ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ೧೦ ಸಾವಿರ ಕೋಟಿ – ಸಿ.ಎಂ. ಸಿದ್ದರಾಮಯ್ಯ

 ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ರೂ. ಅನುದಾನ ಮೀಸಲಿಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
  ಯಲಬುರ್ಗಾ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ೧೦೦ ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಉದ್ಘಾಟನೆ, ಸ್ತ್ರೀಶಕ್ತಿ ಭವನ ಹಾಗೂ ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಯ ೩ನೇ ಹಂತದ ಕೊಪ್ಪಳ ಏತ ನೀರಾವರಿ ಯೋಜನೆಯ ಸೂಕ್ಷ್ಮ ವಿತರಣಾ ಜಾಲದ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸದ್ಯ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಟ್ಟು ೫೦ ಸಾವಿರ ಕೋಟಿ ರೂ.ಗಳ ಅನುದಾನದ ಅಗತ್ಯವಿದ್ದು, ಇದಕ್ಕಾಗಿ ಪ್ರತಿ ವರ್ಷ ೧೦ ಸಾವಿರ ಕೋಟಿ ರೂ.ಗಳಂತೆ, ಐದು ವರ್ಷಗಳಲ್ಲಿ ೫೦ ಸಾವಿರ ಕೋಟಿ ರೂ.ಗಳ ಅನುದಾನವನ್ನು ನೀರಾವರಿ ಯೋಜನೆಗಳಿಗೆ ಮೀಸಲಿಡಲು ಸರ್ಕಾರ ಬದ್ಧವಾಗಿದೆ.   ಪ್ರಸಕ್ತ ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ ೯೮೧೩ ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.  ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಹಂಚಿಕೆ ಮಾಡಲಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ, ಬಾಗಲಕೋಟೆ, ಕೊಪ್ಪಳ ಮತ್ತು ಗದಗ ಜಿಲ್ಲೆಯ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಇದೀಗ ೩ನೇ ಹಂತದ ಕಾಮಗಾರಿಗೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.  ಇದರಿಂದಾಗಿ ಒಟ್ಟು ೨. ೮೫ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಲಭ್ಯವಾಗಲಿದೆ.  ನಮ್ಮ ಪಾಲಿನ ನೀರನ್ನು ಬಳಸಿಕೊಂಡು, ರೈತರ ಜಮೀನಿಗೆ ಕೊಡುವುದು ಸರ್ಕಾರದ ಉದ್ದೇಶವಾಗಿದೆ.  ರೈತರಿಗೆ ಸದ್ಯ ವ್ಯವಸಾಯದಿಂದ ಲಾಭವಿಲ್ಲ ಎನ್ನುವ ಅಭಿಪ್ರಾಯವಿದ್ದು, ಕೃಷಿ ಲಾಭದಾಯಕವಾಗಬೇಕೆಂದರೆ, ಕಡಿಮೆ ಜಮೀನಿನಲ್ಲಿ ಹೆಚ್ಚಿನ ಉತ್ಪಾದನೆ ಆಗಬೇಕಿದೆ.  ಹೀಗಾದಲ್ಲಿ ಮಾತ್ರ ರೈತರು ಆರ್ಥಿಕವಾಗಿ ಸಬಲಾರಾಗಲು ಸಾಧ್ಯ.  ಕೊಪ್ಪಳ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಎಲ್ಲ ರೀತಿಯಿಂದಲೂ ಸಹಕಾರ ನೀಡಲಿದೆ.  ಯಲಬುರ್ಗ ಕ್ಷೇತ್ರದಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗಾಗಿ ೫೦ ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದರು.
ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ಬಡವರ ಆರೋಗ್ಯ ರಕ್ಷಣೆಯಾಗುವುದು ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಆಗಿರುವುದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಬೇಕಿದೆ.  ಶ್ರೀಮಂತರು ಹೆಚ್ಚಿನ ಹಣ ಖರ್ಚು ಮಾಡಿ ಸ್ಪಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ.  ಆದರೆ ರೋಗಗಳು ಬಡವರು, ಶ್ರೀಮಂತರು ಎನ್ನುವ ಭೇದ ಭಾವವಿಲ್ಲದೆ ಬರುವುದರಿಂದ, ಬಡವರಿಗೂ ಸಹ ಉತ್ತಮ ಆರೋಗ್ಯ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರಕುವಂತೆ ಮಾಡಲು, ಎಲ್ಲ ಜಿಲ್ಲೆಗಳಲ್ಲಿಯೂ ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ ಮಾಡಬೇಕು ಎಂದು ಸರ್ಕಾರ ನಿರ್ಧಾರ ಕೈಗೊಂಡಿದೆ.  ಈಗಾಗಲೆ ಪ್ರತಿ ತಾಲೂಕಿನಲ್ಲಿಯೂ ಡಯಾಲಿಸಿಸ್ ಕೇಂದ್ರ ಪ್ರಾರಂಭ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.  ಸಂವಿಧಾನದ ೩೭೧ (ಜೆ) ಕಲಂ ತಿದ್ದುಪಡಿ ಸೌಲಭ್ಯವನ್ನು ಜಾರಿಗೊಳಿಸುವವರೆಗೂ ಯಾವುದೇ ಹುದ್ದೆ ತುಂಬಬಾರದು ಎಂದು ನಿರ್ಧಾರ ಕೈಗೊಂಡಿದ್ದರಿಂದ, ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು.  ಇದೀಗ ಈ ಸೌಲಭ್ಯ ಜಾರಿಯಾಗಿರುವುದರಿಂದ ಶೀಘ್ರದಲ್ಲಿಯೇ ವೈದ್ಯರ ನೇಮಕಾತಿಗೆ ಚಾಲನೆ ನೀಡಿ, ವೈದ್ಯರ ಕೊರತೆಯನ್ನು ನಿವಾರಿಸಲಾಗುವುದು.  ಯಲಬುರ್ಗಾದ ೧೦೦ ಹಾಸಿಗೆಗಳ ಆಸ್ಪತ್ರೆಗೆ ೧೦ ವೈದ್ಯರ ಅಗತ್ಯವಿದ್ದು, ವೈದ್ಯರ ನೇಮಕಾತಿ ಸಂದರ್ಭದಲ್ಲಿ ಭರ್ತಿ ಮಾಡಲಾಗುವುದು ಎಂದರು.
ಸಂವಿಧಾನದ ಆಶಯದಂತೆಯೇ ಶಾದಿಭಾಗ್ಯ : ನಿರ್ಲಕ್ಷ್ಯ ಮತ್ತು ತುಳಿತಕ್ಕೊಳಗಾದವರಿಗೆ ವಿಶೇಷ ಆದ್ಯತೆ ನೀಡಬೇಕೆಂದು ಸಂವಿಧಾನದ ೧೬ ಮತ್ತು ೧೭ ನೇ ವಿಧಿಯಲ್ಲಿ ತಿಳಿಸಲಾಗಿದ್ದು,  ಸಂವಿಧಾನದ ಆಶಯದಂತೆಯೇ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳಿಗೆ ಶಾದಿಭಾಗ್ಯ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದಂತೆ, ಜಾರಿಗೆ ತರಲಾಗಿದೆ.  ಅಮೆರಿಕಾ ದೇಶದಲ್ಲಿಯೂ ಸಹ ವರ್ಣಬೇಧ ನೀತಿಯಿಂದ ತುಳಿತಕ್ಕೊಳಗಾದವರಿಗೆ ವಿಶೇಷ ಆದ್ಯತೆ ನೀಡಲು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆಯಾದ್ದರಿಂದ, ಶಾದಿಭಾಗ್ಯ ಯೋಜನೆ ಜಾರಿಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಶಾದಿಭಾಗ್ಯ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು.  ಹೈದ್ರಾಬಾದ್-ಕರ್ನಾಟಕ ಪ್ರದೇಶ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಸರ್ಕಾರಿ ಹುದ್ದೆಗಳ ನೇಮಕಾತಿ ಸಂದರ್ಭಗಳಲ್ಲಿ ಈ ಭಾಗದ ಅಭ್ಯರ್ಥಿಗಳು ಹೆಚ್ಚು ಅವಕಾಶಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ.  ಇದೀಗ ಹೈ-ಕ ವಿಶೇಷ ಸ್ಥಾನಮಾನದ ಸೌಲಭ್ಯ ಲಭ್ಯವಾಗಲಿದ್ದು, ಈ ಭಾಗದ ಯುವಕರಿಗೆ ನೇಮಕಾತಿಯಲ್ಲಿ ಮೀಸಲಾತಿ ದೊರೆತು, ಅಸಮತೋಲನ ನಿವಾರಣೆಯಾಗಲಿದೆ.  ಈ ಭಾಗದ ಜನರಲ್ಲಿ ಸಾಮಾಜಿಕ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.  

ಅನ್ನಭಾಗ್ಯಕ್ಕೆ ೪೨೦೦ ಕೋಟಿ ರೂ. : ಬಡವರು ಸ್ವಾಭಿಮಾನದಿಂದ ಬಾಳಲು ಕೆ.ಜಿ.ಗೆ ಕೇವಲ ೧ ರೂ. ದರದಲ್ಲಿ ಅಕ್ಕಿಯನ್ನು ನೀಡುವ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯನ್ನು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿಗೆ ತರಲಾಯಿತು.  ಇದಕ್ಕಾಗಿ ಸರ್ಕಾರ ೪೨೦೦ ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಅದೇ ರೀತಿ ಹಾಲು ಉತ್ಪಾದಕರಿಗೆ ಸಹಾಯಧನ ನೀಡಲು ೮೧೫ ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ.  ವಸತಿ ಯೋಜನೆಯಲ್ಲಿ, ಪ್ರತಿ ಮನೆಯ ವೆಚ್ಚವನ್ನು ೭೦ ಸಾವಿರದಿಂದ ೧. ೨೦ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.  ಅವಿವಾಹಿತ ಮಹಿಳೆ ಮತ್ತು ವಿಧವೆಯರಿಗೆ ೫೦೦ ರೂ. ಮಾಸಾಶನ ನೀಡುವಂತಹ ಮನಸ್ವಿನಿ ಯೋಜನೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ೫೦೦ ರೂ. ಮಾಸಾಶನ ನೀಡುವಂತಹ ಮೈತ್ರಿ ಯೋಜನೆಯನ್ನು ಈಗಾಗಲೆ ಸರ್ಕಾರ ಜಾರಿಗೊಳಿಸಿದೆ.  ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರೆಯುವಂತೆ ಮಾಡಲು ಕೃಷಿ ಬೆಲೆ ಆಯೋಗ ರಚನೆ ಮಾಡಲಾಗುತ್ತಿದೆ.  ಒಟ್ಟಾರೆ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ೧೬೯ ಭರವಸೆಗಳ ಪೈಕಿ ಮೊದಲನೆ ವರ್ಷದಲ್ಲಿಯೇ ಈಗಾಗಲೆ ೬೫ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ.  ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯವನ್ನು ಇಡೀ ದೇಶದಲ್ಲಿಯೇ ಮೊದಲನೆ ಸ್ಥಾನಕ್ಕೆ ಕೊಂಡೊಯ್ಯಬೇಕು ಎನ್ನುವ ಬಯಕೆ ನಮ್ಮ ಸರ್ಕಾರದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.  ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಬಡ ಮಹಿಳಾ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಣೆ ಮಾಡಿದರು.

  ಪ್ರಾಸ್ತಾವಿಕವಾಗಿ ಮಾತನಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು, ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.   ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಕಾನೂನು ಜಾರಿಯಾಗಬೇಕಿದೆ.  ಇನ್ನು ಆರು ತಿಂಗಳಲ್ಲಿ ಈ ಕಾನೂನು ಜಾರಿಯಾಗುವ ಸಾಧ್ಯತೆಗಳಿದ್ದು, ಇದರಿಂದ ವೈದ್ಯರ ಕೊರತೆ ನಿವಾರಣೆಯಾಗಲಿದೆ.  ಯಲಬುರ್ಗಾ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ೫ ಕೋಟಿ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ.  ಸಂವಿಧಾನದ ೩೭೧ ನೇ ಜೆ. ತಿದ್ದುಪಡಿಯಿಂದ ಈ ಭಾಗದಲ್ಲಿ ಸುವರ್ಣಯುಗ ಪ್ರಾರಂಭವಾಗಲಿದೆ.  ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿ ಇನ್ನು ಆರು ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಅಲ್ಲದೆ ಭಾನಾಪುರ-ಬಾದಾಮಿ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.  ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಸುಮಾರು ೧೩೦ ಗ್ರಾಮಗಳಿಗೆ ಆಲಮಟ್ಟಿ ಜಲಾಶಯದಿಂದ ಶುದ್ಧ ಕುಡಿಯುವ ನೀರು ಒದಗಿಸುವ ಸುಮಾರು ೨೦೦ ಕೋಟಿ ರೂ. ಯೋಜನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಲಿದೆ.  ಒಟ್ಟಾರೆ ಯಲಬುರ್ಗಾವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದರು.
  ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಮಾತನಾಡಿ, ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ನೇ ಜೆ ಕಲಂಗೆ ತಿದ್ದುಪಡಿ ತರುವ ಮೂಲಕ ಈ ಭಾಗ್ಯದ ಜನರಿಗೆ ಭಾಗ್ಯದ ಬಾಗಿಲು ತೆರೆದಂತೆ ಆಗಿದೆ.  ಇದರಿಂದಾಗಿ ಈ ಭಾಗದ ಜನರ ಸುಮಾರು ಎರಡು ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.  ದೇಶದ ವಿವಿಧ ರಾಜ್ಯಗಳಲ್ಲಿ ವಿಶೇಷ ಸ್ಥಾನಮಾನಕ್ಕಾಗಿ ಇರುವ ನಿಯಮಗಳಲ್ಲಿ ಹೈ-ಕ ಭಾಗದ ೩೭೧ನೇ ಜೆ. ತಿದ್ದುಪಡಿ ಅತ್ಯುತ್ತಮ, ಅತ್ಯಂತ ಜನಪರ ಮತ್ತು ಪರಿಪಕ್ವವಾದ ನಿಯಮಾವಳಿಗಳನ್ನು ಹೊಂದಿದೆ.  ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಸುಮಾರು ೧ ಲಕ್ಷ ಶೌಚಾಲಯವನ್ನು ನಿರ್ಮಿಸುವ ಗುರಿಯನ್ನು ಹೊಂದಿ, ಅಭಿಯಾನವನ್ನು ಪ್ರಾರಂಭಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಹೊಸ ತಾಲೂಕುಗಳ ರಚನೆಯ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ  ಎಂದರು.
Please follow and like us:
error