ಪ್ರೌಢ ಶಾಲಾ ಕೊಠಡಿ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ,ಆ.೧೭: ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ ಪ್ರೌಢ ಶಾಲಾ ವಿಭಾಗದ ೧೦ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ದಿ.೧೫ ರ ಗುರುವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸರಕಾರದ ಆರ್.ಎಂ.ಎಸ್.ಎ. ಯೋಜನೆಯಡಿಯಲ್ಲಿ ಮಂಜೂರಾದ ಸರಕಾರಿ ಪ್ರೌಢ ಶಾಲೆಯ ೧೦ ಕೊಠಡಿಯ ಕಾಮಗಾರಿಯು ಅಂದಾಜು ೫೦ ಲಕ್ಷ ರೂ. ಅನುದಾನದ ಈ ಕಾಮಗಾರಿಯು ಜಂಪನಾ ಕಂಪನಿ ಏಜೆನ್ಸಿಯವರು ಶಾಲಾ ಕೊಠಡಿಗಳ ಕಾಮಗಾರಿ ನಿರ್ಮಾಣ ಮಾಡಲಿದ್ದು, ಸದರಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡಲು ಸರಕಾರ ಹೆಚ್ಚಿನ ಆದ್ಯತೆ ನೀಡಿದೆ. ಅದರಂತೆ ಎಲ್ಲರೂ ಶೈಕ್ಷಣಿಕ ಅಭಿವೃದ್ದಿಗಾಗಿ ಅತ್ಯಂತ ಮುತುವರ್ಜಿವಹಿಸಬೇಕು. ಎಲ್ಲಾ ಕ್ಷೇತ್ರದ ಅಭಿವೃದ್ದಿ ಶಿಕ್ಷಣ ರಂಗದಲ್ಲಿ ಅಡಗಿದೆ. ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಾಗಿದೆ ಎಂದು ಹೇಳಿ ಸಂಬಂಧಿಸಿದ ಏಜೆನ್ಸಿಯವರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಸೂಚನೆ ನೀಡಿ ತ್ವರೀತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಜಿ.ಪಂ.ಸದಸ್ಯರಾದ ನಾಗನಗೌಡ ಮಾಲಿ ಪಾಟೀಲ್, ಈರಣ್ಣ ಕುಡಗುಂಟಿ, ಮಾಜಿ ಸದಸ್ಯ ಪ್ರಸನ್ನ ಗಡಾದ್, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಪ್ರಾಚಾರ್ಯ ಎಸ್.ಬಿ.ರಾಜೂರು, ಉಪಪ್ರಾಚಾರ್ಯ ಎ.ಕೆ.ತುಪ್ಪದ್, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ್ ಸೇರಿದಂತೆ ಶಾಲೆಯ ಸಹಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply