ಬರ : ಮಾಧ್ಯಮಗಳ ವರದಿಗೆ ತಕ್ಷಣ ಸ್ಪಂದಿಸಿ- ಸಿ.ಇ.ಓ ರಾಜಾರಾಂ

  ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ತಲೆದೋರಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು, ಕೂಲಿಕಾರ್ಮಿಕರಿಗೆ ಉದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ಬರುವ ವರದಿಗೆ ತಕ್ಷಣ ಸ್ಪಂದಿಸಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಸದ್ಯ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದೆ.  ಮುಂಗಾರು ಮಳೆ ಪ್ರಾರಂಭವಾಗುವವರೆಗೆ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳು ಅಧಿಕಾರಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿದ್ದು, ಈ ಅವಧಿಯಲ್ಲಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.  ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉದ್ಭವವಾದರೂ ಶೀಘ್ರ ಪರಿಹಾರಕ್ಕೆ ಸರ್ಕಾರ ಕಟ್ಟಾಜ್ಞೆ ಹೊರಡಿಸಿದೆ.  ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು.  ಇದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳು ಹಾಗೂ ಟಿ.ವಿ. ವಾಹಿನಿಗಳಲ್ಲಿ ಪ್ರಕಟವಾಗುವ ವರದಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಸಮಸ್ಯೆಗಳ ನಿವಾರಣೆಗೆ ಕೂಡಲೆ ಕ್ರಮ ಕೈಗೊಳ್ಳಬೇಕು.  ಕುಡಿಯುವ ನೀರಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ನೀರು ಒದಗಿಸುವ ನಿಟ್ಟಿನಲ್ಲಿ ಯಾವುದೇ ತೀಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.  ಒಟ್ಟಿನಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು.  ಎಲ್ಲ ಇಲಾಖೆ ಅಧಿಕಾರಿಗಳಿಗೆ ಕಚೇರಿಗೆ ಪತ್ರಿಕೆಗಳನ್ನು ಖರೀದಿಸಲು ಅವಕಾಶವಿದ್ದು, ಪ್ರತಿದಿನ ಬೆಳಿಗ್ಗೆ ೯ ಗಂಟೆಯ ಒಳಗಾಗಿ ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ಇಲಾಖೆಗಳಿಗೆ ಸಂಬಂಧಿತ ಯಾವುದೇ ವರದಿಯ ಬಗ್ಗೆ ಕೈಗೊಂಡ ಕ್ರಮದ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು, ಈ ಬಗ್ಗೆ ಸರ್ಕಾರವೂ ಸಹ ಸುತ್ತೋಲೆ ಹೊರಡಿಸಿದೆ.  ಇದಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮೊಬೈಲ್‌ನಲ್ಲಿ ಸಂಪರ್ಕಕ್ಕೆ ಸಿಗುತ್ತಿಲ್ಲ.  ಮೊಬೈಲ್ ಯಾವಾಗಲೂ ಸ್ವಿಚ್ ಆಫ್ ಆಗಿರುತ್ತದೆ ಎಂದು ಅನೇಕ ಜನಪ್ರತಿನಿಧಿಗಳು ದೂರು ನೀಡುವುದು ಸಾಮಾನ್ಯವಾಗಿದೆ.  ಅಧಿಕಾರಿಗಳ ಇಂತಹ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.  ಮುಂದೆ ಇಂತಹ ದೂರುಗಳು ಬಂದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ನಾಗರಜ್ ಬಿಲ್ಗಾರ್ ಅವರು ಮಾತನಾಡಿ ಸದ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯ ಸುಮಾರು ೧೪ ಕಾಮಗಾರಿಗಳ ಪೈಕಿ ಕೇವಲ ೫ ಮಾತ್ರ ಪೂರ್ಣಗೊಳ್ಳುವ ಹಂತದಲ್ಲಿದೆ.  ಇದರಲ್ಲಿ ಆನೆಗೊಂದಿ, ಉಳೇನೂರು, ಕನಕಗಿರಿ, ಕಾರಟಗಿ, ಶ್ರೀರಾಮನಗರ ಯೋಜನೆಗಳ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಡಿ ತಕ್ಷಣ ಆಯಾ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆಯನ್ನು ಪ್ರಾರಂಭಿಸಬೇಕು.  ಇನ್ನುಳಿದ ಯೋಜನೆಗಳನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.  ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮುರಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ೪೧೬ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ.  ಈಗಾಗಲೆ ೩೧೫ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ.  ಉಳಿದ ೧೦೧ ಗ್ರಾಮಗಳಲ್ಲಿ ಉದ್ಘವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.  ಗ್ರಾಮಗಳಲ್ಲಿನ ಕೈಪಂಪು ದುರಸ್ತಿ ಸೇರಿದಂತೆ ಮಿನಿ ನೀರು ಸರಬರಾಜು ಘಟಕಗಳ ತ್ವರಿತ ದುರಸ್ತಿ ಕಾರ್ಯಕ್ಕೆ ಸಂಚಾರಿ ದುರಸ್ತಿ ಘಟಕ ಕಾರ್ಯಾಚರಣೆ ನಡೆಸಲಾಗುತ್ತಿದೆ.  ಜಿಲ್ಲಾ ಮತ್ತು ತಾಲೂಕು ಮಟ್ಟದ ಸಹಾಯವಾಣಿಯಲ್ಲಿ ಸ್ವೀಕೃತವಾಗುತ್ತಿರುವ ಕುಡಿಯುವ ನೀರಿನ ದೂರುಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದರು.
  ಉದ್ಯೋಗಖಾತ್ರಿ ಯೋಜನೆಯಡಿ ಸದ್ಯ ಯಾವುದೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿರುವುದಿಲ್ಲ, ಬದಲಾಗಿ ಕಳೆದ ಸಾಲಿನ ಕ್ರಿಯಾ ಯೋಜನೆಯ ಅನುಮೋದಿತ ಕಾಮಗಾರಿಗಳ ಪೈಕಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.  ಇದರಡಿ ಈ ಯೋಜನೆಯಡಿ ಕೆಲಸ ಕೋರಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಜಿಲ್ಲೆಯ ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ವಿವರಿಸಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಉಪಕಾರ್ಯದರ್ಶಿ ಅನ್ನದಾನಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error