ಲೋಕಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ

 ವಾರ್ತಾ ಇಲಾಖೆ, ಕೊಪ್ಪಳ ಇವರಿಂದ ಮಾಧ್ಯಮದವರಿಗಾಗಿ ತಯಾರಿಸಲಾದ ಕೊಪ್ಪಳ ಲೋಕಸಭೆ ಕ್ಷೇತ್ರದ ೧೯೫೨ ರಿಂದ ೨೦೦೯ ರವರೆಗಿನ ಚುನಾವಣೆಗಳ ವಿವರವುಳ್ಳ ಚುನಾವಣೆ ಕೈಪಿಡಿಯನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ಬಿಡುಗಡೆಗೊಳಿಸಿದರು.
  ದೇಶದಲ್ಲಿ ಮೊದಲ ಬಾರಿಗೆ ೧೯೫೨ ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ.  ಬದಲಿಗೆ ಕುಷ್ಟಗಿ ಲೋಕಸಭೆ ಕ್ಷೇತ್ರ ಅಸ್ತಿತ್ವದಲ್ಲಿ ಇತ್ತು.  ೧೯೫೭ ರಲ್ಲಿ ದೇಶದಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು.  ೧೯೫೨ ರಿಂದ ಮೊದಲುಗೊಂಡು ೨೦೦೯ ರವರೆಗೆ ದೇಶದಲ್ಲಿ ಒಟ್ಟು ೧೫ ಬಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ಜರುಗಿವೆ.  ೧೯೫೨ ರಿಂದ ಈ ವರೆಗಿನ ಎಲ್ಲ ಲೋಕಸಭೆ ಚುನಾವಣೆಗಳಲ್ಲಿನ ಮತದಾರರ ಸಂಖ್ಯೆ, ಮತ ಚಲಾಯಿಸಿದ ಒಟ್ಟು ಮತದಾರರ ಸಂಖ್ಯೆ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷ, ಆಯ್ಕೆಯಾದ ಅಭ್ಯರ್ಥಿಗಳು, ಪಡೆದುಕೊಂಡ ಮತಗಳು, ಲೋಕಸಭಾ ವ್ಯಾಪ್ತಿಯಲ್ಲಿ ಬರುವ ವಿಧಾನಸಭೆ ಕ್ಷೇತ್ರಗಳ ನಕ್ಷೆಗಳು ಹೀಗೆ ಚುನಾವಣೆಗಳ ಸಮಗ್ರ ವಿವರಗಳು ಈ ಚುನಾವಣೆ ಕೈಪಿಡಿಯಲ್ಲಿವೆ.  ಕೈಪಿಡಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು, ಲೋಕಸಭಾ ಕ್ಷೇತ್ರದ ಚುನಾವಣೆಗಳ ಹಿನ್ನೋಟದ ವಿವರಗಳ ಅವಲೋಕನ ನಡೆಸಿ, ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಿಸಿರುವ ಈ ಕೈಪಿಡಿಯು ನಿಜಕ್ಕೂ ಸಂಗ್ರಹಯೋಗ್ಯ ಕೈಪಿಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  
  ಕೊಪ್ಪಳ ಲೋಕಸಭೆ ಚುನಾವಣೆ ಕೈಪಿಡಿಯನ್ನು ಜಿಲ್ಲೆಯ ಸಮರ್ಥವಾಣಿ ಕನ್ನಡ ದಿನಪತ್ರಿಕೆಯವರು ಅಚ್ಚುಕಟ್ಟಾಗಿ ಮುದ್ರಿಸಿಕೊಟ್ಟಿದ್ದಕ್ಕಾಗಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಅವರು ಪತ್ರಿಕೆಯ ಸಂಪಾದಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Related posts

Leave a Comment