ಪಾಲಿಸಿದಾರರ ಆರೋಗ್ಯದ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ವಿಮಾ ಕಂಪನಿಗಳ ಹೊಣೆ-

ಗ್ರಾಹಕರ ವೇದಿಕೆ ತೀರ್ಪು
: ಪಾಲಿಸಿ ಮಾಡಿಸುವವರ ಉದ್ಯೋಗ, ವಾರ್ಷಿಕ ಆದಾಯ ಮತ್ತು ಅವರ ಆರೋಗ್ಯದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವ ಹೊಣೆ ಆಯಾ ವಿಮಾ ಕಂಪನಿಗಳಿಗೆ ಸೇರಿದ್ದಾಗಿದೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
  ರಿಲಾಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಸಿಂಗನಾಳ ಗ್ರಾಮದ ಕರಿಯಪ್ಪ ತಂದೆ ಹನುಮಂತಪ್ಪ ಬೋವಿ ಅವರ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಗ್ರಾಹಕರ ವೇದಿಕೆ ಈ ತೀರ್ಪು ನೀಡಿದೆ.
  ಸಿಂಗನಾಳ ಗ್ರಾಮದ ಹುಲಿಗೆಮ್ಮ ಗಂಡ ಹನುಮಂತಪ್ಪ ಬೋವಿ ಅವರು ರಿಲಾಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಕೊಪ್ಪಳ ಶಾಖೆಯಲ್ಲಿ ೧೦ ಲಕ್ಷ ರೂ. ಮೊತ್ತದ ೨೦ ವರ್ಷ ಅವಧಿಯ ಪಾಲಿಸಿಯೊಂದನ್ನು ಪಡೆದು, ಮೊದಲನೆ ಪ್ರೀಮಿಯಂ ಮೊತ್ತ ರೂ. ೫೦೦೦೦ ಗಳನ್ನು ೨೦೧೦ ರ ಮಾ. ೩೧ ರಂದು ಪಾವತಿಸಿದ್ದರು.  ಪಾಲಿಸಿದಾರಳಾಗಿದ್ದ ಹುಲಿಗೆಮ್ಮ ೨೦೧೦ ರ ಜುಲೈ ೨೬ ರಂದು ಆಕಸ್ಮಿಕವಾಗಿ ಮೃತಪಟ್ಟಿದ್ದರು.  ನಂತರ ಪಾಲಿಸಿಯ ನಾಮಿನಿಯಾಗಿದ್ದ, ಹುಲಿಗೆಮ್ಮ ಅವರ ಮಗ ಕರಿಯಪ್ಪ, ವಿಮಾ ಕಂಪನಿಗೆ ಕ್ಲೇಂ ಅರ್ಜಿ ಸಲ್ಲಿಸಿ, ಪಾಲಿಸಿಯ ಮೊತ್ತ ಪಾವತಿಸುವಂತೆ ಕೋರಿದರು.  ಆದರೆ ವಿಮಾ ಕಂಪನಿಯು, ಪಾಲಿಸಿದಾರರು ಟಿ.ಬಿ. ರೋಗದಿಂದ ಬಳಲುತ್ತಿದ್ದು, ಅದನ್ನು ಮರೆಮಾಚಿ ಪಾಲಿಸಿ ಪಡೆದಿರುವುದರಿಂದ, ಪಾಲಿಸಿಯ ಮೊತ್ತ ಪಾವತಿಸಲು ಬರುವುದಿಲ್ಲ ಎಂದು ಕ್ಲೇಂ ಅರ್ಜಿಯನ್ನು ತಿರಸ್ಕರಿಸಿ, ಕೇವಲ ಫಂಡ್ ವ್ಯಾಲ್ಯೂ ರೂ. ೨೨೮೪೨ ಗಳನ್ನು ನಾಮಿನಿದಾರರ ಖಾತೆಗೆ ಜಮಾ ಮಾಡಿದೆ.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರಿಯಪ್ಪ, ತನ್ನ ತಾಯಿ ಪಾಲಿಸಿ ಮಾಡಿಸುವಾಗ ದೈಹಿಕ ಮತ್ತು ಮಾನಿಸಿಕವಾಗಿ ಆರೋಗ್ಯವಾಗಿದ್ದರು, ಕಂಪನಿಯು ವಿನಾಕಾರಣ ಪಾಲಿಸಿಯ ಪೂರ್ಣ ಮೊತ್ತ ೧೦ ಲಕ್ಷ ಗಳನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿದೆ, ಇದಕ್ಕಾಗಿ ಮಾನಸಿಕ ಮತ್ತು ದೈಹಿಕ ಹಿಂಸೆಗೆ ೧ ಲಕ್ಷ ರೂ., ಹಾಗೂ ಸೇವಾ ನ್ಯೂನತೆ ಪರಿಹಾರ ರೂ. ೫೦೦೦೦ ಮತ್ತು ಪ್ರಕರಣದ ಖರ್ಚು ೧೦೦೦೦ ರೂ. ನೀಡುವಂತೆ ವಿಮಾ ಕಂಪನಿಗೆ ಆದೇಶಿಸಬೇಕು ಎಂದು ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯ ಶಿವರೆಡ್ಡಿ ಬಿ. ಗೌಡ ಅವರು ದಾಖಲೆಗಳನ್ನು ಪರಿಶೀಲಿಸಿ, ವಿಮಾ ಕಂಪನಿಯು ಪಾಲಿಸಿ ಮಾಡುವ ಸಮಯದಲ್ಲಿ, ಪಾಲಿಸಿದಾರರ ಉದ್ಯೋಗ, ಅವರ ವಾರ್ಷಿಕ ಆದಾಯ ಮತ್ತು ಅವರ ಆರೋಗ್ಯದ ಬಗ್ಗೆ ಖಾತ್ರಿ ಪಡೆಸಿಕೊಂಡು ಪಾಲಿಸಿಯನ್ನು ನೀಡಬೇಕೆ ಹೊರತು, ಪಾಲಿಸಿದಾರರ ಮರಣದ ನಂತರ ಅವರ ನಾಮಿನಿದಾರರಿಗೆ ಪಾಲಿಸಿಯ ಹಣವನ್ನು ಕ್ಲೇಂ ಮಾಡುವ ಸಮಯದಲ್ಲಿ, ಅದರ ಬಗ್ಗೆ ತನಿಖೆ ನಡೆಸಿ, ಕ್ಲೇಂ ಅರ್ಜಿ ತಿರಸ್ಕರಿಸಲು ಬರುವುದಿಲ್ಲ.  ಆದ್ದರಿಂದ ವಿಮಾ ಕಂಪನಿಯು ಪಾಲಿಸಿದಾರರ ನಾಮಿನಿಯವರಿಗೆ ಪಾಲಿಸಿಯ ಪೂರ್ಣ ಮೊತ್ತ ೧೦ ಲಕ್ಷಗಳನ್ನು ಪಾವತಿಸಬೇಕು.  ಈಗಾಗಲೆ ಫಂಡ್ ವ್ಯಾಲ್ಯು ರೂ. ೨೨೮೪೨ ಗಳನ್ನು ನಾಮಿನಿದಾರರಿಗೆ ಪಾವತಿಸಿರುವುದರಿಂದ, ಉಳಿಕೆ ಮೊತ್ತ ರೂ. ೯೭೭೧೫೮ ಗಳನ್ನು ೯೦ ದಿನಗಳ ಒಳಗಾಗಿ ವಾರ್ಷಿಕ ಶೇ. ೧೦ ರ ಬಡ್ಡಿಯೊಂದಿಗೆ ಪಾವತಿಸಬೇಕು.  ಅಲ್ಲದೆ ಪ್ರಕರಣದ ಖರ್ಚು ರೂ. ೩೦೦೦ ಗಳನ್ನು ಸಹ ಪಾವತಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

Related posts

Leave a Comment