ದಿನಕ್ಕೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲು ಕಷ್ಟಸಾಧ್ಯವಾಗಿದೆ. ಹಬ್ಬ ಆಚರಣೆ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಬಂದೋಬಸ್ತ್ ಅನ್ನು ಸಮರ್ಪಕವಾಗಿ ಕೈಗೊಳ್ಳಲಾಗುವುದು. ಪ್ರತಿ ವರ್ಷದಂತೆ ಈ ವರ್ಷ ಕೊಪ್ಪಳ ನಗರದಲ್ಲಿ ಐದನೇ ದಿನಕ್ಕೆ ಗಣೇಶ ಮೂರ್ತಿಗಳನ್ನು ವಿಸರ್ಜನೆಗೊಳಿಸಿ, ಶಾಂತಿ ಹಾಗು ಸೌಹಾರ್ದಯುತ ಗಣೇಶ ಹಬ್ಬ ಆಚರಣೆಗೆ ಸಹಕರಿಸಬೇಕು.  ಅಗ್ನಿ ಅನಾಹುತಗಳಿಗೆ ಅವಕಾಶ ಇಲ್ಲದಂತೆ ಪೆಂಡಾಲ್‌ನಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣ್ ಕುಮಾರ್ ಜಿ.ಎಲ್. ಅವರು ಮಾತನಾಡಿ, ಭಕ್ತಿ-ಭಾವದಿಂದ ಹಾಗೂ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಬೇಕಾಗಿದ್ದು, ಆದರೆ, ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ  ಸಾರ್ವಜನಿಕರು ಸಭ್ಯತೆಯ ಎಲ್ಲೆಯನ್ನು ಮೀರಬಾರದು, ಇಂತಹ ವರ್ತನೆ ಭಕ್ತಿ-ಭಾವದ ಕಾರ್ಯಕ್ರಮಕ್ಕೆ ಶೋಭೆ ತರುವುದಿಲ್ಲ.  ಆಸ್ಪತ್ರೆಗಳು ಹಾಗೂ ಧಾರ್ಮಿಕ ಕೇಂದ್ರಗಳ ಎದುರುಗಡೆ ಪಟಾಕಿ ಹಚ್ಚುವುದನ್ನು ಅಲ್ಲದೆ ಭಾರಿ ಶಬ್ದ ಬರುವ ಸಿಡಿಮದ್ದು/ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ.  ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಮಂದಿರ/ಮಸೀದಿಗಳ ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಯಾರೂ ವರ್ತಿಸಬಾರದು.   ಗಣೇಶ ಮಂಡಳಿಗಳ ಮುಖಂಡರು ನೇತೃತ್ವ ವಹಿಸಿಕೊಂಡು, ಶಾಂತಿಯುತ ಹಬ್ಬ ಆಚರಣೆಗೆ ಸಹಕರಿಸಬೇಕು.  ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
      ಸಭೆಯಲ್ಲಿ ಭಾಗವಹಿಸಿದ್ದ ಅಪ್ಪಣ್ಣ ಪದಕಿ, ಮುದಕಪ್ಪ ಕವಲೂರು, ಶಿವಾನಂದ ಹೊದ್ಲೂರು, ವಿಜಯಕುಮಾರ್ ಕವಲೂರು, ವೀರಣ್ಣ ಹಂಚಿನಾಳ, ಮಂಜುನಾಥ ಗೊಂಡಬಾಳ, ಚನ್ನಬಸಪ್ಪ ಕೊಟ್ಯಾಳ, ಶಿವಕುಮಾರ ಕುಕನೂರ, ಹಾಲೇಶ್ ಕಂದಾರಿ ಸೇರಿದಂತೆ ಹಲವರು ಸೌಹಾರ್ದಯುತ ಗಣೇಶ ಹಬ್ಬ ಆಚರಣೆ ಕುರಿತಂತೆ ಸಲಹೆ ಸೂಚನೆ ನೀಡಿದರಲ್ಲದೆ, ಕೊಪ್ಪಳ ನಗರದಲ್ಲಿ ಒಂಭತ್ತು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಟಿ., ಸೇರಿದಂತೆ ಕೊಪ್ಪಳ ನಗರಸಭೆಯ ಸದಸ್ಯರುಗಳು, ವಿವಿಧ ತಾಲೂಕುಗಳ ಪೊಲೀಸ್ ಇಲಾಖೆಯ ಅಧಿಕಾರಿಗಳು, ತಾಲೂಕು ತಹಸಿಲ್ದಾರರು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು,  ಕೊಪ್ಪಳ ಹಾಗೂ ಗಂಗಾವತಿಯ ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Please follow and like us:
error